×
Ad

ಕೊಲೆ ಪ್ರಕರಣದಿಂದ ಮುಕ್ತಗೊಳಿಸುವಂತೆ ಕೋರಿದ್ದ ಸಚಿವ ಮಣಿ ಮನವಿಗೆ ನ್ಯಾಯಾಲಯದ ತಿರಸ್ಕಾರ

Update: 2016-12-24 15:51 IST

ತೊಡುಪುಝಾ,ಡಿ.24: 1982ರಲ್ಲಿ ಯುವ ಕಾಂಗ್ರೆಸ್ ನಾಯಕ ಅಂಚೇರಿ ಬೇಬಿ ಕೊಲೆ ಪ್ರಕರಣದಲ್ಲಿ ತನ್ನ ಹೆಸರನ್ನು ಕೈಬಿಡುವಂತೆ ಕೋರಿ ಪಕ್ಷದ ನಾಯಕ ಹಾಗೂ ವಿದ್ಯುತ್ ಸಚಿವ ಎಂ.ಎಂ.ಮಣಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸ್ಥಳೀಯ ನ್ಯಾಯಾಲಯವು ಇಂದು ತಿರಸ್ಕರಿಸಿದ್ದು, ಕೇರಳದ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರಕಾರವು ತೀವ್ರ ಮುಜುಗರಕ್ಕೊಳಗಾಗಿದೆ.

ಇದೇ ವೇಳೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ವಿ.ಜಿ.ಶ್ರೀದೇವಿ ಅವರು ಇಡುಕ್ಕಿ ಜಿಲ್ಲಾ ಕಾರ್ಯದರ್ಶಿ ಕೆ.ಕೆ.ಜಯಚಂದ್ರನ್ ಸೇರಿದಂತೆ ಇತರ ಇಬ್ಬರು ಸಿಪಿಎಂ ನಾಯಕರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಸೇರಿಸಲು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರು.

ಪಕ್ಷದ ರಾಜ್ಯ ಸಮಿತಿಯ ಸದಸ್ಯರಾಗಿರುವ ಮಣಿ ಪ್ರಕರಣದಲ್ಲಿ ಎರಡನೇ ಆರೋಪಿ ಯಾಗಿದ್ದಾರೆ.

2012ರಲ್ಲಿ ಮಣಿಯವರ ಎರಡು ವಿವಾದಾತ್ಮಕ ಭಾಷಣಗಳ ಬಳಿಕ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರಕಾರವು ಮುಚ್ಚಲಾಗಿದ್ದ ಬೇಬಿ ಕೊಲೆ ಪ್ರಕರಣಕ್ಕೆ ಮರುಜೀವ ನೀಡಿತ್ತು. ಕಮ್ಯುನಿಸ್ಟ್ ಪಕ್ಷವು 1980ರ ದಶಕದಲ್ಲಿ ಆಗಾಗ್ಗೆ ಇಡುಕ್ಕಿ ಜಿಲ್ಲೆಯಲ್ಲಿನ ತನ್ನ ರಾಜಕೀಯ ಶತ್ರುಗಳನ್ನು ಶಾಶ್ವತವಾಗಿ ಇಲ್ಲವಾಗಿಸಿತ್ತು ಎಂದು ಮಣಿ ಈ ಭಾಷಣಗಳಲ್ಲಿ ಬಹಿರಂಗವಾಗಿ ಹೇಳಿದ್ದರು.

ಇಡುಕ್ಕಿ ಜಿಲ್ಲೆಯ ಉದುಮಬಂಚೋಲದಲ್ಲಿ 1982,ನ.13ರಂದು ಅಂಚೇರಿ ಬೇಬಿಯನ್ನು ಗುಂಡಿಟ್ಟು ಕೊಲ್ಲಲಾಗಿತ್ತು.

ಪ್ರಕರಣದಲ್ಲಿ ಒಂಭತ್ತು ಆರೋಪಿಗಳಿದ್ದು, ಅವರನ್ನು ಸ್ಥಳೀಯ ನ್ಯಾಯಾಲಯವು ಖುಲಾಸೆಗೊಳಿಸಿತ್ತು ಮತ್ತು ಬಳಿಕ ಉಚ್ಚ ನ್ಯಾಯಾಲಯವೂ ಈ ತೀರ್ಪನ್ನು ಎತ್ತಿಹಿಡಿದಿತ್ತು.

ನ್ಯಾಯಾಲಯದ ತೀರ್ಪು ರಾಜಕೀಯ ಪ್ರೇರಿತವಾಗಿದೆ ಎಂದು ಪ್ರತಿಕ್ರಿಯಿಸಿದ ಮಣಿ, ಅದು ತನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು. ತನ್ನ ರಾಜೀನಾಮೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಆಗ್ರಹಗಳನ್ನು ಅವರು ತಿರಸ್ಕರಿಸಿದರು.

ಸರಕಾರಿ ಸ್ವಾಮ್ಯದ ಉದ್ಯಮಗಳಲ್ಲಿ ಸ್ವಜನ ಪಕ್ಷಪಾತದ ಆರೋಪದಲ್ಲಿ ಆಗಿನ ಕೈಗಾರಿಕಾ ಸಚಿವ ಇ.ಪಿ.ಜಯರಾಜನ್ ರಾಜೀನಾಮೆ ನೀಡಿದ ಬಳಿಕ ಕಳೆದ ತಿಂಗಳು ಮಣಿ ಅವರು ಸಂಪುಟಕ್ಕೆ ಸೇರ್ಪಡೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News