ಅದ್ದೂರಿ ವೆಚ್ಚದ ಶಿವಾಜಿ ಸ್ಮಾರಕಕ್ಕೆ ಪ್ರಧಾನಿ ಜಲಪೂಜೆ
ಮುಂಬೈ, ಡಿ.24: ಛತ್ರಪತಿ ಶಿವಾಜಿ ಮಹಾರಾಜರ ಸ್ಮಾರಕ ನಿರ್ಮಾಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಮಧ್ಯಾಹ್ನ ಭೂಮಿಪೂಜೆ ನೆರವೇರಿಸಿದರು.
ಶಿವ ಸ್ಮಾರಕದ ಭೂಮಿ ಪೂಜೆ ನಡೆಸುವ ಮಹಾ ಗೌರವ ನನಗೆ ಲಭಿಸಿದೆ. ಶಿವಾಜಿ ಮಹಾರಾಜ ಶೌರ್ಯ, ಸಾಹಸ ಹಾಗೂ ಉತ್ತಮ ಆಡಳಿತಕ್ಕೆ ಮಾರ್ಗದರ್ಶಿಯಾಗಿದ್ದಾರೆ. ಶಿವ ಸ್ಮಾರಕ ಅವರ ಶ್ರೇಷ್ಠತೆಗೆ ಸಲ್ಲಿಸುತ್ತಿರುವ ಗೌರವವಾಗಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ರಾಜ್ಯ ಸರಕಾರದ ಪ್ರಸ್ತಾವಿತ ಶಿವಸ್ಮಾರಕ ದಕ್ಷಿಣ ಮುಂಬೈನ ಗುರ್ಗಾಂವ್ ಚೌಪಾಟಿಯಲ್ಲಿ ನಿರ್ಮಾಣವಾಗಲಿದೆ. 192 ಮೀಟರ್ ಎತ್ತರದ ಈ ಪ್ರತಿಮೆಯ ನಿರ್ಮಾಣಕ್ಕೆ ಅಂದಾಜು 3,600 ಕೋಟಿ ರೂ. ವ್ಯಯಿಸಲಾಗುತ್ತಿದೆ. ಶಿವಾಜಿ ಸ್ಮಾರಕ ರಾಜ್‌ಭವನ ತೀರದಿಂದ ಕೇವಲ 1.5 ಕಿ.ಮೀ.ದೂರದಲ್ಲಿ ತಲೆ ಎತ್ತಲಿದೆ.
ಶಿವಸ್ಮಾರಕ ದೇಶದಲ್ಲಿ ಮಾತ್ರವಲ್ಲ ವಿಶ್ವದಲ್ಲೇ ಅತ್ಯಂತ ಎತ್ತರದ ಪ್ರತಿಮೆ ಎನಿಸಿಕೊಳ್ಳಲಿದೆ. ಇದನ್ನು ಸಾಧ್ಯವಾಗಿಸುತ್ತಿರುವ ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸುವೆನು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ಸ್ಮಾರಕ ನಿರ್ಮಾಣಕ್ಕೆ ವಿರೋಧ
ಸಮುದ್ರದ ಮಧ್ಯೆ ಶಿವಾಜಿ ಸ್ಮಾರಕ ನಿರ್ಮಾಣಕ್ಕೆ ಪರಿಸರವಾದಿಗಳು ಹಾಗೂ ಮೀನುಗಾರರು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.
ಸಮುದ್ರದೊಳಗೆ ಸ್ಮಾರಕ ನಿರ್ಮಾಣದಿಂದ ಮೀನುಗಾರಿಕೆಗೆ ತೊಂದರೆಯಾಗಲಿದೆ ಎಂದು ಅಳಲು ವ್ಯಕ್ತಪಡಿಸಿರುವ ಮೀನುಗಾರರು ಸ್ಮಾರಕ ವಿರೋಧಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.
ಇನ್ನುಕೆಲವೇ ಸಮಯದಲ್ಲಿ ಮುಂಬೈ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಶಿವಾಜಿ ಸ್ಮಾರಕಕ್ಕೆ ಶಂಕುಸ್ಥಾಪನೆಯ ನಾಟಕವಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಆರೋಪಿಸಿದ್ದಾರೆ.