×
Ad

‘ಜನನುಡಿ’: ಮುಸ್ಲಿಮರಿಗೆ ಅಂಬೇಡ್ಕರ್ ಮಾದರಿಯ ನಾಯಕತ್ವ ಅಗತ್ಯ: ಪ್ರೊ.ತರೀಕೆರೆ

Update: 2016-12-25 21:23 IST

ಮಂಗಳೂರು, ಡಿ.25: ಆರ್ಥಿಕ, ರಾಜಕೀಯ, ಸಾಮಾಜಿಕ ಸಮಸ್ಯೆಯನ್ನು ಅರ್ಥಮಾಡಿ ಅದನ್ನು ಪರಿಹರಿಸುವ, ರಾಜಕೀಯ ಪ್ರಜ್ಞಾವಂತಿಕೆಯುಳ್ಳ, ವಿದ್ವತ್ ಹಿನ್ನಲೆಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಷಯದ ಬಗ್ಗೆ ಪ್ರಜ್ಞೆಯುಳ್ಳ, ವೈಚಾರಿಕ ಜಾಗೃತಿ ಮೂಡಿಸಬಲ್ಲ ಅಂಬೇಡ್ಕರ್ ಮಾದರಿಯ ನಾಯಕತ್ವ ಮುಸ್ಲಿಮ್ ಸಮಾಜಕ್ಕೆ ಅತ್ಯಗತ್ಯವಾಗಿ ಬೇಕಾಗಿದೆ ಎಂದು ಚಿಂತಕ ಪ್ರೊ.ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.

‘ಅಭಿಮತ ಮಂಗಳೂರು’ ನಗರದ ನಂತೂರು ಶಾಂತಿಕಿರಣದಲ್ಲಿ ಆಯೋಜಿಸಿದ ‘ಜನನುಡಿ’ಯ ‘ಮುಸ್ಲಿಮ್-ದಲಿತ-ಹಿಂದುಳಿದ ವರ್ಗಗಳ ಐಕ್ಯತೆ: ಸವಾಲು ಸಾಧ್ಯತೆ’ ಎಂಬ ವಿಷಯದಲ್ಲಿ ನಡೆದ ಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಮುಸ್ಲಿಮರಲ್ಲೂ ಅನೇಕ ಪಂಗಡ-ಒಳಪಂಗಡಗಳಿವೆ, ಹಲವಾರು ಭಾಷೆಗಳಿವೆ, ಸಾಂಸ್ಕೃತಿಕ ಭಿನ್ನತೆಯಿದೆ. ರಾಜಕೀಯವಾಗಿಯಂತೂ ಒಡೆದ ಮನೆಯಂತಾಗಿದ್ದಾರೆ. ರಾಜಕಾರಣಿಗಳು ಮುಸ್ಲಿಮರ ಹಬ್ಬದ ಸಂದರ್ಭ ಟೊಪ್ಪಿ ಧರಿಸುವುದು, ಟಿಪ್ಪು ಜಯಂತಿ ಆಚರಿಸುವುದು, ರಮಝಾನ್ ಸಂದರ್ಭ ಸಮಯಕ್ಕೆ ಸರಿಯಾಗಿ ಬಿರಿಯಾನಿ ಪೂರೈಕೆ ಮಾಡುವುದು, ಶಾದಿಮಹಲ್ ಕಟ್ಟಿಸುವುದು, ಶಾದಿಭಾಗ್ಯ ಯೋಜನೆ ಇತ್ಯಾದಿಗಳ ಮೂಲಕ ಮುಸ್ಲಿಮರನ್ನು ಓಟ್‌ಬ್ಯಾಂಕ್ ಮಾಡಲಾಗುತ್ತದೆ. ಇನ್ನೊಂದೆಡೆ ಕೋಮುವಾದಿಗಳ ಅಟ್ಟಹಾಸ ಮತ್ತು ಕೋಮುಗಲಭೆ ಸಂದರ್ಭ ಪ್ರಾಣ-ಸೊತ್ತಿನ ರಕ್ಷಣೆಗೆ ಒತ್ತು ನೀಡಲು ಹೆಣಗಾಡುವುದರಲ್ಲೇ ಮುಸ್ಲಿಮರ ಕಾಲಕಳೆಯಬೇಕಾಗಿದೆ. ಒಟ್ಟಾರೆ ಮುಸ್ಲಿಮರ ಬದುಕು ಜಂಜಾಟಮಯವಾಗಿದೆ. ಆ ಹಿನ್ನೆಲೆಯಲ್ಲಿ ಮುಸ್ಲಿಮರು ಅಂತರ್‌ಧರ್ಮೀಯ, ಅಂತರ್ಜಾತಿಯ ಏಕತೆೆಗೆ ಒತ್ತು ನೀಡಬೇಕು. ಇಲ್ಲದಿದ್ದರೆ ಮುಸ್ಲಿಮರು ಸದಾ ಅಭದ್ರತೆಯ ವಾತಾವರಣದಲ್ಲಿ ಕಾಲ ಕಳೆಯಬೇಕಾದೀತು ಎಂದು ರಹಮತ್ ತರೀಕೆರೆ ಎಚ್ಚರಿಸಿದರು.

