ಚುನಾವಣೆಯಲ್ಲಿ ಪ್ಲಾಸ್ಟಿಕ್ ಧ್ವಜ-ಬ್ಯಾನರ್ ನಿಯಂತ್ರಿಸುವಂತೆ ಸರಕಾರಕ್ಕೆ ಎನ್‌ಜಿಟಿ ಆದೇಶ

Update: 2016-12-25 13:43 GMT

ಹೊಸದಿಲ್ಲಿ, ಡಿ.25: ಚುನಾವಣೆಗಳ ವೇಳೆ ರಾಜಕೀಯ ಪಕ್ಷಗಳು ಪಾಲಿವಿನೈಲ್ ಕ್ಲೋರೈಡ್(ಪಿವಿಸಿ) ಹಾಗೂ ಇತರ ವಿಧದ ಪ್ಲಾಸ್ಟಿಕ್‌ನ ಧ್ವಜ ಹಾಗೂ ಬ್ಯಾನರ್‌ಗಳನ್ನು ಉಪಯೋಗಿಸುವುದಕ್ಕೆ ನಿಯಂತ್ರಣ ಹೇರುವಂತೆ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು(ಎನ್‌ಜಿಟಿ) ಆದೇಶಿಸಿದೆ.

ಅದರಿಂದ ಪರಿಸರಕ್ಕೆ ಹಾನಿಯಾಗುವುದೆಂಬ ದೂರೊಂದನ್ನು ದಾಖಲಿಸಲಾಗಿತ್ತು.

ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಸ್ವತಂತ್ರಕುಮಾರ್ ನೇತೃತ್ವದ ಪೀಠವೊಂದು ಸಚಿವಾಲಯಕ್ಕೆ ನೋಟಿಸ್ ಜಾರಿಗೊಳಿಸಿ, ಪಿವಿಸಿಯನ್ನು ನಿಯಂತ್ರಿಸುವ ಅಥವಾ ನಿಷೇಧಿಸುವ ಸಂಬಂಧ 6 ತಿಂಗಳೊಳಗೆ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದೆ.

ಬ್ಯಾನರ್, ಧ್ವಜ ಹಾಗೂ ಹೋರ್ಡಿಂಗ್‌ಗಳಲ್ಲಿ ಪಿವಿಸಿ ಹಾಗೂ ಕ್ಲೋರಿನ್‌ಯುಕ್ತ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ ಅಥವಾ ನಿಯಂತ್ರಿಸುವ ಸಂಬಂಧ ಸಚಿವಾಲಯವು ನಿರ್ಧಾರವೊಂದನ್ನು ಕೈಗೊಳ್ಳಲಿದೆ. ಸಚಿವಾಲಯದೊಂದಿಗೆ ಈ ವಿಷಯವನ್ನು ಮುಂದುವರಿಸುವ ಸ್ವಾತಂತ್ರ ಅರ್ಜಿದಾರರಿಗಿದೆ. ಅದಕ್ಕಾಗಿ ಸಚಿವಾಲಯವು ತ್ವರಿತವಾಗಿ ಈ ವಿಷಯವನ್ನು ನಿಭಾಯಿಸಬೇಕು. ನ್ಯಾಯಾಧಕರಣದ ತೀರ್ಪಿನನ್ವಯ ನಿಗದಿಪಡಿಸಿದ ಸಮಯದೊಳಗೆ ಅದನ್ನು ಮಾಡಬೇಕೆಂದು ಪೀಠವು ಆದೇಶಿಸಿದೆ.

ಆಂಧ್ರಪ್ರದೇಶದ ನಿವಾಸಿ ರವಿಕಿರಣ್ ಸಿಂಗ್ ಎಂಬವರು ಈ ಸಂಬಂಧ ಅರ್ಜಿ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News