×
Ad

ಎಲ್‌ಪಿಜಿ ಸಿಲಿಂಡರ್‌ಗೆ 3,000 ರೂ.ತೆರುತ್ತಿರುವ ಮಣಿಪುರಿಗಳು!

Update: 2016-12-24 14:18 IST
ಸಾಂದರ್ಭಿಕ ಚಿತ್ರ

ಇಂಫಾಲ್,ಡಿ.24: ನಾಗಾ ನೇತೃತ್ವದ ಆರ್ಥಿಕ ದಿಗ್ಬಂಧನ 50 ದಿನಗಳು ಕಳೆದರೂ ಇನ್ನೂ ತೆರವಾಗಿಲ್ಲ. ಇದು ಮಣಿಪುರದಲ್ಲಿ ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ತ ಗೊಳಿಸಿದೆ. ರಾಜಧಾನಿ ಇಂಫಾಲ್ ಸೇರಬೇಕಾಗಿದ್ದ ಸರಕುಗಳನ್ನು ಹೊತ್ತ ಲಾರಿಗಳು ಇಂಫಾಲ್ ಕಣಿವೆಯ ಎರಡು ಜೀವನಾಡಿಗಳಾಗಿರುವ ರಾ.ಹೆ.37 ಮತ್ತು ರಾ.ಹೆ.2ರಲ್ಲೇ ಬಾಕಿಯಾಗಿವೆ. ರಾಜ್ಯದಲ್ಲಿ ಅಗತ್ಯವಸ್ತುಗಳ ಬೆಲೆಗಳು ಮುಗಿಲಿಗೇರಿವೆ. ಒಂದು ಲೀಟರ್ ಪೆಟ್ರೋಲ್ 300 ರೂ.ಗೂ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಒಂದು ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗೆ ಮಣಿಪುರಿಗಳು 3,000 ರೂ.ತೆರುತ್ತಿದ್ದಾರೆ. ಜನಾಂಗೀಯ ದ್ವೇಷಗಳು ಘರ್ಷಣೆಗಳಿಗೆ ಕಾರಣವಾಗುತ್ತಿವೆ. ಕೇಂದ್ರ ಸಹಾಯಕ ಗೃಹಸಚಿವ ಕಿರಣ್ ರಿಜಿಜು ಅವರು ನಿನ್ನೆ ಇಲ್ಲಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.

ರಾಜ್ಯದಲ್ಲಿ ಈ ಪರಿಯ ಹಿಂಸಾಚಾರಕ್ಕೆ ಕಾರಣಗಳಾದರೂ ಏನು? ಇಲ್ಲಿದೆ ವಿಶ್ಲೇಷಣೆ...

ನಾಗಾಗಳು-ಮೀಟಿಗಳು ಮತ್ತು ನಾಗಾಗಳು-ಕುಕಿಗಳ ನಡುವಿನ ಜನಾಂಗೀಯ ಭಿನ್ನಾಭಿಪ್ರಾಯಗಳಿಂದಾಗಿ ಮಣಿಪುರದಲ್ಲಿ ಆಗಾಗ್ಗೆ ಬಿಕ್ಕಟ್ಟುಗಳು ಸೃಷ್ಟಿಯಾಗುತ್ತಿವೆ. ರಾಜ್ಯದ ಜನಸಂಖ್ಯೆಯಲ್ಲಿ ನಾಗಾಗಳು ಶೇ.20 ರಷ್ಟಿದ್ದರೆ, ವೈಷ್ಣವರೇ ಹೆಚ್ಚಿರುವ ಮೀಟಿಗಳು ಶೇ.65ರಷ್ಟಿದ್ದಾರೆ. ಕುಕಿ-ಚಿನ್ ಗುಂಪುಗಳು ಶೇ.13ರಷ್ಟಿವೆ.

