ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಕ್ರಿಸ್‌ಮಸ್ ಆಚರಣೆ
ಉಡುಪಿ, ಡಿ.25: ಏಸುವಿನ ಜನ್ಮದಿನ ಕ್ರಿಸ್‌ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಉಡುಪಿ ಜಿಲ್ಲೆಯಾದ್ಯಂತ ರವಿವಾರ ಸಂಭ್ರಮ ಸಡಗರದಿಂದ ಆಚರಿಸಿದರು.
ಹಬ್ಬದ ಪ್ರಯುಕ್ತ ಕ್ರೈಸ್ತರು ಶನಿವಾರ ರಾತ್ರಿಯಿಂದಲೇ ಸಮೀಪದ ಚರ್ಚು ಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಸ್ನೇಹಿತರು, ಬಂಧು-ಬಾಂಧವ ರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು.
ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಸಂಜೆಯ ಬಲಿಪೂಜೆಯನ್ನು ಶಿರ್ವ ಆರೋಗ್ಯ ಮಾತಾ ಇಗರ್ಜಿಯಲ್ಲಿ ಅರ್ಪಿಸಿದರೆ, ಮಧ್ಯರಾತ್ರಿಯ ಬಲಿಪೂಜೆಯನ್ನು ಉಡುಪಿಯ ಶೋಕ ಮಾತಾ ಇಗರ್ಜಿಯಲ್ಲಿ ಅರ್ಪಿಸಿ ಕ್ರಿಸ್ಮಸ್ ಸಂದೇಶ ನೀಡಿದರು.
‘ಕ್ರಿಸ್ಮಸ್ ಹಬ್ಬ ಶಾಂತಿಯನ್ನು ಸಾರುತ್ತದೆ. ಶಾಂತಿಯ ಸಾಧನಗಳಾಗಲು, ಶಾಂತಿಯ ದೂತರಾಗಲು ನಮ್ಮನ್ನು ಆಹ್ವಾನಿಸುತ್ತದೆ. ಕ್ರಿಸ್ತ ಜಯಂತಿಯ, ಪ್ರೀತಿಯ ಜ್ಯೋತಿ, ನಮ್ಮ ತನು-ಮನಗಳಲ್ಲಿ, ಮನೆ-ಮಂದಿರಗಳಲ್ಲಿ, ಪ್ರಜ್ವಲಿಸಲಿ. ಹಳೆತನವನ್ನು ಬಿಟ್ಟು ಕ್ರಿಸ್ತರಂತೆ ತ್ಯಾಗ ತನ್ಮಯರಾಗಿ, ಸೇವಾ ಮನೋಭಾವವನ್ನು ಮನನ ಮಾಡಿಕೊಂಡು, ನಿಸ್ವಾರ್ಥಿಗಳಾಗಿ, ಪ್ರೀತಿಯ ಭಾಷೆಯನ್ನು ನಾವು ಕಲಿತು, ಜಗದಲ್ಲೆಲ್ಲ ಪಸರಿಸಲು ಕಂಕಣಬದ್ಧರಾಗಬೇಕು ಎಂದು ಬಿಷಪ್ ತಮ್ಮ ಸಂದೇಶದಲ್ಲಿ ಹೇಳಿದರು.
ಯೇಸುವಿನ ಜನ್ಮದಿನದ ಪ್ರಯುಕ್ತ ಚರ್ಚ್‌ಗಳಲ್ಲಿ ಮಾಡಲಾಗಿದ್ದ ಗೋದಲಿ ಹಾಗೂ ಪುಟ್ಟ ಗೊಂಬೆಗಳ ಪ್ರದರ್ಶನ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು.
ಹಬ್ಬದ ಪ್ರಯುಕ್ತ ಚರ್ಚುಗಳಲ್ಲಿ ಯುವ ಸಂಘಟನೆಯ ಸದಸ್ಯರುಗಳು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳ ಪ್ರೀತಿಗೆ ಪಾತ್ರನಾದ ಸಾಂತಾಕ್ಲಾಸ್ ವೇಷ, ಭಕ್ತಾಧಿಗಳಿಗೆ ಕ್ರಿಸ್ಮಸ್ ಕೇಕ್ ವಿತರಣೆ ಕೂಡ ಆಯೋಜಿಸಲಾಗಿತ್ತು.
ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ತಮ್ಮ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಚರ್ಚುಗಳಿಗೆ ಭೇಟಿ ನೀಡಿ ಕ್ರಿಸ್‌ಮಸ್ ಹಬ್ಬದ ಶುಭಾಶಯ ಕೋರಿದರು. ಸಾಸ್ತಾನದ ಸಂತ ಅಂತೋನಿಯವರ ಚರ್ಚಿನಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ ಸಂಭ್ರಮದಿಂದ ನಡೆಯಿತು.
ಶನಿವಾರ ರಾತ್ರಿ ನಡೆದ ಪವಿತ್ರ ಬಲಿಪೂಜೆಯ ನೇತೃತ್ವವನ್ನು ಪೆರಂಪಳ್ಳಿಯ ಟ್ರಿನಿಟಿ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲ ವಂ. ಅನಿಲ್ ಡಿಕೋಸ್ಟಾ ಹಾಗೂ ಚರ್ಚಿನ ಧರ್ಮಗುರು ವಂ.ಜಾನ್ ವಾಲ್ಟರ್ ಮೆಂಡೋನ್ಸಾ ವಹಿಸಿದ್ದರು.
ಬಾರ್ಕೂರಿನ ಸಂತ ಪೀಟರ್ ಚರ್ಚಿನಲ್ಲಿ ಚರ್ಚಿನ ಧರ್ಮಗುರು ವಂ ವಲೇರಿಯನ್ ಮೆಂಡೊನ್ಸಾ ನೇತೃತ್ವದಲ್ಲಿ ಹಬ್ಬದ ಬಲಿಪೂಜೆ ನೇರವೇರಿತು. ಅಲ್ಲದೆ ಬ್ರಹ್ಮಾವರದ ಎಸ್‌ಎಂಎಸ್ ಸೀರಿಯನ್ ಕ್ಯಾಥೆಡ್ರಲ್, ಸಾಸ್ತಾನದ ಸೈಂಟ್ ಥೋಮಸ್ ಸಿರಿಯನ್ ಚರ್ಚು, ಪೇತ್ರಿಯ ಸಂತ ಪೀಟರ್ ಚರ್ಚಿನಲ್ಲಿ ಕೂಡ ಕ್ರಿಸ್ಮಸ್ ಹಬ್ಬವನ್ನು ಆಚರಿಸಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.