ಲಯನ್ಸ್ ಕ್ಲಬ್ ಉಡುಪಿ-ಇಂದ್ರಾಳಿಯಿಂದ ಮನೆ, ಶೌಚಾಲಯಗಳ ಕೊಡುಗೆ
ಉಡುಪಿ, ಡಿ.25: ರಜತ ಮಹೋತ್ಸವದತ್ತ ಧಾವಿಸುತ್ತಿರುವ ಲಯನ್ಸ್ ಜಿಲ್ಲೆ 317ಸಿಯ ಲಯನ್ಸ್ ಕ್ಲಬ್ ಉಡುಪಿ-ಇಂದ್ರಾಳಿ ಎರಡು ಮನೆಗಳ ನಿರ್ಮಾಣ, 8 ಶೌಚಾಲಯಗಳ ನಿರ್ಮಾಣ ಸೇರಿದಂತೆ ಒಟ್ಟು 6.56 ಲಕ್ಷ ರೂ.ಮೊತ್ತದ ವಿವಿಧ ಸೇವಾ ಕಾರ್ಯಕ್ರಮಗಳನ್ನು ಸಾಕಾರಗೊಳಿಸಿದೆ ಎಂದು ಕ್ಲಬ್‌ನ ಅಧ್ಯಕ್ಷ ಅಧ್ಯಕ್ಷ ಮುಹಮ್ಮದ್ ವೌಲ ಹೇಳಿದ್ದಾರೆ.
ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಕ್ಲಬ್‌ಗೆ ಭೇಟಿ ನೀಡಿದ ಜಿಲ್ಲಾ ಗವರ್ನರ್ ಬಿ.ದಿವಾಕರ ಶೆಟ್ಟಿ ಅವರ ಮೂಲಕ ಈ ಎಲ್ಲಾ ಸೇವೆಗಳನ್ನು ಸಾಕಾರಗೊಳಿಸಲಾಗಿದೆ ಎಂದರು.
ಇವುಗಳಲ್ಲಿ ಸ್ಪಂದನ ವಿಶೇಷ ಶಾಲೆಗೆ ಸಹಾಯಧನ ವಿತರಣೆ, ಆಶಾ ನಿಲಯ ವಿಶೇಷ ಶಾಲೆಗೆ 50 ಫ್ಯಾನ್‌ಗಳ ಕೊಡುಗೆ, ಸಭಾಂಗಣ ನಿರ್ಮಾಣಕ್ಕೆ 20,000ರೂ. ಹಾಗೂ ಪೋಡಿಯಂ ಕೊಡುಗೆ ನೀಡಲಾಗಿದೆ. ಅಲ್ಲದೇ ಅನಾರೋಗ್ಯ ಪೀಡಿತರಿಗೆ ಸಹಾಯಧನ, ವಿದ್ಯಾರ್ಥಿ ವೇತನವನ್ನೂ ವಿತರಿಸಲಾಗಿದೆ ಎಂದು ವೌಲಾ ಹೇಳಿದರು.
ಕಳೆದೊಂದು ವರ್ಷದಲ್ಲಿ 2 ಬೃಹತ್ ಕಣ್ಣಿನ ತಪಾಸಣಾ ಶಿಬಿರಗಳ ಮೂಲಕ 28 ಮಂದಿಗೆ ಶಸ್ತ್ರಚಿಕಿತ್ಸೆ, 153 ಕನ್ನಡಕಗಳ ವಿತರಣೆ, ಎರಡು ರಕ್ತದಾನ ಶಿಬಿರದ ಮೂಲಕ 177 ಯುನಿಟ್ ರಕ್ತ ಸಂಗ್ರಹಿಸಲಾಗಿದೆ. ಹಿಂದೂ ರುದ್ರಭೂಮಿ ಸೇರಿದಂತೆ ವಿವಿದೆಡೆಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಗಿದೆ. ಅಲ್ಲದೇ ಬೀದಿ ವ್ಯಾಪಾರಿಗಳಿಗೆ 13 ಕೊಡೆಗಳನ್ನು ನೀಡಲಾಗಿದೆ. ಆರ್ಥಿಕವಾಗಿ ಹಿಂದುಳಿದ 800 ಮಕ್ಕಳಿಗೆ ಮಧ್ಯಾಹ್ನದೂಟವನ್ನು ನೀಡಲಾಗಿದೆ ಎಂದರು.
ಉಸ್ಥಿತರಿದ್ದ ಜಿಲ್ಲಾ ಗವರ್ನರ್ ದಿವಾಕರ ಶೆಟ್ಟಿ ಮಾತನಾಡಿ, 2017ರಲ್ಲಿ ಲಯನ್ಸ್ ಕ್ಲಬ್ ಜಾಗತಿಕವಾಗಿ ಶತಮಾನೋತ್ಸವನ್ನು ಆಚರಿಸಲಿದೆ. ಈ ಸಂದರ್ಭದಲ್ಲಿ ನಾಲ್ಕು ಕಂದಾಯ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಲಯನ್ಸ್ ಜಿಲ್ಲೆ 317ಸಿ, ಈಗ 82 ಇರುವ ಕ್ಲಬ್‌ಗಳ ಸಂಖ್ಯೆಯನ್ನು 100ಕ್ಕೆ ಹಾಗೂ ಸದಸ್ಯರ ಸಂಖ್ಯೆಯನ್ನು 300ಕ್ಕೆ ಹೆಚ್ಚಿಸಲು ಉದ್ದೇಶಿಸಿದೆ ಎಂದರು. ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 1.25 ಕೋಟಿ ರೂ.ವೌಲ್ಯದ ಸೇವಾ ಕಾರ್ಯಗಳನ್ನು ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಗವರ್ನರ್ ಜಯಕರ ಶೆಟ್ಟಿ ಇಂದ್ರಾಳಿ, ಕ್ಲಬ್‌ನ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ, ಕೋಶಾಧಿಕಾರಿ ಮನೋಹರ ಶೆಟ್ಟಿ ತೋನ್ಸೆ, ಲಯನೆಸ್ ಅಧ್ಯಕ್ಷೆ ರೂಪಶ್ರೀ ರತ್ನಾಕರ್, ಲಿಯೋ ಅಧ್ಯಕ್ಷ ಫೌಜಾನ ಅಕ್ರಂ ಹಾಗೂ ಸುನಿಲ್ ಸಾಲ್ಯಾನ್ ಉಪಸ್ಥಿತರಿದ್ದರು.