×
Ad

ಹಾಸ್ಯದಿಂದ ಮಾನಸಿಕ ಸಮಸ್ಯೆ ದೂರ: ಸಚಿವ ಪ್ರಮೋದ್

Update: 2016-12-25 22:23 IST

ಉಡುಪಿ, ಡಿ.25: ಹಾಸ್ಯದಿಂದ ಬಹುತೇಕ ಸಮಸ್ಯೆಯನ್ನು ದೂರ ಮಾಡ ಬಹುದಾಗಿದೆ. ಹಾಸ್ಯಕ್ಕೆ ಬಹಳ ದೊಡ್ಡ ಶಕ್ತಿ ಇದೆ. ಮಾನಸಿಕ ಸಮಸ್ಯೆಗಳಿಗೆ ಹಾಸ್ಯ ಅತ್ಯುತ್ತಮವಾದ ಔಷಧಿಯಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಉಡುಪಿ ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ‘ರಸಿಕ ರತ್ನ’ ವಿಟ್ಲ ಜೋಷಿ ಪ್ರತಿಷ್ಠಾನ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಸಹಯೋಗ ದೊಂದಿಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ‘ರಸಿಕ ರತ್ನ’ ವಿಟ್ಲ ಜೋಷಿ ಜನ್ಮ ಶತಮಾನೋತ್ಸವ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ  ನಡೆದ ವೃತ್ತಿಯಲ್ಲಿ ಹಾಸ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಂಪೂರ್ಣ ಹಾಸ್ಯಮಯ ಯಕ್ಷಗಾನ ಮಾಡುವ ಕನಸು ನನಗೆ ಇತ್ತು. ಆದರೆ ಅದು ಈವರೆಗೆ ಕೈಗೂಡಿಲ್ಲ. ಯಕ್ಷಗಾನದಲ್ಲಿ ಹಾಸ್ಯ ಪಾತ್ರ ಅತಿ ಮುಖ್ಯ. ಹಾಸ್ಯದಲ್ಲಿ ಹೊಸತನ ಹುಡುಕುವುದು ಸುಲಭದ ಕೆಲಸವಲ್ಲ. ಆದರೆ ವಿಟ್ಲ ಜೋಶಿಯವರು ಹೊಸತನದಿಂದ ಕೂಡಿತ ಹಾಸ್ಯವನ್ನು ಮಾಡುವ ಮೂಲಕ ಹಾಸ್ಯ ಸಾಮ್ರಾಟ ಎನಿಸಿಕೊಂಡಿದ್ದರು ಎಂದರು.

ಮಾನಸಿಕ ತಜ್ಞ ಡಾ.ಪಿ.ವಿ.ಭಂಡಾರಿ, ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್, ಹಾಸ್ಯ ಸಾಹಿತಿ ಸತ್ಯವತಿ ಹರಿಕೃಷ್ಣನ್, ಲೇಖಕ ಶಾಂತರಾಜ ಐತಾಳ್, ಪ್ರತಿಷ್ಠಾನದ ಅಧ್ಯಕ್ಷ ಡಾ.ಹರೀಶ್ ಜೋಶಿ ವಿಟ್ಲ ಉಪಸ್ಥಿತ ರಿದ್ದರು.

ಟ್ರಸ್ಟ್‌ನ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು.

ಪ್ರತಿಷ್ಠಾನ ಕಾರ್ಯದರ್ಶಿ ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News