×
Ad

ಬೆಳ್ತಂಗಡಿ : ಮುಕ್ತ ಚೆಸ್ ಟೂರ್ನಮೆಂಟ್-2016

Update: 2016-12-24 19:58 IST

ಬೆಳ್ತಂಗಡಿ , ಡಿ.24 : ಚೆಸ್ ಎಂಬುದು ಬೌದ್ಧಿಕ ಆಟ. ಆತ್ಮವಿಶ್ವಾಸ, ಏಕಾಗ್ರತೆ ಮತ್ತು ಜಾಣ್ಮೆಯಿಂದ ಮಾತ್ರ ಚೆಸ್‌ನಲ್ಲಿ ಗೆಲ್ಲಲು ಸಾಧ್ಯ. ಅದೃಷ್ಟದಾಟ ಇಲ್ಲಿ ನಡೆಯದು ಎಂದು ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ಹೇಳಿದರು.

ಅವರು ಶನಿವಾರ ಇಲ್ಲಿನ ಮಂಜುನಾಥಸ್ವಾಮಿ ಕಲಾಭವನದಲ್ಲಿ ಬಾರ್ ಅಸೋಸಿಯೇಶನ್ ಬೆಳ್ತಂಗಡಿ, ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ 5 ದಿನ ನಡೆಯುವ ಅಂತಾರಾಷ್ಟ್ರೀಯ ರೋಟೋ- ಲಾಯರ್ಸ್‌ ಕಪ್ ಮುಕ್ತ ಚೆಸ್ ಟೂರ್ನಮೆಂಟ್-2016ನ್ನು ಉದ್ಘಾಟಿಸಿ ಮಾತನಾಡಿದರು.

 ನಿರ್ದಿಷ್ಟ ಗುರಿಯನ್ನು ಮುಟ್ಟಲು ವಿದ್ಯಾರ್ಥಿಗಳಿಗೆ ಪ್ರೇರಣೆಯನ್ನು ತುಂಬುವುದು ಅತೀ ಅಗತ್ಯವಾಗಿದ್ದು, ಸಣ್ಣ ಪ್ರಾಯದಲ್ಲೇ ಗುರಿ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಂಡಲ್ಲಿ ಜೀವನದಲ್ಲಿ ಯಶಸ್ಸಿನ ಮೆಟ್ಟಲುಗಳನ್ನು ಹತ್ತಲು ಸಾಧ್ಯವಾಗುತ್ತದೆ. ನಾವು ನಮ್ಮ ಕನಸುಗಳನ್ನು ನನಸು ಮಾಡುವ ಪ್ರಯತ್ನ ಮಾಡದಿದ್ದರೆ ಬೇರೆಯವರು ತಮ್ಮ ಕನಸುಗಳನ್ನು ನನಸು ಮಾಡಲು ನಮ್ಮನ್ನು ಬಾಡಿಗೆಯಂತೆ ಉಪಯೋಗಿಸಿಕೊಳ್ಳುವ ಅಪಾಯವಿರುತ್ತದೆ. ಹೀಗಾಗಿ ಗುರಿ ಮುಟ್ಟುವ ತನಕ ಅವಿರತವಾದ ಶ್ರಮ ಅಗತ್ಯ ಎಂದರು.

ಚೆಸ್ ಪಟು ಶಾಬ್ದಿಕ್ ವರ್ಮ ಜೊತೆ ಚೆಸ್ ಆಡುವ ಮೂಲಕ ಪಂದ್ಯಾಟಕ್ಕೆ ಹೇಮಾವತಿ ಹೆಗ್ಗಡೆ ಚಾಲನೆ ನೀಡಿದರು.
 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ವಸಂತ ಬಂಗೇರ ಮಾತನಾಡಿ, ಯಾವೂದೇ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ. ಈ ಚೆಸ್ ಪಂದ್ಯಾಟಕ್ಕೆ ರಾಜ್ಯ ಸರಕಾರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ಒಂದು ಲಕ್ಷ ರು. ಧನಸಹಾಯವನ್ನು ನೀಡಲು ಸಹಕರಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಶಾಸಕರನ್ನು ಸನ್ಮಾನಿಸಲಾಯಿತು.

ಬೆಳ್ತಂಗಡಿಯ ಹಿರಿಯ ಸಿವಿಲ್ ನ್ಯಾಯಾಧೀಶ ರಾಘವೇಂದ್ರ ಜಿ., ಕಿರಿಯ ಸಿವಿಲ್ ನ್ಯಾಯಾಧೀಶ ಜಯಶಂಕರ್,ಯುಕೆಸಿಎ ಉಪಾಧ್ಯಕ್ಷ ರಾಘವೇಂದ್ರ ಬಿ., ಅರ್ಜುನ ಪ್ರಶಸ್ತಿ ಪುರಸ್ಕೃತ ಚೆಸ್‌ಪಟು ಡಿ.ವಿ.ಪ್ರಸಾದ್, ರೋಟರಿ ಅಸಿಸ್ಟೆಂಟ್ ಗವರ್ನರ್ ಸಂತೋಷ್ ಹೆಗ್ಡೆ, ರೋಟರಿ ಕ್ಲಬ್ ಅಧ್ಯಕ್ಷ ಡಿ.ಎಂ. ಗೌಡ, ಕಾರ್ಯದರ್ಶಿ ಪ್ರಕಾಶ್ ಪ್ರಭು, ಪತ್ರಕರ್ತರ ಸಂಘದ ಅಧ್ಯಕ್ಷ ದೇವಿಪ್ರಸಾದ್, ವಕೀಲರ ಸಂಘದ ಕಾರ್ಯದರ್ಶಿ ಶಿವಯ್ಯ, ಪಂದ್ಯಾಟದ ಸಂಚಾಲಕ ರತ್ನವರ್ಮ ಬುಣ್ಣು ಇದ್ದರು.

ಸಂಚಾಲನ ಸಮಿತಿ ಅಧ್ಯಕ್ಷ ಪ್ರತಾಪ್‌ಸಿಂಹ ನಾಯಕ್ ಸ್ವಾಗತಿಸಿದರು.

ವಕೀಲರ ಸಂಘದ ಅಧ್ಯಕ್ಷ ಅಗರ್ತ ಸುಬ್ರಹ್ಮಣ್ಯ ಕುಮಾರ್ ವಂದಿಸಿದರು.

ಉಪನ್ಯಾಸಕ ಜಯಕುಮಾರ್ ಶೆಟ್ಟಿ, ನ್ಯಾಯವಾದಿ ಧನಂಜಯ ರಾವ್ ಕಾರ್ಯಕ್ರಮ ನಿರೂಪಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News