ಅ.ಭಾರತ ಸಂಸ್ಕೃತ ಅಧಿವೇಶನಕ್ಕೆ ಚಪ್ಪರ ಮುಹೂರ್ತ
ಉಡುಪಿ, ಡಿ.24:ಸಂಸ್ಕೃತ ಭಾರತಿಯ ವತಿಯಿಂದ ಮುಂದಿನ ಜ.5ರಿಂದ 8ರವರೆಗೆ ಒಟ್ಟು ನಾಲ್ಕು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ಸಂಸ್ಕೃತ ಅಧಿವೇಶನಕ್ಕಾಗಿ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ ಪಕ್ಕದ ವಾಹನ ನಿಲುಗಡೆ ವಿಶಾಲ ಜಾಗದಲ್ಲಿ ಶನಿವಾರ ಚಪ್ಪರ ಮುಹೂರ್ತವನ್ನು ನೆರವೇರಿಸಲಾಯಿತು.
ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಅಧಿವೇಶನದ ಪ್ರದರ್ಶಿನಿ, ಪಾಕಶಾಲೆ ಹಾಗೂ ಭೋಜನ ಶಾಲೆಯ ಚಪ್ಪರ ಮುಹೂರ್ತವನ್ನು ನಂದಳಿಕೆ ವಿಠಲಾರ್ಚಾಯರ ಪೌರೋಹಿತ್ಯದಲ್ಲಿ ಇಂದು ನೆರವೇರಿಸಿದರು.
ಸಂಸ್ಕೃತ ಎಂಬುದು ನಮ್ಮ ದೇಶದ ಭಾಷೆ; ಅದು ವಿದೇಶ ಭಾಷೆ ಅಲ್ಲ. ಸಂಸ್ಕೃತದ ಮೇಲಿನ ಅಭಿಮಾನದಿಂದ ಎಲ್ಲರೂ ಇದರೊಂದಿಗೆ ಕೈಜೋಡಿಸುವಂತೆ ಅವರು ಮನವಿ ಮಾಡಿದರು.
ಅಧಿವೇಶನದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಕೃತ ಭಾರತಿಯ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ದಿನೇಶ್ ನಾಯಕ್, ಸಮ್ಮೇಳನದ ಅಂಗವಾಗಿ ಪ್ರದರ್ಶನ ಜ.5ರ ಸಂಜೆ ಉದ್ಘಾಟನೆಗೊಳ್ಳಲಿದೆ. ಮರುದಿನದಿಂದ ಮೂರು ದಿನ ಅಧಿವೇಶನ ನಡೆಯಲಿದೆ. ವಿದೇಶಗಳ ಕೆಲವರು ಸೇರಿ ದೇಶದಾದ್ಯಂತದಿಂದ 2000ಕ್ಕೂ ಅಧಿಕ ಪ್ರತಿನಿಧಿಗಳು ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಲೋಕಸಭಾ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಅಧಿವೇಶನವನ್ನು ಉದ್ಘಾಟಿಸಲಿದ್ದಾರೆ.
ಇಸ್ರೋದ ಅಧ್ಯಕ್ಷ ಕಿರಣ್‌ಕುಮಾರ್, ಮಣಿಪಾಲ ಗ್ಲೋಬಲ್‌ನ ಸಿಇಓ ಡಾ.ರಂಜನ್ ಪೈ, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಉಪಸ್ಥಿತರಿರುವರು.