ನಗದು ಹಿಂಪಡೆಯುವಿಕೆಯ ನಿರ್ಬಂಧ ಮುಂದುವರಿಕೆ?
ಹೊಸದಿಲ್ಲಿ, ಡಿ.25: ಬ್ಯಾಂಕ್‌ಗಳು ಹಾಗೂ ಎಟಿಎಂಗಳಿಂದ ನಗದು ಹಿಂಪಡೆಯುವಿಕೆಗೆ ವಿಧಿಸಲಾಗಿರುವ ನಿರ್ಬಂಧವನ್ನು ಡಿ.30ರ ಬಳಿಕವೂ ವಿಸ್ತರಿಸುವ ಸಾಧ್ಯತೆಯಿದೆ.
ಕರೆನ್ಸಿ ನೋಟುಗಳ ಪ್ರಿಂಟಿಂಗ್ ಪ್ರೆಸ್‌ಗಳು ಹಾಗೂ ಆರ್‌ಬಿಐಗೆ ಹೊಸ ಕರೆನ್ಸಿ ನೋಟುಗಳ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗದೇ ಇರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ದೇಶದ ಹೆಚ್ಚಿನ ಕಡೆಗಳಲ್ಲಿರುವ ಬ್ಯಾಂಕ್‌ಗಳು ಈಗಿರುವ ಪ್ರತಿ ವಾರ 24,000 ರೂ. ನಗದು ಮಿತಿಯನ್ನು ವಿತರಿಸಲು ಕಷ್ಟಪಡುತ್ತಿವೆ. ಜ.2ರ ಬಳಿಕ ನಗದು ಹಿಂಪಡೆಯುವ ಮಿತಿಯನ್ನು ಹಿಂಪಡೆದರೆ ಬ್ಯಾಂಕ್‌ಗಳಿಗೆ ನಗದು ಪೂರೈಸಲು ಇನ್ನಷ್ಟು ಕಷ್ಟವಾಗುತ್ತದೆ.
ನಗದು ಹಿಂಪಡೆಯಲು ಹೇರಲಾಗಿರುವ ಮಿತಿಯನ್ನು ಸಂಪೂರ್ಣವಾಗಿ ರದ್ದುಪಡಿಸುವ ಸಾಧ್ಯವಿಲ್ಲ. ನಗದು ಬಿಕ್ಕಟ್ಟು ನಿವಾರಣೆಯಾದ ಬಳಿಕ ಈ ಕ್ರಮ ಕೈಗೊಳ್ಳಬಹುದು ಎಂದು ಸಾರ್ವಜನಿಕ ವಲಯದ ಹಿರಿಯ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ. ಎಲ್ಲ ಬ್ಯಾಂಕ್‌ಗಳಲ್ಲಿ ಸಾಕಷ್ಟು ನಗದು ಲಭ್ಯವಾಗುವ ತನಕ ನಗದು ಹಿಂಪಡೆಯಲು ವಿಧಿಸಲಾಗಿರುವ ನಿರ್ಬಂಧವನ್ನು ಹಿಂದಕ್ಕೆ ಪಡೆಯುವ ಸಾಧ್ಯತೆಯಿಲ್ಲ ಎಂದು ಎಸ್‌ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಇತ್ತೀಚೆಗೆ ಸುಳಿವು ನೀಡಿದ್ದರು.
ಡಿ.30ರ ಬಳಿಕವೇ ನಗದು ಹಿಂಪಡೆಯುವ ಬಗ್ಗೆ ಹೇರಲಾಗಿರುವ ನಿರ್ಬಂಧದ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದು ಹಣಕಾಸು ಕಾರ್ಯದರ್ಶಿ ಅಶೋಕ್ ಲಾವಸಾ ಹೇಳಿದ್ದಾರೆ.
ಬ್ಯಾಂಕ್‌ಗಳು ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ನಗದು ಹಿಂಪಡೆಯಲು ಹೇರಲಾಗಿರುವ ನಿರ್ಬಂಧವನ್ನು ಮುಂದುವರಿಸುವುದು ಹೆಚ್ಚು ಸೂಕ್ತ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.