×
Ad

ಬುದ್ಧಿ ಮಾಂದ್ಯೆಯೊಂದಿಗಿನ ವೈವಾಹಿಕ ಸಂಬಂಧ ಅಸಿಂಧು: ಹೈಕೋರ್ಟ್

Update: 2016-12-25 20:27 IST

ಬೆಂಗಳೂರು, ಡಿ.24: ಪತಿ, ಪತ್ನಿ ಇಬ್ಬರಲ್ಲಿ ಒಬ್ಬರು ಬುದ್ಧಿ ಮಾಂದ್ಯರಾಗಿದ್ದು, ವೈವಾಹಿಕ ಜೀವನ ನಡೆಸಲು ಅನರ್ಹರಾದರೆ ಪ್ರತ್ಯೇಕವಾಗಿ ಜೀವನ ನಡೆಸುವುದು ಸೂಕ್ತ ಎಂದಿರುವ ಹೈಕೋರ್ಟ್, ಮಾನಸಿಕ ಅಸ್ವಸ್ಥೆಯಾಗಿದ್ದ ಮಹಿಳೆಯೊಂದಿನ ವೈವಾಹಿಕ ಸಂಬಂವನ್ನುಅಸಿಂುಗೊಳಿಸಿ ಮಹತ್ವದ ಆದೇಶ ನೀಡಿದೆ. ವಿವಾಹದ ಮೂಲ ಉದ್ದೇಶವೇ ಮನುಷ್ಯ ತನ್ನ ಸಂಗಾತಿಯೊಂದಿಗೆ ಸುಖ ಜೀವನ ನಡೆಸುವುದು ಮತ್ತು ವಂಶಾಭಿವೃದ್ಧಿಯೇ ಆಗಿರುತ್ತದೆ. ಈ ಎರಡು ಉದ್ದೇಶಗಳಿಗೆ ಪತ್ನಿಯಾದವರು ಅನರ್ಹರಾಗಿದ್ದು, ಮಾನಸಿಕ ಮತ್ತು ದೈಹಿಕವಾಗಿ ಕಾಯಿಲೆಯಿಂದ ಬಳಲುತ್ತಿದ್ದರೆ ವೈವಾಹಿಕ ಸಂಬಂಧಕ್ಕೆ ಅರ್ಥವಿಲ್ಲ ಎಂದಿರುವ ಹೈಕೋರ್ಟ್, ಮಾನಸಿಕ ರೋಗದಿಂದ ಬಳಲುತ್ತಿರುವ ಪತ್ನಿಗೆ ಅಧೀನ ನ್ಯಾಯಾಲಯ ಮಂಜೂರು ಮಾಡಿದ್ದ ವಿಚ್ಛೇದನ ಆದೇಶವನ್ನು ಎತ್ತಿ ಹಿಡಿದಿದೆ.

   ಹಿಂದೂ ವಿವಾಹ ಕಾಯಿದೆ ಸೆಕ್ಷನ್ 12ರ ಪ್ರಕಾರ ವಧು-ವರರಿಬ್ಬರಲ್ಲಿ ಯಾರಾದರೊಬ್ಬರು ಮಾನಸಿಕವಾಗಿ ಅನಾರೋಗ್ಯ ಪೀಡಿತರಾಗಿದ್ದರೂ ಮದುವೆ ಕಾನೂನು ಬದ್ಧವೆಂದು ಪರಿಗಣಿಸಲು ಸಾಧ್ಯವಿಲ್ಲ. ಒಂದೊಮ್ಮೆ ಮನಸ್ಸಿನ ಸ್ವಾಸ್ಥವಿಲ್ಲದೇ ವೈವಾಹಿಕ ವಿಚಾರಗಳಲ್ಲಿ ಸಮ್ಮತಿ ನೀಡಲು ಅಸಮರ್ಥರಾಗಿದ್ದು, ಮಕ್ಕಳಿಗೆ ಜನ್ಮ ನೀಡಲು ಸಾಧ್ಯವಿಲ್ಲ ಎಂದು ಸಾಬೀತಾದಲ್ಲಿ ಜತೆಗೆ ನಿರಂತರವಾಗಿ ಬುದ್ದಿಭ್ರಮಣೆಗೆ ಒಳಗಾಗಿದ್ದಲ್ಲಿ ವಿಚ್ಛೇದನ ನೀಡುವುದಕ್ಕೆ ಅವಕಾಶವಿದೆ. ಹೀಗಾಗಿ, ವಿಚ್ಛೇದನ ಮಂಜೂರು ಮಾಡುತ್ತಿರುವುದಾಗಿ ನ್ಯಾಯಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ತುಮಕೂರು ಜಿಲ್ಲೆಯ ಚನ್ನಬಸವೇಶ್ವರ ಬಡಾವಣೆಯ ಕೃತಿಕಾ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ನಗರದ ಕೌಶಿಕ್(ಇಬ್ಬರ ಹೆಸರುಗಳನ್ನು ಬದಲಾಯಿಸಲಾಗಿದೆ) ಎಂಬುವರು 2004ರ ಸೆಪ್ಟೆಂಬರ್‌ನಲ್ಲಿ ವಿವಾಹವಾಗಿದ್ದರು. ಬಳಿಕ ಕೌಶಿಕ್ ಮನೆಯಲ್ಲಿ ಕೆಲ ತಿಂಗಳ ಕಾಲ ನೆಲೆಸಿದ್ದರು. ಆ ಸಂದರ್ಭದಲ್ಲಿ ಯಾವ ವಿಷಯಕ್ಕೂ ಸೂಕ್ತ ರೀತಿ ಕೃತಿಕಾ ಸಹಕಾರ ನೀಡುತ್ತಿರಲಿಲ್ಲ. ವೈವಾಹಿಕ ಸಂಬಂಧಗಳಿಗೂ ಸ್ಪಂದಿಸುತ್ತಿರಲಿಲ್ಲ. ಅಲ್ಲದೆ, ಚಿಕ್ಕ ಮಕ್ಕಳ ರೀತಿ ವರ್ತಿಸುತ್ತಿದ್ದರು. ಕೆಲ ದಿನಗಳ ಬಳಿಕ ಪೋಷಕರ ಮನೆಗೆ ತೆರಳಿದ್ದ ಕೃತಿಕಾ ವರ್ಷ ಕಳೆದರೂ ಹಿಂತಿರುಗಲಿಲ್ಲ. ಇದನ್ನು ಕೌಶಿಕ್ ಪ್ರಶ್ನಿಸಿದರೂ ಪ್ರಯೋಜನವಾಗಲಿಲ್ಲ. ಇದರಿಂದಾಗಿ ಚಿಕ್ಕಬಳ್ಳಾಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನ ಕೋರಿ ಪತಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ಸಂಬಂಧ ನ್ಯಾಯಾಲಯ ಕೃತಿಕಾ ಅವರಿಗೆ ನೋಟಿಸ್ ಜಾರಿಮಾಡಿತ್ತು. ಆದರೆ ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಮಧ್ಯೆ ಕೃತಿಕಾ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮಾನಸಿಕ ರೋಗಕ್ಕೆ ಚಿಕಿತ್ಸೆ ಪಡೆದು, ಔಷಧ ಸ್ವೀಕರಿಸುತ್ತಿರುವ ಅಂಶ ಬೆಳಕಿಗೆ ಬಂದಿತ್ತು. ಈ ಸಂಬಂಧ ನಿಮ್ಹಾನ್ಸ್ ವೈದ್ಯರಿಂದ ವರದಿ ಪಡೆದು ಕೌಶಿಕ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಕಳೆದ 8 ವರ್ಷಗಳಿಂದ ಮಾನಸಿಕ ರೋಗಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವ ಅಂಶ ವರದಿಯಲ್ಲಿ ಬೆಳಕಿಗೆ ಬಂದಿದೆ. ಈ ವರದಿ ಪರಿಗಣಿಸಿದ ನ್ಯಾಯಾಲಯ ಪತ್ನಿ ಕೃತಿಕಾ ಅವರ ಅನುಪಸ್ಥಿತಿಯಲ್ಲಿ ವಿಚ್ಛೇದನ ಮಂಜೂರು ಮಾಡಿತ್ತು.

   ಅಧೀನ ನ್ಯಾಯಾಲಯದ ಈ ಕ್ರಮ ಪ್ರಶ್ನಿಸಿ ಕೃತಿಕಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ. ಜಯಂತ್ ಪಟೇಲ್ ಮತ್ತು ನ್ಯಾ.ಅರವಿಂದಕುಮಾರ್ ಅವರಿದ್ದ ನ್ಯಾಯಪೀಠ, ಅಧೀನ ನ್ಯಾಯಾಲಯ ನೀಡಿರುವ ಆದೇಶದಲ್ಲಿ ಯಾವುದೇ ಅಂಶ ಉಲ್ಲಂಘನೆಯಾಗಿಲ್ಲ ಎಂದು ಅಭಿಪ್ರಾಯಪಟ್ಟು ವಿಚ್ಛೇದನ ಮಂಜೂರು ಮಾಡಿದೆ. ಅಲ್ಲದೆ, ಕೃತಿಕಾ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.

‘ಪತಿ, ಪತ್ನಿ ಇಬ್ಬರಲ್ಲಿ ಒಬ್ಬರು ಮಾನಸಿಕ ಅಸ್ವಸ್ಥರಾಗಿದ್ದು, ಮಕ್ಕಳಿಗೆ ಜನ್ಮ ನೀಡಲು ಅಸಮರ್ಥರು ಎಂದು ಸಾಭೀತಾದ ಪಕ್ಷದಲ್ಲಿ ವಿಚ್ಛೇದನ ನೀಡುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಒಂದು ವೇಳೆ ಇಬ್ಬರನ್ನು ಒಂದಾಗಿರುವಂತೆ ಆದೇಶಿಸಿದಲ್ಲಿ ಅವರ ವೈವಾಹಿಕ ಜೀವನಕ್ಕೆ ಅರ್ಥವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ವಿಚ್ಛೇದನ ನೀಡಿರುವುದು ಸೂಕ್ತವಾಗಿದೆ’ 

-ಶಂಕ್ರಪ್ಪ ಹೈಕೋರ್ಟ್ ವಕೀಲರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News