ಮುಲ್ಕಿ : ಸಾರ್ವಜನಿಕ ಕ್ರಿಸ್‌ಮಸ್ ದಿನಾಚರಣೆ
ಮುಲ್ಕಿ, ಡಿ.26: ಎಲ್ಲಾ ಮತಗಳ ಧ್ಯೇಯ ಒಂದೇ ಆಗಿದ್ದು, ಹಬ್ಬ ಹರಿದಿನಗಳನ್ನು ಸರ್ವಧರ್ಮೀಯರು ಒಟ್ಟಾಗಿ ಆಚರಿಸಿದರೆ ಸೌಹಾರ್ದತೆ ಬೆಳೆಯುವ ಜೊತೆಗೆ ಪ್ರಜಾ ಪ್ರಭುತ್ವ ವ್ಯವಸ್ಥೆಗೂ ಅರ್ಥ ಬರುವುದು ಎಂದು ಬಹುಭಾಷಾ ಸಾಹಿತಿ ಮುಹಮ್ಮದ್ ಬಡ್ಡೂರು ಹೇಳಿದರು.
ಪದ್ಮನೂರು ಸಾರ್ವಜನಿಕ ಬಯಲಾಟ ಸಮಿತಿ, ಕಿನ್ನಿಗೋಳಿ ಕೊಸೆಸಮ್ಮ ಚರ್ಚ್‌ನ ಸಂತ ಮೈಕಲ್, ಸುಕುರ್ ಮಾತೆ ವಾಳೆ, ಸಂತ ರಪಾಯೆಲ್ ವಾಳೆಗಳ ಸಹಯೋಗದಲ್ಲಿ ಪದ್ಮನೂರು ಸಾರ್ವಜನಿಕ ಬಯಲಾಟ ಸಮಿತಿಯ ಸಭಾಂಗಣದಲ್ಲಿ ರವಿವಾರ ನಡೆದ 51ನೆ ಸಾರ್ವಜನಿಕ ಕ್ರಿಸ್‌ಮಸ್ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದಭರ್ ಸಮಾಜ ಸೇವಕಿ ವನಜ ಶೆಟ್ಟಿಗಾರ್ತಿ ಅವರನ್ನು ಸನ್ಮಾನಿಸಲಾಯಿತು.
ಯಕ್ಷಗಾನ ಬಯಲಾಟ ಸಮಿತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಇದೆ ವೇಳೆ 10 ಮಂದಿಗೆ ಆರೋಗ್ಯ ವಿಮಾ ಯೋಜನೆ, 10 ಮನೆಗಳಿಗೆ ಅಕ್ಕಿ ವಿತರಿಸಲಾಯಿತು.
ಅರ್ಹರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಧನ ಸಹಾಯ ಮಾಡಲಾಯಿತು.
ಪದ್ಮನೂರು ಯಕ್ಷಗಾನ ಬಯಲಾಟ ಸಮಿತಿ ಅಧ್ಯಕ್ಷ ಜೋಸೆಪ್ ಕ್ವಾಡ್ರಸ್ ಅಧ್ಯಕ್ಷತೆ ವಹಿಸಿದ್ದರು
. ಕಿನ್ನಿಗೋಳಿ ಚರ್ಚ್ ಪ್ರಧಾನ ಧರ್ಮಗುರು ಪಾ. ವಿನ್ಸಂಟ್ ಮೊಂತೆರೊ ಕ್ರಿಸ್‌ಮಸ್ ಸಂದೇಶ ನೀಡಿದರು.
ಕಟೀಲು ಪ್ರೌಢ ಶಾಲಾ ಶಿಕ್ಷಕ ಸಾಯಿನಾಥ ಶೆಟ್ಟಿ ಉಪನ್ಯಾಸ ನೀಡಿದರು.
ಸಮಿತಿಯ ಪಿ. ಸತೀಶ್ ರಾವ್, ಜೊತೆ ಕಾರ್ಯದರ್ಶಿ ವಸಂತ್, ಕೋಶಾಧಿಕಾರಿ ಶೇಖರ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಮೆಲಿಟಾ ಡಿಸೋಜ ಸ್ವಾಗತಿಸಿದರು. ಅಶೋಕ ಕುಮಾರ್ ಶೆಟ್ಟಿ ವಂದಿಸಿದರು. ಜ್ಯೋತಿ ಪಾಯಸ್ ಹಾಗೂ ಕಾವ್ಯ ಕಾರ್ಯಕ್ರಮ ನಿರೂಪಿಸಿದರು.