ದುಷ್ಟ ರಾಜಕಾರಣದ ವಿರುದ್ಧ ಹೋರಾಟ ಮಾಡಲು ಮುಸ್ಲಿಮರಿಗೆ ಸಾಮಾಜಿಕ ಸುಧಾರಣೆಯ ರಾಜಕಾರಣದ ಅಗತ್ಯವಿದೆ. ‘ಕೊಡುಗೆ ರಾಜಕಾರಣ’ ದಿಂದ ಮುಸ್ಲಿಮರು ದೂರ ನಿಲ್ಲಬೇಕು. ಸಾಂಸ್ಕೃತಿಕ ಚಳವಳಿಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು. ಧಾರ್ಮಿಕ ಓಲೈಕೆಯ ವಿರುದ್ಧ ಜಾಗೃತರಾಗಬೇಕು. ರಾಜಕೀಯ ಹಿತಾಸಕ್ತಿಗೋಸ್ಕರ ತಮ್ಮ ಸಮುದಾಯವನ್ನು ಬಳಸಿಕೊಳ್ಳುವುದರ ವಿರುದ್ಧ ಪ್ರಜ್ಞಾವಂತರಾಗಬೇಕು ಎಂದು ಅವರು ನುಡಿದರು.

ಸಮುದಾಯದ ದುರ್ಬಳಕೆ ಮತ್ತು ಕೊಡುಗೆ ರಾಜಕಾರಣಕ್ಕೆ ವಾಲುವುದು ಮುಸ್ಲಿಮರಲ್ಲಿನ ದೌರ್ಬಲ್ಯವಾಗಿದೆ. ಇದು ಸಮುದಾಯದ ಛಿದ್ರತೆಗೂ ಕಾರಣವಾಗಬಹುದು ಎಂದ ಅವರು, ಶರೀಅತ್ ಉಳಿಸಿಕೊಳ್ಳುವ ಸಲುವಾಗಿ ನಡೆಸಲ್ಪಡುವ ಸಮಾವೇಶಕ್ಕೆ ಜನರನ್ನು ಸೇರಿಸುವವ ನಾಯಕರು ಸಾಚಾರ್ ವರದಿಯ ಹುಣ್ಣುಗಳನ್ನು ಹುಡುಕಲು ಮತ್ತು ಅವುಗಳ ಪರಿಹಾರಕ್ಕೆ ಆಸಕ್ತಿ ವಹಿಸುತ್ತಿಲ್ಲ ಎಂದು ವಿಷಾದಿಸಿದರು.

