×
Ad

ಸಂವಿಧಾನದ ಬದ್ಧ ಸಂಸ್ಥೆಗಳ ಬಗ್ಗೆ ಗೌರವವಿಲ್ಲದ ನಾಯಕರಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ- ಅಮೀನ್ ಮಟ್ಟು

Update: 2016-12-25 21:33 IST

ಮಂಗಳೂರು ,ಡಿ.25:ಸಂವಿಧಾನದ ಶಾಸನಬದ್ಧ ಸಂಸ್ಥೆಗಳ ಬಗ್ಗೆ ಗೌರವವಿಲ್ಲದ ನಾಯಕರಿಂದ ನೋಟುಗಳ ನಿಷೇಧದ ಬಳಿಕ ದೇಶದಲ್ಲಿ ತುರ್ತು ಪರಿಸ್ಥಿತಿಯ ವಾತವರಣ ನಿರ್ಮಾಣವಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿಯ ಸಲಹೆಗಾರ ದಿನೇಶ್ ಅಮೀನ್ ಮಟ್ಟು ತಿಳಿಸಿದ್ದಾರೆ.
  
 ಅಭಿಮತ ಮಂಗಳೂರು ವತಿಯಿಂದ ‘ಸಮತೆ ಎಂಬುವುದು ಅರಿವು ’ಘೋಷಣೆಯಡಿ ನಗರದ ಶಾಂತಿಕಿರಣದಲ್ಲಿ ಜನನುಡಿ 2016ರ ಸಮಾರೊಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.  

ದೇಶದಲ್ಲಿ 1000 ಹಾಗೂ 500 ರೂ ನೋಟುಗಳ ಅಮಾನ್ಯವಾದ ಬಳಿಕ ದೇಶದ ಜನ ಸಾಮಾನ್ಯರು ಅನುಭವಿಸಿದ ಬವಣೆ ಈ ಹಿಂದೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕಾಲಕ್ಕಿಂತಲೂ ತೀವ್ರವಾಗಿದೆ. ನೋಟು ಬ್ಯಾನ್ ಮಾಡಿರುವುದು ದುರುದ್ದೇಶದಿಂದ ಕೂಡಿದೆ. ಈ ಕ್ರಮ ಕೈಗೊಳ್ಳುವ ಮೊದಲು ಸಂವಿಧಾನದ ಮೂಲಕ ಶಾಸನ ಬದ್ಧವಾಗಿ ಸ್ಥಾಪನೆಯಾದ ಕಾರ್ಯಾಂಗ,ಶಾಸಕಾಂಗ ,ನ್ಯಾಯಾಂಗಗಳನ್ನು ಕತ್ತಲಲ್ಲಿ ಇಡಲಾಗಿದೆ. ಕಪ್ಪು ಹಣದ ಹೆಸರಿನಲ್ಲಿ ದೇಶದಲ್ಲಿ ಸಾರ್ವಧಿಕಾರದ ಆಡಳಿತ ನಡೆಯುತ್ತಿದೆ ಎಂದು ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.

  ಅಗೋಚರವಾಗಿರುವ ಅಸ್ಪಶ್ಯತೆಯ ವಿರುದ್ಧ ಕ್ರಮ ಜರುಗಲಿ:

ದೇಶದಲ್ಲಿ ದೇವರು ಧರ್ಮದ ಹೆಸರುಗಳನ್ನು ಬಳಸಿಕೊಂಡು ಬಲಪಂಥೀಯ ರಾಜಕೀಯ ನಡೆಯುತ್ತಿದೆ.ಡಾ.ಬಾಬಾ ಸಾಹೇಬರ ಆಶಯಕ್ಕೆ ವಿರುದ್ಧವಾಗಿರುವವರು ಅವರ 125 ಜನ್ಮ ದಿನಾಚರಣೆಯನ್ನು ರಾಷ್ಟ್ರ ಮಟ್ಟದಲ್ಲಿ ಆಚರಿಸಲು ಹೊರಟಿದ್ದಾರೆ.ಶೀಘ್ರದಲ್ಲಿ ಉತ್ತರ ಪ್ರದೇಶ,ಪಂಜಾಬ್ ರಾಜ್ಯಗಳಲ್ಲಿ ಚುನಾವಣೆಯಲ್ಲಿ ದಲಿತರ ಮತಗಳನ್ನು ಪಡೆಯಲು ಈ ರೀತಿಯ ತಂತ್ರಗಾರಿಕೆ ನಡೆಯುತ್ತಿದೆ.

ಅಂಬೇಡ್ಕರರ ಬಗ್ಗೆ ನಿಜವಾದ ಕಾಳಜಿಯಿದ್ದರೆ ದೇಶದಲ್ಲಿ ವೇಮುಲನ ಆತ್ಮ ಹತ್ಯೆಗೆ ಕಾರಣವಾದ ಅಘೋಚರವಾಗಿ ಆಚರಣೆಯಲ್ಲಿರುವ ಅಸ್ಪಶ್ಯತೆಯನ್ನು ನಿವಾರಿಸಲು ಸರಕಾರ ಕ್ರಮ ಕೈಗೊಳ್ಳಲಿ .ಧಾರ್ಮಿಕ ದತ್ತಿಯ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ದಲಿತ ಅರ್ಚಕರನ್ನು ನೇಮಿಸಲು ಕ್ರಮಗಳಾಗಲಿ. ಪರಿಶಿಷ್ಟ ಜಾತಿ ವರ್ಗದವರ ಅಭಿವೃದ್ಧಿಗಾಗಿ ನಿಗದಿ ಪಡಿಸಿರುವ ಅನುದಾನವನ್ನು ಕನಿಷ್ಟ ಮಟ್ಟದಿಂದ ಗರಿಷ್ಟ ಮಟ್ಟಕ್ಕೆ ಏರಿಸಲಿ.ದಲಿತರಿಗೆ ಖಾಸಗಿ ವಲಯದಲ್ಲೂ ಉದ್ಯೋಗವಕಾಶ ನೀಡಲು ಕ್ರಮ ಕೈ ಗೊಳ್ಳಲಿ ಎಂದು ದಿನೇಶ್ ಅಮೀನ್ ಮಟ್ಟು ತಿಳಿಸಿದರು.