  ಇಂಫಾಲ್-ಪೂರ್ವ ಜಿಲ್ಲೆಯನ್ನು ವಿಭಜಿಸಿ ಜಿರಿಬಾಮ್ ಮತ್ತು ಸೇನಾಪತಿ ಜಿಲ್ಲೆಯನ್ನು ವಿಭಜಿಸಿ ಕಾಂಗ್ಪೊಕಿ ಈ ಎರಡು ಜಿಲ್ಲೆಗಳನ್ನು ರಚಿಸುವ ಪ್ರಸ್ತಾವನೆಯನ್ನು ಹೊಂದಿರುವುದಾಗಿ ಮಣಿಪುರ ಸರಕಾರವು ಕಳೆದ ಅಕ್ಟೋಬರ್ ತಿಂಗಳಲ್ಲಿ ಪ್ರಕಟಿಸಿತ್ತು. ನಾಗಾಗಳು ಸೇನಾಪತಿ ಜಿಲ್ಲೆಯನ್ನು ತಮ್ಮ ಮೂಲಸ್ಥಾನವೆಂದು ಪರಿಗಣಿಸಿದ್ದಾರೆ. ಸರಕಾರದ ಈ ಕ್ರಮವನ್ನು ವಿರೋಧಿಸಿ ಮಣಿಪುರದ ನಾಗಾ ಸಂಘಟನೆಗಳ ಮಾತೃಸಂಸ್ಥೆ ಸಂಯುಕ್ತ ನಾಗಾ ಮಂಡಳಿ(ಯುಎನ್‌ಸಿ)ಯು ನ.1ರಂದು ಇಂಫಾಲ್ ಕಣಿವೆಯ ಆರ್ಥಿಕ ದಿಗ್ಬಂಧನಕ್ಕೆ ಕರೆ ನೀಡಿತ್ತು.

ಡಿ.7ರಂದು ಸರಕಾರವು ಏಳು ಹೊಸ ಜಿಲ್ಲೆಗಳ ರಚನೆಯನ್ನು ಪ್ರಕಟಿಸಿತ್ತು. ಈ ಪೈಕಿ ಐದು ಜಿಲ್ಲೆಗಳಲ್ಲಿ ನಾಗಾಗಳು,ಕುಕಿಗಳು,ಪೈಟೆಗಳು ಮತ್ತು ಇತರ ಬುಡಕಟ್ಟು ಜನಾಂಗಗಳ ಪ್ರಾಬಲ್ಯವಿದ್ದರೆ ಉಳಿದ ಎರಡು ಜಿಲ್ಲೆಗಳಲ್ಲಿ ಮೀಟಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಕಣಿವೆಯಲ್ಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಜನಾಂಗೀಯ ಘರ್ಷಣೆಗಳು ಭುಗಿಲೆದ್ದ ಬಳಿಕ ಡಿ.18ರಿಂದ ಕರ್ಫ್ಯೂ ಹೇರಲಾಗಿದೆ.

ಆರ್ಥಿಕ ದಿಗ್ಬಂಧನದಿಂದಾಗಿ ಇಂಫಾಲ್ -ಪೂರ್ವ, ಇಂಫಾಲ್-ಪಶ್ಚಿಮ, ಥೌಬಾಲ್, ಬಿಷನ್‌ಪುರ, ಉಖ್ರುಲ್, ಚಂದೇಲ್, ಟ್ಯಾಮೆಂಗ್ಲಾಂಗ್ ಮತ್ತು ಚುಡಾಚಂದ್ರಪುರ ಈ ಎಂಟು ಜಿಲ್ಲೆಗಳು ಸಂಕಷ್ಟಕ್ಕೆ ಸಿಲುಕಿವೆ. ರಾ.ಹ.37 ಮತ್ತು ರಾ.ಹೆ.2 ಸೇರಿದಂತೆ ಇಂಫಾಲ್ ಕಣಿವೆಯನ್ನು ದೇಶದ ಇತರ ಭಾಗದೊಂದಿಗೆ ಜೋಡಿಸುವ ಎಲ್ಲ ರಸ್ತೆಗಳು ನಾಗಾಗಳ ಪ್ರಾಬಲ್ಯವಿರುವ ಜಿಲ್ಲೆಗಳ ಮೂಲಕ ಹಾದುಹೋಗಿವೆ.

