×
Ad

ಮೇಲಂಗಡಿ ಜುಮಾ ಮಸೀದಿಯಲ್ಲಿ ಮಕ್ಕಳ ಪ್ರತಿಭಾ ಪುರಸ್ಕಾರ

Update: 2016-12-25 19:31 IST

ಉಳ್ಳಾಲ , ಡಿ.25 :  ದ.ಕ. ಜಿಲ್ಲೆಯಲ್ಲೇ 125 ಮುಸ್ಲಿಂ ಸಮುದಾಯದ ಆಂಗ್ಲಮಾಧ್ಯಮ ಶಿಕ್ಷಣ ಸಂಸ್ಥೆಗಳಿದ್ದು ಹೆಮ್ಮೆಯ ವಿಚಾರ, ನಾವು ಸಂಸ್ಕಾರಯುತ ಶಿಕ್ಷಣದ ಮೂಲಕ ಉನ್ನತ ಸ್ಥಾನಕ್ಕೇರಲು ಪ್ರಯತ್ನಿಸಬೇಕು ಎಂದು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್ ಹೇಳಿದರು.

ಉಳ್ಳಾಲ ಮೇಲಂಗಡಿ ಮೊಹಿಯುದ್ದೀನ್ ಜುಮಾ ಮಸೀದಿ (ಹೊಸಪಳ್ಳಿ)ಯಲ್ಲಿ ಶನಿವಾರ ನಡೆದ ಕಂಝುಲ್ ಊಲುಂ ಮದರಸಾ ವಿದ್ಯಾರ್ಥಿಗಳ ಪ್ರತಿಭಾ ಪುಸ್ಕರಾರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಶಾಂತಿ, ಸೌಹಾರ್ದತೆ ಎನ್ನುವುದು 1400 ವರ್ಷಗಳಿಂದಲೂ ಮುಸ್ಲಿಮರಲ್ಲಿ ಬೆಳೆದು ಬಂದಿದ್ದು ಪ್ರವಾದಿ (ಸ.ಅ) ಅವರ ಚರಿತ್ರೆಗಳೇ ಸಾಕ್ಷಿ. ಇಂದು ದೇಶ ಸಂದಿಗ್ಧ ಪರಿಸ್ಥಿತಿಯಲ್ಲಿದ್ದು, ಮಕ್ಕಳಿಗೆ ಹೆಚ್ಚು ಶಿಕ್ಷಣ ಕೊಡಿಸಲು ಪೋಷಕರು ಮುಂದಾಗಬೇಕು. ಶಿಕ್ಷಣದಿಂದಲೇ ಸೌಹಾರ್ದ ಸಮಾಜ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಸೌಹಾರ್ದ ಜೀವನವೇ ದೇಶಕ್ಕೆ ದೊಡ್ಡ ಸಂಪತ್ತು, ಮಾಲಿಕುದ್ದೀನಾರ್ ಕೇರಳಕ್ಕೆ ಆಗಮಿಸಿ ಧರ್ಮ ಪ್ರಚಾರಕ್ಕೆ ಮುಂದಾದಾಗ ಅವರಿಗೆ ಮಸೀದಿ ನಿರ್ಮಾಣ ಹಾಗೂ ತಂಗಲು ಸಹಕರಿಸಿದವರು ಹಿಂದೂ ಬಾಂಧವರಾಗಿದ್ದಾರೆ. ಉಳ್ಳಾಲದಲ್ಲಿ ಮುಸ್ಲಿಮರು ರಾಣಿ ಅಬ್ಬಕ್ಕಳ ಸೈನ್ಯದಲ್ಲಿದ್ದು ಪೋರ್ಚುಗೀಸರ ವಿರುದ್ಧ ಹೋರಾಡಿದ್ದರು, ಅಂತಹ ಸೌಹಾರ್ದತೆ ದೇಶಕ್ಕೆ ಬೇಕಾಗಿದೆ ಎಂದು ಹೇಳಿದರು.

