×
Ad

ಜಿಎಸ್‌ಬಿ ಸಮಾಜ ಆದರ್ಶ ಸಮಾಜವಾಗಿ ದೇಶಕ್ಕೆ ಮಾರ್ಗದರ್ಶನ ನೀಡಲಿ :ಮನೋಹರ ಪಾರಿಕ್ಕರ್

Update: 2016-12-25 19:17 IST

ಹೆಜಮಾಡಿ, ಡಿ.25: ರಾಷ್ಟ್ರ ನಿರ್ಮಾಣದಲ್ಲಿ ಸಾರಸ್ವತ ಸಮಾಜದ ಕೊಡುಗೆ ದೊಡ್ಡದಿದ್ದು, ಸಾರಸ್ವತ ಸಮಾಜ ಆದರ್ಶ ಸಮಾಜವಾಗಿ ಹೊರಹೊಮ್ಮಿ ರಾಷ್ಟ್ರಕ್ಕೆ ಮಾರ್ಗದರ್ಶನ ನೀಡಬೇಕಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪ್ರಭು ಪಾರಿಕ್ಕರ್ ಹೇಳಿದರು.

 ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ವತಿಯಿಂದ ಪಡುಬಿದ್ರಿ ಸಮೀಪದ ಹೆಜಮಾಡಿಯ ಬಸ್ತಿಪಡ್ಪು ಮೈದಾನದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸಭಾಂಗಣದ ಉಳ್ಳಾಲ ಶ್ರೀನಿವಾಸ ಮಲ್ಯ ವೇದಿಕೆಯಲ್ಲಿ ರವಿವಾರ ನಡೆದ ವಿಶ್ವ ಜಿಎಸ್‌ಬಿ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಗಾಯಾಳು ಸೈನಿಕರ ಕಲ್ಯಾಣ ನಿಧಿಗಾಗಿ ರಾಷ್ಟ್ರ ರಕ್ಷಾನಿಧಿ ಅಭಿಯಾನದ ಮೂಲಕ ಸಂಗ್ರಹಿಸಲಾದ ಒಂದು ಕೋಟಿ ರೂ.ಗಳ ಡಿಡಿಯನ್ನು ಬಂಟ್ವಾಳ ಸುಬ್ರಾಯ ಬಾಳಿಗಾರ ಮೂಲಕ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಗೋವಾದಿಂದ ರಾಷ್ಟ್ರದಾದ್ಯಂತ ಹಬ್ಬಿರುವ ಸಾರಸ್ವತರು ರಾಷ್ಟ್ರ ನಿರ್ಮಾಣದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಸಾರಸ್ವತರ ಹಿರಿಮೆ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಶಿಕ್ಷಣ, ಕಾನೂನು, ಆರೋಗ್ಯ ಹಾಗೂ ಇತರೆಲ್ಲಾ ಸೇವಾ ಕ್ಷೇತ್ರಗಳಲ್ಲಿ ಕಾಣಲು ಸಿಗುತ್ತದೆ ಎಂದರು.

ಸೈನಿಕರ ಸಹಾಯಾರ್ಥ ನಿಧಿಗೆ ನೀಡಲಾದ ಮೊತ್ತದ ಕುರಿತು ಮಾತನಾಡಿದ ಅವರು, ಕೊಡುವ ಮನಸ್ಸು ಮುಖ್ಯವೇ ಹೊರತು ಎಷ್ಟು ಕೊಟ್ಟರೆಂಬುದು ನಗಣ್ಯವಾಗುತ್ತದೆ ಎಂದರು. ಇದಕ್ಕಾಗಿ ಜಿಎಸ್‌ಬಿ ಹಿತರಕ್ಷಣಾ ವೇದಿಕೆ ಆರಂಭಿಸಿದ ಅಭಿಯಾನವನ್ನು ಅವರು ಶ್ಲಾಘಿಸಿದರು.

ಜ್ಞಾನವನ್ನು ಲೋಕಕಲ್ಯಾಣಕ್ಕೆ ಮೀಸಲಿಟ್ಟ ಸಮಾಜ ನಮ್ಮದು. ಜ್ಞಾನವು ವೌಲ್ಯಯುತ ಸಮಾಜದ ನಿರ್ಮಾಣಕ್ಕೆ ಬುನಾದಿಯಾಗಿದೆ. ನಮ್ಮ ಸಮಾಜ ಶಿಕ್ಷಣಕ್ಕೆ ಒತ್ತು ನೀಡಬೇಕಿದೆ. ನಮಗಿಂದು ವೌಲ್ಯಯುತ ಶಿಕ್ಷಣ ಹಾಗೂ ಸಮಗ್ರ ಶಿಕ್ಷಣ ಬೇಕಾಗಿದೆ. ಸರಸ್ವತಿಯ ಉಪಾಸನೆಗೈದು, ಸರಸ್ವತ ಮುನಿಯ ಮಾರ್ಗದರ್ಶನದಿಂದ ನಮ್ಮ ಸಮಾಜಕ್ಕೆ ಎಲ್ಲವೂ ಸಾಧ್ಯವಾಗಿದೆ ಎಂದರು.

 ವೌಲ್ಯಯುತ ಶಿಕ್ಷಣಕ್ಕೆ ಉತ್ತಮ ಶಿಕ್ಷಕರ ಅಗತ್ಯವಿದೆ. ಪ್ರತಿಯೊಂದು ಮನೆಯಿಂದಲೇ ವೌಲ್ಯಯುತ ಶಿಕ್ಷಣದ ಆರಂಭವಾಗಬೇಕು ಎಂದ ಅವರು, ರಾಷ್ಟ್ರರಕ್ಷಾ ನಿಧಿ ಅಭಿಮಾನದ ಸಂಕೇತ ಎಂದು ನುಡಿದರು.