ರಾಜ್ಯಕ್ಕೆ ಅಗತ್ಯ ವಸ್ತುಗಳ ನಿರಾತಂಕ ಪೂರೈಕೆ ಸಾಧ್ಯವಾಗಲು ಹೆಚ್ಚುವರಿ ಭದ್ರತಾ ಪಡೆಗಳನ್ನು ಒದಗಿಸುವಂತೆ ಸರಕಾರವು ಕೇಂದ್ರವನ್ನು ಕೋರಿದೆ. ಪ್ರತಿಭಟನಾಕಾರರಿಂದ ದಾಳಿಗಳನ್ನು ವಿಫಲಗೊಳಿಸಲು ಸರಕು ತುಂಬಿದ ಲಾರಿಗಳೀಗ ಭದ್ರತಾ ಪಡೆಗಳ ಬೆಂಗಾವಲಿನಲ್ಲಿ ರಾಜ್ಯ ರಾಜಧಾನಿಯತ್ತ ಚಲಿಸುತ್ತಿವೆ.

ಯುಎನ್‌ಸಿ ದಿಗ್ಬಂಧನವನ್ನು ಸಡಿಲಿಸದಿದ್ದರೆ ಕ್ರೈಸ್ತರೇ ಹೆಚ್ಚಿನ ಸಂಖ್ಯೆಯಲ್ಲಿರುವ ಗುಡ್ಡಗಾಡು ಜಿಲ್ಲೆಗಳಲ್ಲಿ ಕ್ರಿಸ್ಮಸ್ ಆಚರಣೆಗೂ ವ್ಯತ್ಯಯವುಂಟಾಗಲಿದೆ.

ಉದ್ದೇಶಿತ ನಾಗಾಲಿಮ್ ನಾಗಾ ಪ್ರಾಬಲ್ಯದ ಜಿಲ್ಲೆಗಳನ್ನು ಒಳಗೊಂಡಿರಬೇಕೇ ಎಂದು ನ್ಯಾಷನಲಿಸ್ಟ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (ಇಸಾಕ್-ಮುವ್ಹಾ) ಬಯಸುತ್ತಿದೆ. ಆದರೆ ಹಿಂದಿನ ಮಣಿಪುರ ಸಂಸ್ಥಾನದ ಭಾಗವಾಗಿರುವ ಮಣಿಪುರದ ಗುಡ್ಡಗಾಡು ಜಿಲ್ಲೆಗಳು ಐತಿಹಾಸಿಕವಾಗಿ ಮಣಿಪುರದ ಅಖಂಡ ಪ್ರದೇಶವಾಗಿರುವುದರಿಂದ ಮೀಟಿಗಳು ಇದನ್ನು ವಿರೋಧಿಸುತ್ತಿದ್ದಾರೆ.

ಮಣಿಪುರದ ಉಪ ಮುಖ್ಯಮಂತ್ರಿ ಗೈಖಾಂಗ್ಮ್ ನಾಗಾ ಜನಾಂಗಕ್ಕೆ ಸೇರಿದವ ರಾಗಿದ್ದಾರೆ. ಹಿಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ರಿಷಾಂಗ್ ಕೀಷಿಂಗ್ ಮತ್ತು ಎನ್‌ಎಸ್‌ಸಿಎನ್(ಐ-ಎಂ)ನಿಂದ ಹತ್ಯೆಯಾಗಿದ್ದ ವೈ.ಶಾಝಿಯಾ ಅವರೂ ನಾಗಾ ಗಳಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News