ವಿಶ್ವಸಂಸ್ಥೆಯ ಜೊತೆ ನಂಟು ಕಡಿಯಲು ಇಸ್ರೇಲ್ ಸಿದ್ಧತೆ?
ನ್ಯೂಯಾರ್ಕ್,ಡಿ.25: ಫೆಲೆಸ್ತೀನ್ ನೆಲದಲ್ಲಿ ಇಸ್ರೇಲಿ ವಸಾಹತುಗಳ ನಿರ್ಮಾಣವನ್ನು ನಿಲ್ಲಿಸುವಂತೆ ಒತ್ತಾಯಿಸುವ ನಿರ್ಣಯವನ್ನು ಭದ್ರತಾಮಂಡಳಿ ಅಂಗೀಕರಿಸಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಜೊತೆಗಿನ ಬಾಂಧವ್ಯವನ್ನು ಇಸ್ರೇಲ್ ಮರುಪರಿಶೀಲಿಸಲಿದೆಯೆಂದು ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಶನಿವಾರ ತಿಳಿಸಿದ್ದಾರೆ.
ಪಶ್ಚಿಮದಂಡೆ ಹಾಗೂ ಪೂರ್ವ ಜೆರುಸಲೇಮ್‌ನಲ್ಲಿ ಇಸ್ರೇಲಿ ವಸಾಹತುಗಳ ನಿರ್ಮಾಣವನ್ನು ನಿಲ್ಲಿಸುವಂತೆ ಆಗ್ರಹಿಸುವ ನಿರ್ಣಯವನ್ನು ಶನಿವಾರ 15 ಸದಸ್ಯ ಬಲದ ಭದ್ರತಾ ಮಂಡಳಿಯಲ್ಲಿ ಮಂಡಿಸಿತ್ತು. ಈ ಸಂದರ್ಭದಲ್ಲಿ, ನಿರ್ಣಯದ ವಿರುದ್ಧ ವಿಟೋ ಅಧಿಕಾರವನ್ನು ಚಲಾಯಿಸದಿರುವ ಮೂಲಕ ಅಮೆರಿಕವು ಇಸ್ರೇಲ್‌ಗೆ ರಾಜತಾಂತ್ರಿಕ ರಕ್ಷಣೆ ನೀಡುವ ತನ್ನ ದೀರ್ಘಕಾಲದ ನಿಲುವಿನಿಂದ ದೂರಸರಿದಿತ್ತು. ಅಮೆರಿಕದ ಈ ನಿರ್ಧಾರವು ನಾಚಿಕೆಗೇಡಿನದು ಎಂದು ನೆತನ್ಯಾಹು ನಿನ್ನೆ ಕಿಡಿಕಾರಿದ್ದರು.
‘‘ವಿಶ್ವಸಂಸ್ಥೆಯ ಸಂಘಟನೆಗಳಿಗೆ ಇಸ್ರೇಲ್ ನೀಡುತ್ತಿರುವ ಆರ್ಥಿಕ ನೆರವು ಹಾಗೂ ಇಸ್ರೇಲಿನಲ್ಲಿ ವಿಶ್ವಸಂಸ್ಥೆ ಪ್ರತಿನಿಧಿಗಳ ಉಪಸ್ಥಿತಿ ಸೇರಿದಂತೆ ವಿಶ್ವಸಂಸ್ಥೆಯ ಜೊತೆಗೆ ಹೊಂದಿರುವ ನಮ್ಮ ಎಲ್ಲಾ ನಂಟುಗಳ ಮರುವೌಲ್ಯಮಾಪನವನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ನಾನು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ’’ ಎಂದು ನೆತಾನ್ಯಾಹು ಇಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ರೇಡಿಯೋ ಭಾಷಣದಲ್ಲಿ ತಿಳಿಸಿದ್ದಾರೆ.
