×
Ad

ರಾಜ್ಯದಲ್ಲಿ ಆರು ಜಲಸಾಹಸ ಕ್ರೀಡಾ ಕೇಂದ್ರ ಸ್ಥಾಪನೆ

Update: 2016-12-26 23:38 IST

ಉಡುಪಿ, ಡಿ.26: ಈ ಸಲದ ಬಜೆಟ್‌ನಲ್ಲಿ ಪ್ರಸ್ತಾಪಿಸಿದಂತೆ ರಾಜ್ಯದ ಕಡಲ ತೀರ ಪ್ರದೇಶಗಳಲ್ಲಿ ಆರು ಜಲ ಸಾಹಸ ಕ್ರೀಡಾ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಸರಕಾರ ತಾತ್ವಿಕ ಅನುಮೋದನೆ ನೀಡಿ ಸೋಮವಾರ ಆದೇಶ ಹೊರಡಿಸಿದೆ.

ಸಾಹಸ ಕ್ರೀಡೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರಾವಳಿ ಪ್ರದೇಶಗಳಲ್ಲಿ ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್ಸ್ ಸಹಯೋಗದೊಂದಿಗೆ ಜಲ ಸಾಹಸ ಕ್ರೀಡಾ ಕೇಂದ್ರಗಳನ್ನು 6 ಕೋ.ರೂ. ವೆಚ್ಚದಲ್ಲಿ ಸ್ಥಾಪಿಸುವುದಾಗಿ ಕಳೆದ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದರಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕರಾವಳಿ ಜಲ ಸಾಹಸ ಕ್ರೀಡಾ ಕೇಂದ್ರಗಳನ್ನು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡಮಿ(ಜೇತನಾ) ