ಉಡುಪಿ ಶ್ರೀಕೃಷ್ಣಮಠಕ್ಕೆ ಕೇಂದ್ರ ರಕ್ಷಣಾ ಸಚಿವ ಪಾರಿಕ್ಕರ್ ಭೇಟಿ

Update: 2016-12-25 12:36 GMT

ಉಡುಪಿ, ಡಿ.25: ಕೇಂದ್ರ ರಕ್ಷಣಾ ಸಚಿವ ಮನೋಹರ್ ಪ್ರಭು ಪಾರಿಕ್ಕರ್ ರವಿವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ ದರ್ಶನ ಪಡೆದು ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.

ಬಳಿಕ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರನ್ನು ಪೇಜಾ ವರ ಶ್ರೀ ಸನ್ಮಾನಿಸಿದರು.

ಸಚಿವರು ದೇಶದ ಬಹಳ ದೊಡ್ಡ ಜವಾಬ್ದಾರಿ ಯಾಗಿರುವ ರಕ್ಷಣೆಯ ಹೊಣೆಯನ್ನು ಹೊಂದಿದ್ದಾರೆ. ಇವರು ಮಧ್ವ ಸಿದ್ಧಾಂತದ ಅನುಯಾಯಿಯಾಗಿದ್ದಾರೆ. ಸಚಿವರು ಫೆ.6ರಂದು ನಡೆಯುವ ಮಧ್ವಾಚಾರ್ಯರ ಸಪ್ತ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಒಪ್ಪಿದ್ದಾರೆ ಎಂದು ಪೇಜಾವರ ಶ್ರೀ ತಿಳಿಸಿದರು.

ಬಳಿಕ ಮಾತನಾಡಿದ ಸಚಿವ ಮನೋಹರ್ ಪಾರಿಕ್ಕರ್, ಉಡುಪಿ ಮಠವು ಭಕ್ತಿಯ ಮಾರ್ಗ ಹಾಗೂ ಗೋಸರಂಕ್ಷಣೆಯ ಬಗ್ಗೆ ಉತ್ತಮವಾದ ಕೆಲಸ ನಿರ್ವಹಿಸುತ್ತಿದೆ. ಇಲ್ಲಿಗೆ ಬರಲು ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ. ಸ್ವಾಮೀಜಿಯ ಆಶೀರ್ವಾದ ಪಡೆದುಕೊಂಡಿದ್ದೇನೆ ಎಂದು ಹೇಳಿದರು.

ಪೇಜಾವರ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ದಿವಾನ ಎಂ.ಎಂ.ರಘುರಾಮಾಚಾರ್ಯ, ಆಪ್ತ ಕಾರ್ಯದರ್ಶಿ ವಿಷ್ಣು ಆಚಾರ್ಯ, ಶಶಾಂಕ ಭಟ್, ಮಂಗಳೂರು ಸಂಸದ ನಳಿನ್‌ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ನೋಟು ರದ್ಧತಿ ಒಳ್ಳೆಯ ನಿರ್ಧಾರ: ಪಾರಿಕ್ಕರ್

ನೋಟು ರದ್ಧತಿಯು ಪ್ರಧಾನ ಮಂತ್ರಿಯವರ ಬಹಳ ಒಳ್ಳೆಯ ನಿರ್ಣಯವಾಗಿದ್ದು, ಎಲ್ಲರು ಇದನ್ನು ಬೆಂಬಲಿಸಿದ್ದಾರೆ. ಆದರೆ ಇಷ್ಟ ಪಡದ ಕೆಲವರು ಮಾತ್ರ ಇದನ್ನು ವಿರೋಧಿಸುತ್ತಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News