ವಿಶ್ವ ಜಿಎಸ್‌ಬಿ ಸಮ್ಮೇಳನಕ್ಕೆ ವಿದ್ಯುಕ್ತ ತೆರೆ
ಹೆಜಮಾಡಿ, ಡಿ.25: ಕರಾವಳಿಯ ಮೂರು ಜಿಲ್ಲೆಗಳಲ್ಲದೇ ಹೊರ ಜಿಲ್ಲೆಗಳಿಂದ ಹಾಗೂ ಗೋವಾ, ಕೇರಳ, ಮಹಾರಾಷ್ಟ್ರ ಹಾಗೂ ವಿದೇಶ ಗಳಿಂದಲೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ ಜಿಎಸ್‌ಬಿ ಸಮಾಜ ಬಾಂಧವರು ಉತ್ಸಾಹದಿಂದ ಪಾಲ್ಗೊಂಡ ವಿಶ್ವ ಜಿಎಸ್‌ಬಿ ಸಮ್ಮೇಳನ ಇಂದು ಸಂಜೆ ಹೆಜಮಾಡಿಯ ಬಸ್ತಿಪಡ್ಪು ಮೈದಾನದಲ್ಲಿ ವಿದ್ಯುಕ್ತವಾಗಿ ಮುಕ್ತಾಯ ಗೊಂಡಿತು.
ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಆದರ್ಶ ಸಮಾಜದ ರೂವಾರಿಗಳನ್ನು ಸೃಷ್ಟಿಸಲು, ಮೌಲ್ಯಯುತ ಶಿಕ್ಷಣಕ್ಕೆ ಪ್ರಾಶಸ್ತ್ಯ ನೀಡಲು, ಉದ್ಯಮ ನಿರ್ಮಾಣಕ್ಕೆ ಸಹಕಾರ, ಸಾಮಾಜಿಕ ಕ್ರಾಂತಿಯ ವಿಸ್ತರಣೆ ಮಾಡುವ ತೀರ್ಮಾನಗಳೊಂದಿಗೆ ಸಮ್ಮೇಳನಕ್ಕೆ ತೆರೆಬಿತ್ತು.
ಐತಿಹಾಸಿಕ ಸಮ್ಮೇಳನದ ಸವಿನೆನಪಿಗಾಗಿ ಮಣಿಪಾಲದಲ್ಲಿ ಜಿಎಸ್‌ಬಿ ಸಭಾಂಗಣವನ್ನು ನಿರ್ಮಿಸಲು ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯವಾದಿಗಳಾದ ಎಂ.ವಿ.ಕಿಣಿ ಅವರು ಮಾತನಾಡಿ, ಸಂವಿಧಾನದ 29 ಮತ್ತು 30ನೇ ಪರಿಚ್ಛೇಧದಲ್ಲಿ ಅಲ್ಪಸಂಖ್ಯಾತ ಸಮಾಜಕ್ಕೆ ಸಿಗುವ ಸವಲತ್ತುಗಳ ಬಗ್ಗೆ ವಿವರಿಸಿದರು. ಸಾರಸ್ವತ ಸಮಾಜ ಮೀಸಲಾತಿಯ ಸೌಲಭ್ಯವಿಲ್ಲದೇ ಬಲಿಷ್ಠವಾಗಿ ಬೆಳೆದಿದೆ ಎಂದರು. ಮುಂದಿನ ದಿನಗಳಲ್ಲಿ ಮೀಸಲಾತಿಯ ಅಗತ್ಯವಿದ್ದಲ್ಲಿ ಅದನ್ನು ಹೇಗೆ ನ್ಯಾಯಯುತವಾಗಿ ಪಡೆಯಬಹುದು ಎಂಬುದನ್ನು ವಿವರಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರಿನ ಉದ್ಯಮಿ ಜಗನ್ನಾಥ ಶೆಣೈ ಅವರು ಮಾತನಾಡಿ, ಮನೆಯಲ್ಲಿ ಆರಂಭಗೊಂಡ ಸಂಸ್ಕಾರ, ಸಂಸ್ಕೃತಿಯಾಗಿ ರೂಪುಗೊಂಡು ಬಲಿಷ್ಠ ಸಮಾಜ ನಿರ್ಮಾಣಕ್ಕೆ ಪೂರಕವಾಗುತ್ತದೆ ಎಂದರು.
ಸಮಾರಂಭದಲ್ಲಿ ನಿವೃತ್ತ ವೈಸ್ ಅಡ್ಮಿರಲ್ ಆರ್.ರಾವ್, ಸಿಎ ಎಸ್. ಎಸ್. ನಾಯಕ್, ಗೋವಾ ಜಿಎಸ್‌ಬಿ ಸಮಾಜ ಮುಖ್ಯಸ್ಥ ಗಿರಿರಾಜ ಭಂಡಾರ್ಕರ್, ವಿನಾಯಕ್ ಶ್ಯಾನುಬೋಗ್, ಮನೋಹರ ನಾಯಕ್, ಉತ್ತರ ಕನ್ನಡ ಯುವವಾಹಿನಿ ಮುಖ್ಯಸ್ಥ ರಾಘವಬಾಲೆರಿ, ನಾಂದ್ಯಾಲ ರಘುವೀರ ಶೆಣೈ, ರಘುನಂದನ್ ಕಾಮತ್, ಧ್ಯಾನಚಂದ್ ಪ್ರಶಸ್ತಿ ವಿಜೇತ ಉದಯಪ್ರಭು, ಪಾಂಗಾಳ ವಿಲಾಸ ನಾಯಕ್ ಮುಂತಾದವರು ಉಸ್ಥಿತರಿದ್ದರು.
ಸಮ್ಮೇಳನ ಸ್ವಾಗತ ಸಮಿತಿ ಉಪಾಧ್ಯಕ್ಷ ಬಿ.ಆರ್.ರಾವ್ ಸ್ವಾಗತಿಸಿದರು, ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಹಿತರಕ್ಷಣಾ ವೇದಿಕೆ ಅಧ್ಯಕ್ಷ ಸತೀಶ್ ಹೆಗ್ಡೆ ವಂದಿಸಿದರು.