×
Ad

ಪವಿತ್ರ ಕುರ್‌ಆನ್ ಸರ್ವ ಶಾಸ್ತ್ರಗಳ ಮಹಾ ಸಾಗರ : ಖಬೀರ್ ಬಾಖವಿ

Update: 2016-12-24 18:57 IST

ಬಂಟ್ವಾಳ , ಡಿ.24 : ಅರೆಬಿಯಾದ ಮರುಭೂಮಿಯ ಅನಕ್ಷರಸ್ಥ ಪ್ರವಾದಿ ಮುಹಮ್ಮದ್‌ರವರಿಗೆ ದೇವದೂತರ ಮೂಲಕ ಅವತೀರ್ಣಗೊಂಡ ಪವಿತ್ರ ಕುರ್‌ಆನ್ ಸರ್ವ ಶಾಸ್ತ್ರಗಳ ಮಹಾ ಸಾಗರವಾಗಿದೆ ಎಂದು ಕೇರಳದ ಪ್ರಖ್ಯಾತ ಮತ ಪ್ರಭಾಷಣಗಾರ ಹಾಫಿರ್ ಅಹ್ಮದ್ ಖಬೀರ್ ಬಾಖವಿ ಹೇಳಿದರು. 

ಮದರಸತು ತ್ತಿಬಿಯಾನ್ ಅರೆಬಿಕ್ ಕಾಲೇಜಿನ ವಾರ್ಷಿಕ ಮಹಾ ಸಮ್ಮೇಳನದ ಪ್ರಯುಕ್ತ ಟುಡೇ ಫೌಂಡೇಷನ್ ಫರಂಗಿಪೇಟೆ ಹಾಗೂ ಯು.ಟಿ.ಫರೀದ್ ಫೌಂಡೇಷನ್ ಮಂಗಳೂರು ಇದರ ಆಶ್ರಯದಲ್ಲಿ ಶುಕ್ರವಾರ ರಾತ್ರಿ ಫರಂಗಿಪೇಟೆ ಮರ್‌ಹೂಮ್ ಉಂಞಕಾ ಉಸ್ತಾದ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇರಿದ್ದ ಜನಸಾಗರವನ್ನುದ್ದೇಶಿಸಿ ಅವರು ಮತ ಪ್ರಭಾಷಣಗೈದರು.

ಪವಿತ್ರ ಕುರ್‌ಆನ್ ಯಾರೂ ಮುಟ್ಟದಂತೆ ಸುರಕ್ಷಿತ ಜಾಗದಲ್ಲಿ ಭದ್ರವಾಗಿಡುವ ಗ್ರಂಥವಲ್ಲ. ಅದು ಲೋಕಾದ ಸರ್ವರ ಹೃದಯಕ್ಕೆ ನಾಟಬೇಕಾದ ಮಹಾ ಗ್ರಂಥವಾಗಿದ್ದು ಭೂಣ್ರದಿಂದ ಮರಣದವರೆಗೆ, ಆಕಾಶ ಭೂಮಿ, ಸಮುದ್ರ ಹೀಗೆ ಕುರ್‌ಆನ್ ಕಲಿಸದ ಶಾಸ್ತ್ರಗಳೇ ಇಲ್ಲ. ಕುರ್‌ಆನ್‌ಗೆ ಸಮಾನವಾಗಿ ಇನ್ನೊಂದು ಗ್ರಥವನ್ನಾಗಲೀ, ಕುರ್‌ಆನಿನ ಒಂದು ಪುಟ್ಟ ಅಧ್ಯಾಯಕ್ಕೆ ಸಮಾನವಾಗಿ ಇನ್ನೊಂದು ಅಧ್ಯಾಯವನ್ನಾಗಲೀ, ಸೂಕ್ತಿಗೆ ಸಮಾನವಾಗಿ ಇನ್ನೊಂದು ಸೂಕ್ತಿಯನ್ನು ತರಲು 15 ಶತಮಾನದಿಂದ ಜಗತ್ತಿನ ಯಾರಿಗೂ ಸಾಧ್ಯವಾಗಿಲ್ಲ ಮತ್ತು ಸಾಧ್ಯವಾಗುವುದೂ ಇಲ್ಲ ಎಂದು ಹೇಳಿದ ಅವರು, ಕುರ್‌ಆನ್ ಸಂಪೂರ್ಣವಾಗಿ ಕಲಿಯುವವರು ಸರ್ವ ಶಾಸ್ತ್ರಗಳನ್ನು ಕಲಿತಂತಾಗಿದೆ ಎಂದರು.

