×
Ad

ನಿಲಂಬೂರ್ ಎನ್‌ಕೌಂಟರ್: ಪೊಲೀಸರ ವಿರುದ್ಧ ಕೇಸು ದಾಖಲು

Update: 2016-12-25 12:46 IST

ಕ್ಯಾಲಿಕಟ್, ಡಿ.25 : ಕೇರಳದ ನಿಲಂಬೂರ್ ಕರುಳಾಯಿ ಅರಣ್ಯದಲ್ಲಿ ಮಾವೊವಾದಿಗಳನ್ನು ಕೊಂದು ಹಾಕಿದ ಘಟನೆಯಲ್ಲಿ ಪೊಲೀಸರ ವಿರುದ್ಧ ಪಿಯುಸಿಎಲ್ ರಾಜ್ಯಾಧ್ಯಕ್ಷ ಅಡ್ವೊಕೇಟ್ ಪಿ.ಎ. ಪೌರನ್ ಎಂಬವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕ್ರೈಂಬ್ರಾಂಚ್ ಕೇಸು ದಾಖಲಿಸಿದೆ ಎಂದು ವರದಿಯಾಗಿದೆ.

 ಇತ್ತೀಚೆಗೆ ನಿಲಂಬೂರ್ ಕರುಳಾಯಿಯಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಇಬ್ಬರು ಮಾವೊವಾದಿಗಳನ್ನು ಕೊಲೆಮಾಡಲಾಗಿತ್ತು. ಎನ್‌ಕೌಂಟರ್‌ಗೆ ಕಾರಣರಾದ ಮಲಪ್ಪುರಂ ಎಸ್ಪಿ, ದೇಬೇಷ್ ಕುಮಾರ್ ಬೆಹ್ರ, ಥಂಡರ್‌ಬೋಟ್ ವಿಶೇಷಾಧಿಕಾರಿ ವಿಜಯಕುಮಾರ್, ಉಪ ವಿಭಾಗೀಯ ದಂಡಾಧಿಕಾರಿ ಜಾಫರ್ ಮಾಲಿಕ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇವರ ವಿರುದ್ಧ ಸುಪ್ರೀಂಕೋರ್ಟು ತೀರ್ಪು ಆಧಾರದಲ್ಲಿ ಕೇಸು ದಾಖಲಿಸಬೇಕೆಂದು ಆಗ್ರಹಿಸಿ ಕ್ರೈಂಬ್ರಾಂಚ್ ಐಜಿ ಬಲ್‌ರಾಂ ಕುಮಾರ್ ಉಪಾಧ್ಯಾಯಗೆ ಪಿಯುಸಿಎಲ್ ಅಧ್ಯಕ್ಷ ಪಿ.ಎ. ಪೌರನ್ ದೂರು ನೀಡಿದ್ದರು. ಈ ಹಿಂದೆ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟಿದ್ದ ಕುಪ್ಪು ದೇವರಾಜ್, ಅಜಿತಾರನ್ನು ಆರೋಪಿಗಳೆಂದು ಹೆಸರಿಸಿ ಪೊಲೀಸರು ಕೇಸು ದಾಖಲಿಸಿದ್ದರು.

   ಮಹಾರಾಷ್ಟ್ರದ 175 ಎನ್‌ಕೌಂಟರ್ ಪ್ರಕರಣಗಳನ್ನು ತನಿಖೆ ನಡೆಸುವಂತೆ, ನಕಲಿ ಎನ್‌ಕೌಂಟರ್ ನಡೆಸಿರುವ ಪೊಲೀಸರನ್ನು ಶಿಕ್ಷಿಸುವಂತೆ ಪಿಯುಸಿಎಲ್ ಸಲ್ಲಿಸಿದ್ದ ಇನ್ನೊಂದು ಅರ್ಜಿಯಲ್ಲಿ ಸುಪ್ರೀಂಕೋರ್ಟು ಮುಖ್ಯ ನ್ಯಾಯಾಧೀಶ ಆರ್.ಎಂ.ಲೋಧ ಅಧ್ಯಕ್ಷರಾಗಿದ್ದ ಸುಪ್ರೀಂಕೋರ್ಟು ಪೀಠ 2014ರಲ್ಲಿ ಸುಪ್ರಧಾನ ತೀರ್ಪು ನೀಡಿತ್ತು.

  ಮಹಾರಾಷ್ಟ್ರ ಸರಕಾರದ ವಿರುದ್ಧ ಕೇಸು ದಾಖಲಿಸಲು ಅಂದು ಸುಪ್ರೀಂಕೋರ್ಟು ಆದೇಶಿಸಿತ್ತು. ಭವಿಷ್ಯದಲ್ಲಿ ಇಂತಹ ಎನ್‌ಕೌಂಟರ್ ವೇಳೆ ಪಾಲಿಸಬೇಕಾದ 16 ಮಾರ್ಗಸೂತ್ರಗಳನ್ನು ಹೊರಡಿಸಿತ್ತು. ಎನ್‌ಕೌಂಟರ್, ಕೊಲೆ ನಡೆದಾಗ ಅದಕ್ಕೆ ಸಂಬಂಧಿಸಿದಂತೆ ಪೊಲೀಸರ ವಿರುದ್ಧ ಎಫ್‌ಐಆರ್ ಸಲ್ಲಿಸುವುದು ಮಾರ್ಗಸೂಚಿಯಲ್ಲಿರುವ ಪ್ರಮುಖ ನಿರ್ದೇಶವಾಗಿದೆ.

ಇದು ನಿಲಂಬೂರ್ ಎನ್‌ಕೌಂಟರ್‌ನಲ್ಲಿ ಪಾಲಿಸಲಿಲ್ಲ ಎಂದು ಅಡ್ವೊಕೇಟ್ ಪೌರನ್ ದೂರಿನಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News