ಶಿಕ್ಷಣದ ವ್ಯಾಪಾರೀಕರಣ,ಸಾಹಿತ್ಯ ಸಮ್ಮೇಳನ ಜಾತ್ರೆಗಳ ರೀತಿ ನಡೆಯುವ ಕಾರ್ಯಕ್ರಮಗಳಾಗಬಾರದು ಎನ್ನುವ ನಿಟ್ಟಿ ನಲ್ಲಿ ಹಮ್ಮಿಕೊಂಡ ಜನನುಡಿ ಯುವ ಜನನುಡಿಯಾಗಿದೆ. ಒಂದು ಜನಪರ ಚಳವಳಿಯಾಗಿ ರೂಪುಗೊಳ್ಳುತ್ತಿರುವುದು ಸಂತಸವನ್ನುಂಟು ಮಾಡಿದೆ ಎಂದು ದಿನೇಶ್ ಅಮೀನ್ ಮಟ್ಟು ತಿಳಿಸಿದರು.

 ಜಾತಿ ವ್ಯವಸ್ಥೆಯ ಮೇಲೆ ಸರ್ಜಿಕಲ್ ದಾಳಿ ನಡೆಯಲಿ:

ದೇಶದಲ್ಲಿ ಸರ್ಜಿಕಲ್ ದಾಳಿ ನಡೆಯಿತು,ನೋಟು ವಿಚಾರದಲ್ಲಿ ಸರ್ಜಿಕಲ್ ದಾಳಿ ಆಯಿತು. ಸಮಾಜಕ್ಕೆ ಹಾನಿಕಾರಕವಾದ ಜಾತಿವ್ಯವಸ್ಥೆಯ ಮೇಲೆ ಸರ್ಜಿಕಲ್ ದಾಳಿ ನಡೆಯಲಿ ಎಂದು ಮುಖ್ಯ ಅತಿಥಿಯಾಗಿ ಮಾತನಾಡಿದ ಚಿಂತಕ ಡಾ.ಅರವಿಂದ ಮಾಲಗತ್ತಿ ತಿಳಿಸಿದರು.

ಜಾತಿ ನಿರ್ಮೂಲನಕ್ಕೆ ಕೇವಲ ಅಂತರ್ ಜಾತಿ ಮದುವೆಗಳು ಪರಿಹಾರವಲ್ಲ.ಲೋಹಿಯಾ ಅವರ ಚಿಂತನಾ ಕ್ರಮ ಹೆಚ್ಚು ಸೂಕ್ತವಾದುದು.ದಲಿತರ ನಂಬಿಕೆಗಳ ಜೊತೆಗೆ ಅವರಲ್ಲಿ ಅರಿವು ಮೂಡಿಸಬೇಕು ಹೊರತು ಅವರನ್ನು ವಿಂಗಡಿಸಿ ದೂರ ಇಡಬಾರದು ಎಂದು ಮಾಲಗತ್ತಿ ತಿಳಿಸಿದರು.
  

 ಜನ ಸಾಮನ್ಯರು ಮೌಢ್ಯಗಳಿಂದ ಹೊರಬಂದು ಶೋಷಣೆ, ಕೋಮುವಾದದ ವಿರುದ್ಧ ಸಂಘಟಿತರಾಗಬೇಕಾಗಿದೆ.  ಈ ನಿಟ್ಟಿನಲ್ಲಿ ಜನನುಡಿ ಒಂದು ಉತ್ತಮ ಪ್ರಯತ್ನ ಎಂದು ಮನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ವಿಲ್ಪ್ರೇಡ್ ಡಿ ಸೋಜ ಹೇಳಿದರು.

ಜನಪರಂಪರೆಯನ್ನು ಅರ್ಥ ಮಾಡಿಕೊಂಡಾಗ ಸಮತೆಯ ಅರಿವು ಮೂಡಲು ಸಾಧ್ಯ ಎಂದು ಜ್ಯೋತಿ ಚೇಳ್ಯಾರ್ ತಿಳಿಸಿದರು.

ದಲಿತರಲ್ಲಿ ಸಮಾನತೆ , ಸ್ವಾಭಿಮಾನ ಮೂಡಿಸುವಲ್ಲಿ ಜನನುಡಿ ಪರಿಣಾಮಕಾರಿಯಾಗಿದೆ ಎಂದು ಕೊರಗ ಸಮುದಾಯದ ಮುಖಂಡ ಬಲರಾಜ್ ಕೋಡಿಕಲ್ ತಿಳಿಸಿದರು.

ಅನಂತ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News