ಹೆತ್ತವರು ತಮ್ಮ ಮಕ್ಕಳನ್ನು ಕುರ್‌ಆನ್ ಕಂಠಪಾಠಕ್ಕೆ ಹೆಚ್ಚಿನ ಮುತುವರ್ಜಿವಹಿಸಿ ಪ್ರೇರೇಪಿಸಬೇಕು. ಮುಸ್ಲಿಮನ ಹೃದಯದಲ್ಲಿ ಕುರ್‌ಆನ್ ಇದ್ದಲ್ಲಿ ಆತ ಎಲ್ಲವನ್ನೂ ಕರಗತ ಮಾಡಿಕೊಂಡಂತೆ ಎಲ್ಲಾ ಕ್ಷೇತ್ರಗಳ ವಿದ್ಯೆಯೂ ಕುರ್‌ಆನ್ ನಮಗೆ ಕಲಿಸುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಕುರ್‌ಆನ್ ಕಂಠಪಾಠದಂತಹ ವಿದ್ಯೆಯನ್ನು ಧಾರೆ ಎರೆಯಿರಿ ಎಂದು ಕಬೀರ್ ಬಾಖವಿ ಪೋಷಕರಿಗೆ ಕರೆ ನೀಡಿದರು.

ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಸಚಿವ ಯು.ಟಿ.ಖಾದರ್‌ರ 11 ವರ್ಷ ಪ್ರಾಯದ ಪುತ್ರಿ ಹವ್ವ ಕುರ್‌ಆನ್ ಕಂಠಪಾಠ ಮಾಡಿ ಬಿರುದು ಪಡೆಯುತ್ತಿರುವುದು ಅತ್ಯಂತ ಸಂತೋಷದಾಯ ವಿಚಾರ ಎಂದು ಕೊಂಡಾಡಿದ ಬಾಖವಿ ಸ್ವತಂತ್ರ ಭಾರತದ 60 ವರ್ಷಗಳ ಇತಿಹಾಸದಲ್ಲಿ ಸಚಿವರೋರ್ವರ ಹೆಣ್ಣು ಮಗುವೊಂದು ಕುರ್‌ಆನ್ ಕಂಠಪಾಠ ಬಿರುದುಧಾರಿಣಿಯಾಗುತ್ತಿರುವುದು ಇದೇ ಪ್ರಥಮ ಬಾರಿ ಎಂದವರು ಬಣ್ಣಿಸಿದರು.

ಮುಸ್ಲಿಮ್ ಸಮೂಹ ಆಧುನಿಕ ಪಾಶ್ಚಿಮಾತ್ಯ ಸಂಗೀತದ ಲಹರಿಯಲ್ಲಿ ತೇಲಾಡುತ್ತಿದ್ದು ಕುರ್‌ಆನ್ ಓದು ಹಾಗೂ ಅದ್ಯಾಯನದಿಂದ ದೂರವಾಗುತ್ತಿದ್ದಾರೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ಪವಿತ್ರ ಕುರ್‌ಆನ್ ಪಾರಾಯಣ ಮಾಡಬೇಕಾದ ಮಗ್ರೀಬ್ ಸಮಯದಲ್ಲಿ ಮನೆಗಳಲ್ಲಿ ಸ್ತ್ರೀ-ಪುರುಷ ಹಾಗೂ ಮಕ್ಕಳಾದಿಯಾಗಿ ಟಿ.ವಿ ಧಾರಾವಾಹಿ, ಸಿನಿಮಾ ಮೊದಲಾದ ಟಿವಿ ಕಾರ್ಯಕ್ರಮವನ್ನು ವೀಕ್ಷಿಸುತ್ತಾ ಕಾಲಹರಣ ಮಾಡುತ್ತಿರುವುದು ಪವಿತ್ರ ಕುರ್‌ಆನ್‌ಗೆ ಮಾಡುತ್ತಿರುವ ಅವಮಾನವಾಗಿದೆ ಎಂದರು.

ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಹಾಜಿ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಉದ್ಘಾಟಿಸಿದರು.

ಫರಂಗಿಫೇಟೆ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಎಫ್.ಮುಹಮ್ಮದ್ ಬಾವಾ ಅಧ್ಯಕ್ಷತೆ ವಹಿಸಿದ್ದರು.

ಖತೀಬ್ ಅಬೂ ಝಾಹಿರಾ ಉಸ್ಮಾನ್ ದಾರಿಮಿ ಉದ್ಘಾಟನಾ ಭಾಷಣ ಮಾಡಿದರು. ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹಾಗೂ ಆಹಾರ ಸಚಿವ ಯು.ಟಿ. ಖಾದರ್ ಶುಭ ಹಾರೈಸಿದರು.

ತುಂಬೆ ಬಿ.ಎ. ಗ್ರೂಪ್ ಸ್ಥಾಪಕ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಗೌರವ ಅತಿಥಿಯಾಗಿ ಭಾಗವಹಿಸಿದ್ದರು.

ಫರಂಗಿಪೇಟೆ ಮುಹಿಯುದ್ದೀನ್ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಯೂಸುಫ್ ಅಲಂಕಾರ್ ಫರಂಗಿಪೇಟೆ, ಮಂಗಳೂರು ಉತ್ತರ ಶಾಸಕ ಬಿ.ಎ. ಮೊದಿನ್ ಬಾವಾ, ಕರ್ನಾಟಕ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್.ಖಾದರ್, ರಾಜ್ಯ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಕಾಸರಗೋಡು ಜಿಪಂ ಸದಸ್ಯ ಹರ್ಷದ್ ವರ್ಕಾಡಿ, ಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ, ಟುಡೇ ಫೌಂಡೇಶನ್ ಚೆಯರ್‌ಮೆನ್ ಚೇರ್‌ಮಾನ್, ಜಿಪಂ ಮಾಜಿ ಸದಸ್ಯ ಎಫ್ ಉಮರ್ ಫಾರೂಕ್, ಬಂಟ್ವಾಳ ತಾಪಂ ಮಾಜಿ ಸದಸ್ಯ ಆಸಿಫ್ ಇಕ್ಬಾಲ್, ಪುದು ಗ್ರಾಪಂ ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಸದಸ್ಯ ರಮ್ಲಾನ್ ಮಾರಿಪಳ್ಳ, ಹಾಜಿ ಜಿ.ಮುಹಮ್ಮದ್ ಹನೀಫ್ ಗೋಳ್ತಮಜಲು, ಹಾಜಿ ಎಸ್. ಅಬ್ಬಾಸ್ ಸಜಿಪ, ಅಬ್ಬಾಸ್ ದಾರಿಮಿ ಕೆಲಿಂಜ, ಮಜೀದ್ ದಾರಿಮಿ ನಂದಾವರ, ಅಮ್ಮೆಮಾರ್ ಜುಮಾ ಮಸೀದಿ ಅಧ್ಯಕ್ಷ ಉಮರ್ ಹಾಜಿ, ಸಿ.ಎಂ.ಫಾರೂಕ್ ದೇರಲಕಟ್ಟೆ, ಝಕರಿಯಾ ಹಾಜಿ ಜೋಕಟ್ಟೆ, ಅಶ್ರಫ್, ಝಿಯಾದ್ ನದ್ವಿ ಉಪಸ್ಥಿತರಿದ್ದರು.

ಮುಹಮ್ಮದ್ ತುಂಬೆ ಸ್ವಾಗತಿಸಿದರು.

ಇಸ್ಮಾಯೀಲ್ ಹನೀಫಿ ಕಿರಾಅತ್ ಪಠಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News