ಆಳ್ವಾಸ್‌ನಿಂದ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ "ಮಾರ್ಗದರ್ಶಿ ಕೈಪಿಡಿ" ವಿತರಣೆ
ಮೂಡುಬಿದಿರೆ , ಡಿ.24 : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂಡುಬಿದಿರೆ ವಲಯದ ಸರಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ 10ನೇ ತರಗತಿಯ 800 ವಿದ್ಯಾರ್ಥಿಗಳಿಗೆ 16ಲಕ್ಷ ರೂ ಮೌಲ್ಯದ ಉಚಿತ "ಮಾರ್ಗದರ್ಶಿ ಕೈಪಿಡಿ"ಯನ್ನು ಕ್ಷೇತ್ರದ ಶಾಸಕ ಕೆ. ಅಭಯಚಂದ್ರ ಜೈನ್ ವಿದ್ಯಾಗಿರಿಯ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ವಿತರಿಸಿದರು.
ನಂತರ ಮಾತನಾಡಿದ ಜೈನ್ ಅವರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಆದರ್ಶ ವ್ಯಕ್ತಿಗಳಾಗಬೇಕು. ಶೈಕ್ಷಣಿಕವಾಗಿ ಮೂಡುಬಿದಿರೆಯು ರಾಜ್ಯ ರಾಷ್ಟ್ರಮಟ್ಟದಲ್ಲಿ ಪ್ರಗತಿಯನ್ನು ಸಾಧಿಸಬೇಕೆನ್ನುವ ನಿಟ್ಟಿನಲ್ಲಿ ಡಾ.ಎಂ.ಮೋಹನ ಆಳ್ವರು ತನ್ನ ಸ್ವಂತ ಖರ್ಚಿನಲ್ಲಿ "ಮಾರ್ಗದರ್ಶಿ ಕೈಪಿಡಿ"ಯನ್ನು ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಪರೀಕ್ಷೆಯನ್ನು ಎದುರಿಸಿ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯ ಮಾಡಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಶಿಕ್ಷಕರ, ಆಳ್ವರ ನಿರೀಕ್ಷೆಗಳನ್ನು ಈಡೇರಿಸಬೇಕಾಗಿದೆ ಎಂದು ಹೇಳಿದ ಅವರು, ಅಧ್ಯಾಪಕರುಗಳು ಮತ್ತು ಅಧಿಕಾರಿಗಳು ಮೊದಲು ಆ ಮಾಗದರ್ಶಿ ಕೈಪಿಡಿಯನ್ನು ಓದಿ ಅರಿತುಕೊಂಡು ನಂತರ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಶಿಕ್ಷಣ, ಶಿಕ್ಷಣ ಸಂಸ್ಥೆಗಳು ಸ್ಪರ್ಧಾತ್ಮಕ ಯುಗದಲ್ಲಿವೆ. ರಾಜ್ಯದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳಲ್ಲಿ ಸ್ವಾಭಿಮಾನ ಮತ್ತು ಹೋರಾಟದ ಮನೋಭಾವ ಬೆಳೆಯಬೇಕು ಹೊರತು ಪಲಾಯನವಾದಿಗಳಾಗಬಾರದು. ಕನ್ನಡ ಮಾಧ್ಯಮ ಶಾಲೆಗಳು ವಿದ್ಯೆ ಸೋತರೆ ಅದು ಶ್ರೀ ಸಾಮಾನ್ಯ, ನಮ್ಮ ಮಣ್ಣಿನ, ಗ್ರಾಮೀಣ ಪ್ರದೇಶದ ಮಕ್ಕಳು ಹಾಗೂ ನಮ್ಮ ಸಮಾಜ ಸೋಲನ್ನು ಕಂಡಂತೆ. ಈ ಬಗ್ಗೆ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜಾಗೃತರಾಗಿ ಕನ್ನಡ ಮಾಧ್ಯಮ ಶಾಲೆಗಳು ಸೋಲದಂತೆ ಕಾಪಾಡಬೇಕಾಗಿದೆ. ಈ ನಿಟ್ಟಿನಲ್ಲಿ ಆಳ್ವಾಸ್ ಸಂಸ್ಥೆಯು ಮಾರ್ಗದರ್ಶಿ ಕೈಪಿಡಿಯನ್ನು ವಲಯದ ಎಲ್ಲಾ ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ನೀಡುತ್ತಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.
ಸರಕಾರವು ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸುಮಾರು 7,700 ಕೋಟಿ ರೂಗಳನ್ನು ಖರ್ಚು ಮಾಡುತ್ತಿದೆ . ಆದರೆ ಕೊನೆಯ ಫಲಿತಾಂಶವನ್ನು ನೋಡಿದಾಗ ಮಾತ್ರ ಇಂಗ್ಲೀಷ್ ಮಾಧ್ಯಮ, ಸಿ.ಬಿ.ಎಸ್, ಐ.ಎಸ್.ಎಸ್. ಪಠ್ಯಕ್ರಮದ ಶಾಲೆಗಳ ಫಲಿತಾಂಶಕ್ಕಿಂತ ಕಡಿಮೆಯಾಗಿರುತ್ತದೆ. ಆದುದರಿಂದ ಇದರ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಂಡು ಸ್ಪರ್ಧೆಗಳಿಗೆ ತಯಾರಾಗಬೇಕಾಗಿದೆ. ಶಿಕ್ಷಕರ ಕೊರತೆಯಿದ್ದರೆ ತಮ್ಮ ಸಂಸ್ಥೆಯಿಂದ ಒದಗಿಸಲಾಗುವುದು ಹಾಗೂ ಶಿಕ್ಷಣದಲ್ಲಿ ತೀರ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ 2 ತಿಂಗಳ ಹಿಂದೆ ಆಳ್ವಾಸ್ ಸಂಸ್ಥೆಯ ಹಾಸ್ಟೆಲ್‌ನಲ್ಲಿ ನಿಲ್ಲಿಸಿ ಹೆಚ್ಚಿನ ತರಬೇತಿಯನ್ನು ನೀಡಿ ಉತ್ತಮ ಅಂಕಗಳನ್ನು ಗಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆಯಿತ್ತರು .
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರಾಜಶ್ರೀ ಮಾತನಾಡಿ , ತಮ್ಮ ವಲಯದ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗಾಗಿ ಮತ್ತು ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯಲು ಬೆಂಬಲ ಶಕ್ತಿಯಾಗಿ ಡಾ/ ಮೋಹನ ಆಳ್ವರು ನಿಲ್ಲುವ ಮೂಲಕ ಉತ್ತಮ ಅವಕಾಶ ಒದಗಿ ಬಂದಿದೆ. ಈ ಅವಕಾಶಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದರು.
ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ ಉಪಸ್ಥಿತರಿದ್ದರು.
ಆಳ್ವಾಸ್ ಕನ್ನಡ ಮಾಧ್ಯಮದ ಮುಖ್ಯ ಶಿಕ್ಷಕ ಪ್ರಶಾಂತ್ ಬಿ. ಸ್ವಾಗತಿಸಿದರು.
ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶ್ರೀನಿಧಿ ಎಳಚಿತ್ತಾಯ ಕಾರ್ಯಕ್ರಮ ನಿರೂಪಿಸಿದರು.
ರಾಮಕೃಷ್ಣ ಹೆಗಡೆ ವಂದಿಸಿದರು.