ತನ್ನ ದೀರ್ಘ ಸಮಯದ ಮಿತ್ರ ರಾಷ್ಟ್ರವಾದ ಇಸ್ರೇಲ್ ಹಾಗೂ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಎದುರಾದ ಭಾರೀ ಒತ್ತಡವನ್ನು ಲೆಕ್ಕಿಸದೆ ಅಮೆರಿಕವು ಭದ್ರತಾ ಮಂಡಳಿಯ ಸಭೆಗೆ ಗೈರುಹಾಜರಾಗಿತ್ತು. 14 ಮತಗಳೊಂದಿಗೆ ನಿರ್ಣಯವು ಅಂಗೀಕರಿಸಲ್ಪಟ್ಟಿತ್ತು. 1967ರಲ್ಲಿ ಅರಬ್ ರಾಷ್ಟ್ರಗಳೊಂದಿಗಿನ ಸಮರದ ಬಳಿಕ ಇಸ್ರೇಲ್ ವಶಪಡಿಸಿಕೊಂಡ ಪಶ್ಚಿಮದಂಡೆ ಗಾಝಾ ಹಾಗೂ ಪೂರ್ವ ಜೆರುಸಲೇಂಗಳಲ್ಲಿ ಯಹೂದಿ ವಸಾಹತುಗಳನ್ನು ನಿರ್ಮಿಸುವ ನೀತಿಯನ್ನು ಇಸ್ರೇಲ್ ಹಲವು ದಶಕಗಳಿಂದ ಮುಂದುವರಿಸುತ್ತಾ ಬಂದಿದೆ.
ಪಶ್ಚಿಮದಂಡೆ ಹಾಗೂ ಪೂರ್ವ ಜೆರುಸಲೇಂನಲ್ಲಿ ಇಸ್ರೇಲಿ ವಸಾಹತು ನಿರ್ಮಾಣ ಚಟುವಟಿಕೆಯು ಅಕ್ರಮವಾಗಿದ್ದು, ಶಾಂತಿಸ್ಥಾಪನೆಗೆ ಅಡ್ಡಿಯಾಗಿದೆಯೆಂದು ಅದು ಹೇಳಿಕೊಂಡಿವೆ.
‘‘ವಿಶ್ವಸಂಸ್ಥೆಯ ಸಂಘಟನೆಗಳಿಗೆ ಇಸ್ರೇಲ್ ನೀಡುತ್ತಿರುವ ಆರ್ಥಿಕ ನೆರವು ಹಾಗೂ ಇಸ್ರೇಲಿನಲ್ಲಿ ವಿಶ್ವಸಂಸ್ಥೆ ಪ್ರತಿನಿಧಿಗಳ ಉಪಸ್ಥಿತಿ ಸೇರಿದಂತೆ ವಿಶ್ವಸಂಸ್ಥೆಯ ಜೊತೆಗೆ ಹೊಂದಿರುವ ನಮ್ಮ ಎಲ್ಲಾ ನಂಟುಗಳ ಮರುವೌಲ್ಯಮಾಪನವನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ನಾನು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ’’
ಭದ್ರತಾ ಮಂಡಳಿ ನಿರ್ಣಯಕ್ಕೆ ಅರಬ್‌ಲೀಗ್ ಸ್ವಾಗತ
ಕೈರೋ,ಡಿ.25: ಇಸ್ರೇಲ್ ಫೆಲೆಸ್ತೀನ್ ನೆಲದಲ್ಲಿ ವಸಾಹತುಗ ನಿರ್ಮಾಣವನ್ನು ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸುವ ನಿರ್ಣಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಂಗೀಕರಿಸಿರುವುದನ್ನು ಅರಬ್‌ಲೀಗ್ ಸ್ವಾಗತಿಸಿದೆ.
‘‘ತಮ್ಮ ನ್ಯಾಯಬದ್ಧ ಹಕ್ಕುಗಳನ್ನು ಪಡೆಯಲು ಪೂರ್ವಜೆರುಸಲೇಂನ್ನು ರಾಜಧಾನಿಯನ್ನಾಗಿ ಮಾಡಿಕೊಂಡ ಸ್ವತಂತ್ರ ಫೆಲೆಸ್ತೀನ್ ರಾಜ್ಯದ ಸ್ಥಾಪನೆಗೆ ಫೆಲೆಸ್ತೀನ್ ಜನತೆ ನಡೆಸಿದ ಹೋರಾಟವನ್ನು ಈ ನಿರ್ಣಯವು ಪ್ರತಿಬಿಂಬಿಸುತ್ತಿದೆ’’ ಎಂದು ಅರಬ್‌ಲೀಗ್ ವರಿಷ್ಠ ಅಹ್ಮದ್ ಅಬೌಲ್‌ಘಾತಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಮಂಡಳಿಯ 15 ಸದಸ್ಯ ರಾಷ್ಟ್ರಗಳ ಪೈಕಿ 14 , ಈ ನಿರ್ಣವನ್ನು ಅನುಮೋದಿಸಿದ್ದವು. ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೀವ್ರ ಪ್ರಯತ್ನದ ಹೊರತಾಗಿಯೂ ಅಮೆರಿಕವು ನಿರ್ಣಯದ ವಿರುದ್ಧ ವಿಟೋ ಪ್ರಯೋಗಿಸಲು ನಿರಾಕರಿಸಿತ್ತು.