ಮಂಗಳೂರಿನಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಣೆ
ಮಂಗಳೂರು,ಡಿ. 24: ಏಸು ಕ್ರಿಸ್ತರ ಜನನದ ಹಬ್ಬವಾದ ‘ಕ್ರಿಸ್‌ಮಸ್’ನ ಮುಂಚಿನ ದಿನವಾದ ಶನಿವಾರ ರಾತ್ರಿಯನ್ನು ಕ್ರೈಸ್ತರು ಕ್ರಿಸ್ಮಸ್ ಜಾಗಕರಣೆಯ ಮೂಲಕ ಸಂಭ್ರಮಿಸಿದರು.
ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಮತ್ತು ಬಲಿಪೂಜೆಗಳು ನಡೆದವು. ವಿದ್ಯುತ್ ದೀಪಗಳಿಂದ ಅಲಂಕರಿಸಲಾದ ಚರ್ಚ್‌ಗಳ ಆವರಣದಲ್ಲಿ ಮತ್ತು ಕ್ರೈಸ್ತರ ಮನೆಯ ಆವರಣದಲ್ಲಿ ಆಕರ್ಷಕ ಕ್ರಿಬ್‌ಗಳನ್ನು (ಗೋದಲಿ) ನಿರ್ಮಿಸಲಾಗಿತ್ತು. ತಾರೆ (ನಕ್ಷತ್ರ)ಗಳನ್ನು ನೇತು ಹಾಕಲಾಗಿತ್ತು. ಕ್ರಿಸ್ಮಸ್ ಗೀತೆಗಳು (ಕ್ಯಾರೊಲ್ಸ್) ಆಚರಣೆಗೆ ವಿಶೇಷ ಕಳೆ ನೀಡಿತ್ತು. ಕ್ರಿಸ್ಮಸ್ ತಾತಾ ‘ಸಾಂತಾಕ್ಲಾಸ್’ ಆಗಮನ ವಿಶೇಷ ಆಕರ್ಷಣೆಯಾಗಿತ್ತು.
ಚರ್ಚ್‌ಗಳಲ್ಲಿ ರಾತ್ರಿ ವೇಳೆ ಜರಗಿದ ವಿಶೇಷ ಪ್ರಾರ್ಥನೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕ್ರೈಸ್ತರು ಶ್ರದ್ಧೆ ಮತ್ತು ಭಕ್ತಿಯಿಂದ ಭಾಗವಹಿಸಿದ್ದರು. ಬಲಿ ಪೂಜೆಯ ಬಳಿಕ ಕ್ರೈಸ್ತಬಾಂಧವರು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರಲ್ಲದೆ, ಕೇಕ್‌ಗಳನ್ನು ಹಂಚಿಕೊಂಡರು.
ಮಂಗಳೂರಿನ ರೊಝಾರಿಯೊ ಕೆಥೆಡ್ರಲ್‌ನಲ್ಲಿ ನಡೆದ ಸಂಭ್ರಮದ ಬಲಿ ಪೂಜೆಯಲ್ಲಿ ಧರ್ಮ ಪ್ರಾಂತದ ಬಿಷಪ್ ರೆ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಸಂದೇಶ ನೀಡಿದರು. ಕೆಥೆಡ್ರಲ್‌ನ ಪ್ರಧಾನ ಗುರು ಫಾ. ಜೆ.ಬಿ. ಕ್ರಾಸ್ತಾ ಮತ್ತಿತರ ಗುರುಗಳು ಉಪಸ್ಥಿತರಿದ್ದರು.
ಬಲ್ಮಠದಲ್ಲಿರುವ ಚರ್ಚ್ ಆ್ ಸೌತ್ ಇಂಡಿಯಾ (ಸಿ.ಎಸ್.ಐ.) ಇದರ ಮಹಾ ದೇವಾಲಯದಲ್ಲಿ ಮತ್ತು ಇತರ ಸಿಎಸ್‌ಐ ದೇವಾಲಯಗಳಲ್ಲಿಯೂ ವಿಶೇಷ ಬಲಿ ಪೂಜೆಗಳು ನಡೆದವು.
ಕ್ರಿಸ್‌ಮಸ್ ಆಚರಣೆಯ ಬೆನ್ನಿಗೆ ಹೊಸ ವರ್ಷಾಚರಣೆಯೂ ನಡೆಯುವುದರಿಂದ ನಗರದಲ್ಲಿ ಪ್ರಮುಖ ವ್ಯಾಪಾರ ಮಳಿಗೆಗಳು ಮತ್ತು ಹೊಟೇಲ್‌ಗಳು ಕೂಡಾ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ಶನಿವಾರ ವ್ಯಾಪಾರ ಮಳಿಗೆಗಳಲ್ಲಿ ಮತ್ತು ಬೇಕರಿಗಳಲ್ಲಿ ಕ್ರಿಸ್‌ಮಸ್ ಆಚರಣೆಯ ಸಾಮಗ್ರಿಗಳ ಮತ್ತು ಸಿಹಿ ತಿಂಡಿಗಳ ಖರೀದಿ ಭರಾಟೆಯಿಂದ ನಡೆದಿತ್ತು. ರವಿವಾರ ಕ್ರಿಸ್‌ಮಸ್ ಹಬ್ಬದ ಆಚರಣೆ ನಡೆಯಲಿದೆ. ಚರ್ಚ್‌ಗಳಲ್ಲಿ ಹಬ್ಬದ ಬಲಿ ಪೂಜೆ, ಶುಭಾಶಯಗಳ ವಿನಿಮಯ ನಡೆಯಲಿದೆ. ಕ್ರಿಸ್ಮಸ್ ವಿಶೇಷ ತಿಂಡಿ ಕುಸ್ವಾರ್ ವಿನಿಮಯ ಮತ್ತು ವಿತರಣೆ ನೇರವೇರಲಿದೆ. ಮನೆಗಳಲ್ಲಿ ಹಬ್ಬದ ಭೋಜನ ಜರಲಿದೆ.