×
Ad

ರೇಶನ್ ಕಾರ್ಡ್-ಆಧಾರ್ ಲಿಂಕಿಂಗ್: ತಿಂಗಳಾಂತ್ಯದಲ್ಲಿ ಮುಗಿಸಲು ಸಚಿವ ಖಾದರ್ ಸೂಚನೆ

Update: 2016-12-24 21:58 IST

ಮಂಗಳೂರು, ಡಿ.24: ಪಡಿತರ ಚೀಟಿಗಳಿಗೆ ಆಧಾರ್ ಸಂಖ್ಯೆಗಳನ್ನು ಲಿಂಕಿಂಗ್ ಮಾಡು ಪ್ರಕ್ರಿಯೆಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಆಹಾರ ಮತ್ತು ನಾಗರಿಕರ ಸರಬರಾಜು ಸಚಿವ ಯು.ಟಿ. ಖಾದರ್ ಸೂಚನೆ ನೀಡಿದ್ದಾರೆ.

 ಅವರು ಶನಿವಾರ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯ ವೀಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದರು. ಆಧಾರ್ ಸೀಡಿಂಗ್ ಪ್ರಕ್ರಿಯೆಯನ್ನು ಆಹಾರ, ಕಂದಾಯ ಹಾಗೂ ಇತರ ಇಲಾಖೆ ಅಧಿಕಾರಿಗಳ ಮೂಲಕ ತ್ವರಿತಗೊಳಿಸಲು ಸಚಿವರು ಸೂಚಿಸಿದರು.

ಕೆಲವು ಪಡಿತರ ಚೀಟಿದಾರರು ಮನೆ ಬದಲಾಯಿಸಿ, ಪ್ರಸಕ್ತ ಆಧಾರ್ ಕಾರ್ಡಿನಲ್ಲಿರುವ ವಿಳಾಸದಲ್ಲಿ ಇಲ್ಲದಿರುವುದರಿಂದ ಅಂತಹವರ ಆಧಾರ್ ಲಿಂಕಿಂಗ್ ಸಮಸ್ಯೆಯಾಗಿದೆ. ಇವರು ಕೂಡಲೇ ಆಧಾರ್ ಕಾರ್ಡಿನಲ್ಲಿ ತಮ್ಮ ವಿಳಾಸವನ್ನು ಬದಲಾಯಿಸಿ, ನೀಡಬೇಕಾಗಿದೆ ಎಂದು ಸಚಿವರು ಹೇಳಿದರು.

ಬಿಪಿಎಲ್ ಕಾರ್ಡುದಾರರಿಗೆ ಉಚಿತ ಗ್ಯಾಸ್ ಸಂಪರ್ಕ ಒದಗಿಸುವ ಉಜ್ವಲ ಯೋಜನೆಯ ಜಾರಿಗೆ ಈಗಾಗಲೇ ಪ್ರತಿಯೊಂದು ಜಿಲ್ಲೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅರ್ಜಿದಾರರಿಗೆ ಗ್ಯಾಸ್ ಕಂಪೆನಿಯು ಉಚಿತ ಗ್ಯಾಸ್ ಸಂಪರ್ಕ ನೀಡಲಿದ್ದು, ಕರ್ನಾಟಕ ಸರಕಾರವು ಗ್ಯಾಸ್ ಸ್ಟವ್‌ನ್ನು ಉಚಿತವಾಗಿ ನೀಡಲಿದೆ. ಯೋಜನೆಯ ಪರಿಣಾಮಕಾರಿ ಜಾರಿಗೆ ಮುತುವರ್ಜಿ ವಹಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸಚಿವ ಖಾದರ್ ನಿರ್ದೇಶಿಸಿದರು.

 ಹೊಸ ರೇಷನ್ ಕಾರ್ಡ್ ನೀಡಲು ಈಗಾಗಲೇ ಆಹಾರ ಇಲಾಖೆಯು ಸನ್ನದ್ಧಗೊಂಡಿದೆ. ನಗರ ಪ್ರದೇಶಗಳಲ್ಲಿ ಆಯಾ ನಗರ ಸ್ಥಳೀಯ ಸಂಸ್ಥೆಗಳ ವಾರ್ಡು ಕಂದಾಯ ನಿರೀಕ್ಷಕರನ್ನು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಇದಕ್ಕಾಗಿ ಪರಿಶೀಲನಾಧಿಕಾರಿಯಾಗಿ ನೇಮಿಸಲಾಗಿದೆ. ಇವರಿಗೆ ಪಡಿತರ ಚೀಟಿ ನೀಡಲು ಲಾಗಿನ್ ನೀಡಲಾಗುವುದು. ಬಳಿಕ ಅರ್ಜಿದಾರರಿಗೆ ನೇರವಾಗಿ ಸ್ಪೀಡ್ ಪೋಸ್ಟ್ ಮೂಲಕ ರೇಶನ್ ಕಾರ್ಡು ತಲುಪಿಸಲಾಗುವುದು ಎಂದು ಸಚಿವರು ಹೇಳಿದರು.

ಪಡಿತರ ಆಹಾರ ಕೂಪನ್‌ಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲೇ ನೀಡಲು ಬೇಕಾದ ಅಗತ್ಯ ವ್ಯವಸ್ಥೆಗಳನ್ನು ಸಂಬಂಧಪಟ್ಟ ಅಂಗಡಿಯವರೇ ವ್ಯವಸ್ಥೆ ಮಾಡಬೇಕು. ಮಾರ್ಚ್ 31ರೊಳಗೆ ಇದನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಸಚಿವ ಯು.ಟಿ. ಖಾದರ್ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News