ಅಹಿಂದ ರಾಜಕಾರಣ ಪ್ರಸ್ತಾಪಿಸಿದ ರಹಮತ್ ತರೀಕೆರೆ, ಪ್ರಸಕ್ತ ಕಾಲಘಟ್ಟದಲ್ಲಿ ಇದರ ಆಚೆಗೂ ಯೋಚಿಸಬೇಕಾಗಿದೆ. ಕ್ರೈಸ್ತರೂ ಸೇರಿದಂತೆ ಎಲ್ಲರನ್ನೂ ಒಳಗೊಳ್ಳುವ ಅಗತ್ಯವಿದೆ. ಎಡರಂಗದಲ್ಲಿ ಮುಸ್ಲಿಮರಿಗೆ ಪ್ರವೇಶವಿಲ್ಲವೇ ಅಥವಾ ಮುಸ್ಲಿಮರು ಎಡರಂಗದತ್ತ ಹೋಗುತ್ತಿಲ್ಲವೇ?. ದಲಿತ ಚಳವಳಿಗಳು ಏಕೆ ಮುಸ್ಲಿಮರನ್ನು ಒಳಗೊಳ್ಳುತ್ತಿಲ್ಲ ಎಂಬುದರ ಬಗ್ಗೆ ಚರ್ಚೆ ನಡೆಸುವ ಅಗತ್ಯವಿದೆ ಎಂದರು.

‘ಜನನುಡಿ’ಯು ಬಂಡಾಯ ಸಾಹಿತ್ಯದ ಮರುಹುಟ್ಟು. ಪ್ರಗತಿಪರರು, ಎಡಪಂಥೀಯರೂ ಕೂಡ ದಲಿತರಿಗೆ ವಿರೋಧಿಗಳು ಎನಿಸಲು ಶುರುವಾಗಿದೆ. ಇದು ತುಂಬಾ ನೋವಿನ ಸಂಗತಿ ಎಂದು ಶಿವಾಜಿ ಗಣೇಶನ್ ಹೇಳಿದರು.

ಸೈದ್ಧಾಂತಿಕ ಸ್ಪಷ್ಟತೆ ದಲಿತರಿಗೆ ಇರಬೇಕು. ಇದು ದೇಶಕ್ಕೆ ಅಪಾಯಕಾರಿಯ ಸಂಗತಿಯಲ್ಲ. ಹಿಂದುಳಿದವರನ್ನು ಸಂಘಟಿಸುವ ಕ್ರಿಯೆಯೂ ಚಳವಳಿಯ ಸ್ವರೂಪ ಪಡೆದಿಲ್ಲ. ಹಿಂದುಳಿದವರು ಕ್ರಮೇಣವಾಗಿ ಹಿಂದುಳಿದವರಾಗುವ ಹಂತದಲ್ಲಿದ್ದಾರೆ. ಇದು ಆತಂಕಕಾರಿ ವಿಚಾರವಾಗಿದೆ. ಎಲ್ಲ ಜಾತಿಗಳಿಗೂ ಕರ್ನಾಟಕದಲ್ಲಿ ಮೀಸಲಾತಿ ಇದೆ. ಆದರೆ ಜಾತಿವಾರು ಜನಗಣತಿ ಜಾರಿಗೆ ತರಲು ಸರಕಾರ ಹಿಂದೇಟು ಹಾಕುತ್ತಿವೆ ಎಂದು ರಾಜಪ್ಪದಳವಾಯಿ ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್, ದಲಿತ ಅಸ್ಮಿತೆಯನ್ನು ಸೀಮಿತವಾಗಿ ಯಾಕೆ ನೋಡಬೇಕು? ಸಾವಿರಾರು ವರ್ಷಗಳ ಇತಿಹಾಸವಿರುವ ಸಮುದಾಯದ ಬಗ್ಗೆ ಅಧ್ಯಯನ ಮಾಡಿದರೆ ದಲಿತ ಅಸ್ಮಿತೆಯು ಎಷ್ಟು ವಿಶಾಲ ಎಂಬುದು ಅರಿವಾಗುತ್ತದೆ. ಐಕ್ಯತೆಗೆ ಮುನ್ನ ಜಾಗೃತಿ ಮೂಡಿಸುವ ಅಗತ್ಯವಿದೆ. ಸಾವಿರಾರು ಸಮುದಾಯಗಳಿರುವ ಭಾರತದಲ್ಲಿ ಐಕ್ಯತೆ ಕಷ್ಟಸಾಧ್ಯ. ಸಾಂಸ್ಕೃತಿಕ ಎಚ್ಚರ ಇಲ್ಲದಿದ್ದರೆ ಐಕ್ಯ ಸಾಧ್ಯವಿಲ್ಲ. ಸಮಾಜದ ಬೆಳವಣಿಗೆ, ವಿಕಾಸ ಕ್ರಮದ ಬಗ್ಗೆ ಸಮಗ್ರ ಅರಿವಿದ್ದರೆ ಮಾತ್ರ ಐಕ್ಯ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಯಾರು ಹಿಂದೂ ಧರ್ಮದ ವಾರಸುದಾರರಲ್ಲವೋ, ಅವರನ್ನು ಹಿಂದೂ ಧರ್ಮದ ವಾರಸುದಾರರನ್ನಾಗಲು ನಾವು ಬಿಟ್ಟಿದ್ದೇವೆ. ದಲಿತರ ಕೋಪ ಕೇವಲ ಹಿಂದುಳಿದವರ ಮೇಲಿದೆಯೇ ಹೊರತು ಬ್ರಾಹ್ಮಣರ ಮೇಲಿಲ್ಲ. ಬ್ರಾಹ್ಮಣಿಕೆ ತಾನು ಮಾಡಿದ ದಬ್ಬಾಳಿಕೆಯನ್ನು ಈಗ ನೆನಪಿನಲ್ಲಿಟ್ಟುಕೊಂಡಿಲ್ಲ. ಆದರೆ ತನ್ನಲ್ಲೇ ಜೀತ ಮಾಡುತ್ತಿದ್ದ ವ್ಯಕ್ತಿ ತನ್ನ ಸರೀಕನಾಗಲು ಮಾಡುತ್ತಿರುವ ಪ್ರಯತ್ನವನ್ನು ಅವು ಸಹಿಸುತ್ತಿಲ್ಲ. ಇದನ್ನು ಹಿಂದುಳಿದ ಮತ್ತು ಅತೀ ಹಿಂದುಳಿದ ವರ್ಗಗಳು ಅರಿತುಕೊಳ್ಳಬೇಕಿದೆ ಎಂದು ಅವರು ಹೇಳಿದರು.

ದಲಿತ ನಾಯಕರ ಆಕ್ರೋಶ ಯಾವಾಗಲೂ ತನ್ನ ಪ್ರದೇಶದ ತನ್ನ ಸಮುದಾಯದ ಇನ್ನೊಬ್ಬ ಬಲಾಢ್ಯ ನಾಯಕನ ಮೇಲೆ ಇರುತ್ತದೆಯೇ ಹೊರತು ಬ್ರಾಹ್ಮಣಿಕೆಯ ಮೇಲೆ ಅಲ್ಲ. ಸಂಘಪರಿವಾರ ಕಳೆದ 60 ವರ್ಷದಿಂದ ಹಿಂದುಳಿದವರ ನಡುವೆ ಕೆಲಸ ಮಾಡುತ್ತಾ ಮುಸ್ಲಿಮರನ್ನು ದೂರ ಮಾಡುತ್ತಿದೆ. ಆದರೆ ಅವರು ಹೇಳುವಂತೆ ಮುಸ್ಲೀಮರು ದೇಶದ್ರೋಹಿಗಳಲ್ಲ ಎಂದು ಹೇಳಲು ನಾವು ಎಷ್ಟರಮಟ್ಟಿಗೆ ಸಾಂಸ್ಕತಿಕವಾಗಿ ಕೆಲಸ ಮಾಡುತ್ತಿದ್ದೇವೆ ಅಥವಾ ಅವರು ಎಷ್ಟರಮಟ್ಟಿಗೆ ತೆರೆದುಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕಾಗಿದೆ ಎಂದು ಬಂಜಗೆರೆ ನುಡಿದರು. ಗೋಷ್ಠಿಯನ್ನು ರಮಾನಂದ ಅಂಕೋಲ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News