ಮಸೀದಿಯ ಖತೀಬ್ ಯೂಸುಫ್ ಮಿಸ್ಬಾ ಮಾತನಾಡಿ, ಮನುಷ್ಯ ಜವಾಬ್ದಾರಿ ಮರೆತರೆ ವಿವಿಧ ಸಮಸ್ಯೆಗಳು ಬರುತ್ತದೆಯಲ್ಲದೆ, ಜೀವನದಲ್ಲಿ ಪರಾಜಯ ಕಾಣುತ್ತಾನೆ. ಈ ನಿಟ್ಟಿನಲ್ಲಿ ಜವಾಬ್ದಾರಿ ಎನ್ನುವುದು ನಮ್ಮ ಮನದಿಂದ ಬರಬೇಕು. ಆಗಲೇ ಇಹ ಹಾಗೂ ಪರಲೋಕ ಜೀವನದಲ್ಲಿ ವಿಜಯಗಳಿಸಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ನ್ಯಾಯವಾದಿ ಕೆ.ಪಿ.ಎ.ಶುಕೂರು, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ.ಮೊಹಮ್ಮದ್ ಹನೀಫ್, ಎಂ.ಎ.ಗಫೂರ್ ಹಾಗೂ ಬಿ.ಎಚ್.ಅಬ್ದುಲ್ ಖಾದರ್ ಅವರನ್ನು ಸನ್ಮಾನಿಸಲಾಯಿತು.

ಸಯ್ಯದ್ ಮದನಿ ಅರಬಿಕ್ ಕಾಲೇಜಿನ ಪ್ರಾಂಶುಪಾಲರಾದ ಶೈಖುನಾ ಅಹ್ಮದ್ ಬಾವ ಮುಸ್ಲಿಯಾರ್ ದುವಾ ನೆರವೇರಿಸಿದರು.

ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು.

ನಗರಸಭಾಧ್ಯಕ್ಷ ಹುಸೈನ್ ಕುಂಞಿಮೋನು, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ದರ್ಗಾ ಕೋಶಾಧಿಕಾರಿ ಯು.ಕೆ.ಇಲ್ಯಾಸ್, ಅರೆಬಿಕ್ ಟ್ರಸ್ಟ್ ಕೋಶಾಧಿಕಾರಿ ಅಬ್ಬಾಸ್, ಜ.ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಸದಸ್ಯರಾದ ಮೊಹಮ್ಮದ್ ಜಮಾಲ್ ಬಾರ್ಲಿ, ಯು.ಕೆ.ಯೂಸುಫ್, ದರ್ಗಾ ಸಮಿತಿ ಸದಸ್ಯರಾದ ಮುಸ್ತಫಾ ಇಸ್ಮಾಯಿಲ್ ಮಂಚಿಲ, ಯು.ಕೆ.ಮುಸ್ತಫಾ ಬಾವ ಮಂಚಿಲ, ಸಂಶುಲ್ ಉಲಮಾ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಯು.ಟಿ.ಮೊಹಮ್ಮದ್, ಮಿಲ್ಲತ್ ನಗರ ಮಸೀದಿ ಅಧ್ಯಕ್ಷ ಇಬ್ರಾಹಿಂ ಖಲೀಲ್, ಎಸ್‌ಡಿಪಿಐ ಮುಖಂಡ ಎ.ಆರ್.ಅಬ್ಬಾಸ್ ಮೊದಲಾದವರು ಉಪಸ್ಥಿತರಿದ್ದರು.

ಮೊಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಫಾರೂಕ್ ಉಳ್ಳಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಉಪನ್ಯಾಸಕ ಅಬ್ದುಲ್ ರಹೀಂ ಮುಟ್ಟಿಕ್ಕಲ್ ಕಾರ್ಯಕ್ರಮ ನಿರೂಪಿಸಿದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News