ಸಮ್ಮೇಳನವನ್ನು ಉದ್ಘಾಟಿಸಿದ ನಾಗಾಲ್ಯಾಂಡ್‌ನ ರಾಜ್ಯಪಾಲ ಪಿ.ಬಿ. ಆಚಾರ್ಯ ಮಾತನಾಡಿ, ಜ್ಞಾನದಿಂದ ಮನುಷ್ಯನ ಸಬಲೀಕರಣವಾಗುತ್ತದೆ. ಸಮಗ್ರ ಶಿಕ್ಷಣದಿಂದ ಜ್ಞಾನಪ್ರಾಪ್ತಿಯಾಗುತ್ತದೆ. ಸಾರಸ್ವತ ಸಮಾಜ ವಿಶಾಲ ಹೃದಯವನ್ನು ಹೊಂದಿದೆ. ಸಮಾಜದ ಆಧಾರ ಸ್ತಂಭಗಳನ್ನು ಗಟ್ಟಿಗೊಳಿಸಬೇಕಿದೆ , ಆಗ ಇದೊಂದು ಬಲಿಷ್ಟ ಕಟ್ಟಡವಾಗಿ ಹೊರಹೊಮ್ಮಲಿದೆ ಎಂದರು.

ಸಾರಸ್ವತ ಮಾಜ ಸರಸ್ವತಿಯ ಜ್ಞಾನ ಹಾಗೂ ಲಕ್ಷ್ಮೀಯ ಸಂಪತ್ತು ಮಿಶ್ರಿತ ಸಮಾಜ. ಈ ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಅತ್ಯುನ್ನತ ಸ್ಥಾನ ಪಡೆದ, ಸಾಧನೆ ಮಾಡಿದವರಿದ್ದಾರೆ. ನಾವು ಸರಿಯಾದ ಶಿಕ್ಷಣದ ಮೂಲಕ ಇದೇ ಹಾದಿಯಲ್ಲಿ ಸಾಗಬೇಕಿದೆ ಎಂದರು.

ಬೆಂಗಳೂರಿನ ಮಣಿಪಾಲ ಗ್ಲೋಬಲ್ ಎಜ್ಯುಕೇಷನ್‌ನ ಅಧ್ಯಕ್ಷ ಟಿ.ವಿ. ಮೋಹನದಾಸ ಪೈ ಅವರು ಕುಂದಾಪುರದ ಶಿಕ್ಷಕಿ ಸುಮತಿ ಶೆಣೈ ಅವರು ಬರೆದ ‘ಸಾರಸ್ವತ ಹೆರಿಟೇಜ್’ ಪುಸ್ತಕವನ್ನು ಬಿಡುಗಡೆಗೊಳಿಸಿ ದಿಕ್ಸೂಚಿ ಭಾಷಣ ಮಾಡಿದರು. ಸಮಾಜದಲ್ಲಿ ಉನ್ನತ ಶಿಕ್ಷಣದ ಅಗತ್ಯತೆಯನ್ನು ಎತ್ತಿ ಹಿಡಿದ ಪೈ, ಪ್ರತಿಯೊಬ್ಬರಿಗೂ ಗುಣಟ್ಟದ ಶಿಕ್ಷಣ ನೀಡುವುದರಿಂದ ಸಧೃಡ ಸಮಾಜ ನಿರ್ಮಾಣ ಸಾಧ್ಯ ಎಂದರು.

ವೇದಿಕೆಯಲ್ಲಿ ಸಮಾಜದ ಮುಂದಾಳುಗಳಾದ ಗೋವಾದ ಶಾಸಕ ಸಿದ್ಧಾರ್ಥ ಕುಂಕೋಳಿಕರ್, ಇನ್ಫೋಸಿಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಯು. ರಾಮದಾಸ ಕಾಮತ್, ಉದ್ಯಮಿಗಳಾದ ಬೆಂಗಳೂರಿನ ಕೆ.ಉಲ್ಲಾಸ್ ಕಾಮತ್, ಹೈದರಾಬಾದ್‌ನ ಅನಂತ ಪೈ, ಮೈಸೂರಿನ ಜಗನ್ನಾಥ ಶೆಣೈ, ಮಣಿಪಾಲದ ಗೌತಮ್ ಪೈ, ಮೈಸೂರಿನ ಬಿ.ಸುಬ್ರಾಯ ಬಾಳಿಗಾ, ಮುಂಬಯಿಯ ರಘುನಂದನ ಕಾಮತ್, ಮಂಗಳೂರು ವಿಶ್ವ ಜಿಎಸ್‌ಬಿ ಕೇಂದ್ರದ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಮಂಗಳೂರಿನ ಪ್ರದೀಪ್ ಪೈ ಮುಂತಾದವರು ಉಪಸ್ಥಿತರಿದ್ದರು.

 ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ಪಿ.ದಯಾನಂದ ಪೈ ಅವರು ಅತಿಥಿಗಳನ್ನು ಸ್ವಾಗತಿಸಿದರು, ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಸಂಚಾಲಕ ಆರ್.ವಿವೇಕಾನಂದ ಶೆಣೈ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಸಾಣೂರು ನರಸಿಂಹ ಕಾಮತ್ ಮತ್ತು ಅವಿನಾಶ ಕಾಮತ್ ಕಾರ್ಯಕ್ರಮ ನಿರೂಪಿಸಿದರು, ನಂದರಗೋಪಾಲ ಶೆಣೈ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News