ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಸಾಹಿತ್ಯಗಳು ಮುಖ್ಯವಾಹಿನಿಗೆ ಬರಲಿ: ಲಿಂಬಾಳೆ

Update: 2016-12-24 06:59 GMT

ಮಂಗಳೂರು, ಡಿ.24: ಮಾನವೀಯತೆಗೆ ಆದ್ಯತೆ ನೀಡುವಂತಹ ಸಾಹಿತ್ಯವು ದಲಿತ, ಹಿಂದುವಳಿದ ವರ್ಗ, ಆದಿವಾಸಿ, ಮುಸ್ಲಿಮ್, ಕ್ರಿಶ್ಚಿಯನ್ ಮತ್ತು ಮಹಿಳಾ ವರ್ಗಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಬರಬೇಕಾಗಿದೆ ಎಂದು ಮರಾಠಿ ಸಾಹಿತಿ ಶರಣಕುಮಾರ್ ಲಿಂಬಾಳೆ ಹೇಳಿದರು.

‘ಅಭಿಮತ ಮಂಗಳೂರು’ ವತಿಯಿಂದ ‘ಸಮತೆ ಎಂಬುದು ಅರಿವು’ ಘೋಷಣೆಯಡಿ ನಗರದ ಬಜ್ಜೋಡಿಯ ಶಾಂತಿಕಿರಣದಲ್ಲಿ ‘ಜನನುಡಿ -2016’ ಅನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ದೇಶ ಸಾಹಿತ್ಯ ಕ್ಷೇತ್ರದಲ್ಲಿ ಮುಖ್ಯ ವಾಹಿನಿಯ ಸಾಹಿತ್ಯ ಪ್ರಕಾರಗಳಲ್ಲಿ ಮಾನವೀಯ ವೌಲ್ಯಗಳಿಗೆ ಮಹತ್ವ ನೀಡದೆ ವರ್ಣ ವ್ಯವಸ್ಥೆ, ಜಾತಿ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ಕೃತಿಗಳೇ ಹೆಚ್ಚು ಬಂದಿವೆ. ಉದಾಹರಣೆಗೆ ರಾಮಾಯಣದಲ್ಲಿ ಬೇಡ ಜನಾಂಗದ ಶಂಭೂಕನನ್ನು ಕೊಲ್ಲುವ ಘಟನೆಯಿದೆ. ಭಗವದ್ಗೀತೆಯು ವರ್ಣ ವ್ಯವಸ್ಥೆಯಲ್ಲಿ ಬ್ರಾಹ್ಮಣರು ಶ್ರೇಷ್ಠ ಎನ್ನುವುದನ್ನು ಪ್ರತಿಪಾದಿಸುತ್ತದೆ. ಇಂತಹ ಸಾಹಿತ್ಯ ಕೃತಿಗಳನ್ನು ನಮಗೆ ಆದರ್ಶವೆನ್ನಲು ಸಾಧ್ಯವಿಲ್ಲ. ಸಮಾನತೆ, ಮಾನವೀಯ ವೌಲ್ಯಗಳನ್ನು ಎತ್ತಿ ಹಿಡಿಯುವ ಸಾಹಿತ್ಯ ಕೃತಿಗಳು ಮುಖ್ಯವಾಹಿನಿಗಳಲ್ಲಿ ಹೆಚ್ಚು ಹೆಚ್ಚು ಬರಬೇಕಾಗಿದೆ. ಈ ನಿಟ್ಟನಲ್ಲಿ ಜನನುಡಿ ಒಂದು ಉತ್ತಮ ಪ್ರಯತ್ನ ಎಂದರು.

ಅಂಬೇಡ್ಕರ್‌ರ ಹೋರಾಟದ ಫಲವಾಗಿ ನಮಗೆ ರಾಜಕೀಯ ಸ್ವಾತಂತ್ರ ದೊರಕಿದೆ. ಆದರೆ ನಮ್ಮ ದೇಶದಲ್ಲಿ ಬಹು ಸಂಖ್ಯಾತ ಜನರಿಗೆ ಇನ್ನೂ ಸಾಮಾಜಿಕ ಸ್ವಾತಂತ್ರ ದೊರೆತಿಲ್ಲ. ಈ ನಿಟ್ಟಿನಲ್ಲಿ ಅಂಬೇಡ್ಕರ್‌ರ ಹೋರಾಟ ಮುಂದುವರಿಯಬೇಕಾಗಿದೆ ಎಂದವರು ನುಡಿದರು.

ಡಾ.ವಿಜಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಜಿ ಸಚಿವ ಬಿ.ಎ.ಮೊಹಿದಿನ್, ಡಾ.ನಾಗಪ್ಪ ಗೌಡ, ಚಿತ್ರನಟ ಚೇತನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News