ಕಪ್ಪುಸಮುದ್ರದಲ್ಲಿ ಪತನಗೊಂಡ ರಶ್ಯಸೇನಾಪಡೆ ವಿಮಾನದ ಅವಶೇಷ ಪತ್ತೆ
ಸೋಚಿ, ಡಿ.25: ಮಿಲಿಟರಿ ಅಧಿಕಾರಿಗಳು, ಸಂಗೀತಗಾರರು ಹಾಗೂ ಪತ್ರಕರ್ತರು ಸೇರಿದಂತೆ 91 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ರಶ್ಯ ಸೇನಾಪಡೆಗೆ ಸೇರಿರುವ ವಿಮಾನ ಕಪ್ಪು ಸಮುದ್ರದಲ್ಲಿ ಪತನಗೊಂಡಿದ್ದು, ವಿಮಾನದ ಅವಶೇಷ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಸೋಚಿ ಸಮುದ್ರ ತೀರದಿಂದ 6 ಕಿ.ಮೀ.ದೂರದಲ್ಲಿ ವಿಮಾನ ಪತನಕ್ಕೆ ಬಲಿಯಾದ ವ್ಯಕ್ತಿಯೊಬ್ಬರ ಮೃತದೇಹವನ್ನು ವಶಪಡಿಸಲಾಗಿದ್ದು, ಉಳಿದ ಪ್ರಯಾಣಿಕರ ಅವಶೇಷಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ರಕ್ಷಣಾಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ರಶ್ಯಾದ ಮಿಲಿಟರಿ ವಿಮಾನವೊಂದು ಸೋಚಿಯ ಅಡ್ಲೆರ್ ಸಿಟಿಯಿಂದ ಟೇಕ್ ಆಫ್ ಆದ ಕೆಲವೇ ನಿಮಿಷದಲ್ಲಿ ರ್ಯಾಡರ್ ಸಂಪರ್ಕ ಕಡಿದುಕೊಂಡು ನಿಗೂಢವಾಗಿ ನಾಪತ್ತೆಯಾಗಿತ್ತು.
82 ಪ್ರಯಾಣಿಕರು ಹಾಗೂ 10 ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿದ್ದ ಟಿಯು-154 ವಿಮಾನ ರಶ್ಯಾದ ಸೋಚಿಯಿಂದ ಸಿರಿಯಾದ ಲಟಾಕಿಯಾಗೆ ತೆರಳುತ್ತಿತ್ತು. ವಿಮಾನ ಟೇಕ್-ಆಫ್ ಆದ 20 ನಿಮಿಷಗಳಲ್ಲಿ ರ್ಯಾಡರ್ ಸಂಪರ್ಕ ಕಡಿತಗೊಂಡಿತ್ತು ಎಂದು ರಶ್ಯದ ನ್ಯೂಸ್ ಏಜೆನ್ಸಿ ಟಿಎಎಸ್‌ಎಸ್‌ಗೆ ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸಿರಿಯಾದ ಲಟಾಕಿಯದಲ್ಲಿರುವ ರಶ್ಯದ ವಾಯುನೆಲೆಯಲ್ಲಿ ನ್ಯೂ ಇಯರ್ ಕಾರ್ಯಕ್ರಮ ನೀಡಲು ಮಿಲಿಟರಿ ಮ್ಯೂಸಿಕ್ ಬ್ಯಾಂಡ್‌ನ ಸದಸ್ಯರು, ಸೈನಿಕರು ಹಾಗೂ 9 ವರದಿಗಾರರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ರಶ್ಯದ ಟಿವಿ ಚಾನಲ್‌ವೊಂದು ತಿಳಿಸಿದೆ.