ಬಿಜೆಪಿ ಸಂಸದೆಯ ಸಹಕಾರಿ ಬ್ಯಾಂಕ್‌ನಲ್ಲಿ ಕಪ್ಪುಹಣ ದಂಧೆ: ಸಿಬಿಐನಿಂದ ಪ್ರಕರಣ ದಾಖಲು
ಮುಂಬೈ,ಡಿ.25: ಮುಂಬೈನಲ್ಲಿ ಕಳೆದ ವಾರ 10 ಕೋ.ರೂ.ಗಳ ಹಳೆಯ ನೋಟು ಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಪ್ರೀತಂ ಮುಂಢೆ ಮತ್ತು ಇತರ ಕೆಲವರ ನಿಯಂತ್ರಣದಲ್ಲಿರುವ ವೈದ್ಯನಾಥ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಇಬ್ಬರು ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣವನ್ನು ದಾಖಲಿಸಿಕೊಂಡಿದೆ.
ಬೀಡ್,ಔರಂಗಾಬಾದ್,ಪುಣೆ ಮತ್ತು ಮುಂಬೈಗಳ 11 ಸ್ಥಳಗಳಲಿ ಶೋಧ ಕಾರ್ಯಾ ಚರಣೆಗಳನ್ನೂ ಸಿಬಿಐ ನಡೆಸಿದೆ. ಅದು ಈವರೆಗೆ ಯಾರನ್ನೂ ಬಂಧಿಸಿಲ್ಲ.
ಡಿ.15ರಂದು ಪೊಲೀಸರು ಕಾರೊಂದರಿಂದ 10.10 ಕೋ.ರೂ.ಗಳನ್ನು ವಶಪಡಿಸಿ ಕೊಂಡಿದ್ದು, ಈ ಪೈಕಿ 10 ಲ.ರೂ.ಗಳು ಹೊಸ 2,000 ರೂ.ನೋಟುಗಳಲ್ಲಿದ್ದವು. ಈ ಹಣ ವೈದ್ಯನಾಥ ಬ್ಯಾಂಕಿನ ಅಧಿಕಾರಿಗಳು ಸಾಗಿಸುತ್ತಿದ್ದ 25 ಕೋ.ರೂ.ಗಳ ಹಳೆಯ ನೋಟುಗಳ ಭಾಗವಾಗಿತ್ತು ಎನ್ನುವುದು ವಿಚಾರಣೆಯ ಬಳಿಕ ಖಚಿತಪಟ್ಟಿತ್ತು.
ವೈದ್ಯನಾಥ ಬ್ಯಾಂಕು ಬೀಡ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದು, ಬಿಜೆಪಿಯ ಹಿರಿಯ ನಾಯಕರಾಗಿದ್ದ ದಿ.ಗೋಪಿನಾಥ ಮುಂಢೆಯವರ ಪುತ್ರಿಯಾಗಿರುವ ಪ್ರೀತಂ ಈ ಬ್ಯಾಂಕಿನ ನಿರ್ದೇಶಕಿಯಾಗಿದ್ದಾರೆ. ಹಣದ ಸಾಗಾಣಿಕೆಗೆ ಸಂಬಂಧಿಸಿದಂತೆ ಓರ್ವ ವೈದ್ಯ ಮತ್ತು ಇತರ ಕೆಲವರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಆರೋಪಿಗಳು ಒಳಸಂಚು ರೂಪಿಸಿದ್ದರು ಮತ್ತು ಹೊಸನೋಟುಗಳೊಂದಿಗೆ ವಿನಿಮಯಕ್ಕಾಗಿ ಬ್ಯಾಂಕಿನ ಬೀಡ್ ಕಚೇರಿಯಿಂದ ಸುಮಾರು 25 ಕೋ.ರೂ.ಗಳ ಹಳೆಯ ನೋಟುಗಳನ್ನು ಮುಂಬೈ ಘಾಟ್‌ಕೋಪರ್‌ನಲ್ಲಿರುವ ಬ್ಯಾಂಕಿನ ಶಾಖೆಗೆ ಅಕ್ರಮವಾಗಿ ಸಾಗಿಸುತ್ತಿದ್ದರು ಎಂದು ಸಿಬಿಐ ತಿಳಿಸಿದೆ.
ಈ ಪೈಕಿ 15 ಕೋ.ರೂ.ಗಳನ್ನು ಮಹಾರಾಷ್ಟ್ರ ರಾಜ್ಯ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ಅಕ್ರಮವಾಗಿ ಜಮಾ ಮಾಡಲಾಗಿತ್ತು. 10 ಲಕ್ಷ ರೂ.ಗಳ ಹೊಸ 2,000 ರೂ.ನೋಟುಗಳು ಮತ್ತು 10 ಕೋ.ರೂ.ಗಳ ಹಳೆಯ 500 ರೂ.ನೋಟುಗಳು ಸೇರಿದಂತೆ 10.10 ಕೋ.ರೂ.ಗಳೊಂದಿಗೆ ಬೀಡ್‌ಗೆ ವಾಪಸಾಗುತ್ತಿದ್ದಾಗ ಪೊಲೀಸರು ಕಾರನ್ನು ತಡೆದು ನಿಲ್ಲಿಸಿ ವಶಪಡಿಸಿಕೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಖಾ ಮ್ಯಾನೇಜರ್ ಸೇರಿದಂತೆ ಬ್ಯಾಂಕಿನ ಮೂವರು ಸಿಬ್ಬಂದಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹಣ ವೈದ್ಯನಾಥ ಬ್ಯಾಂಕಿಗೆ ಸೇರಿದ್ದು ಎನ್ನುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.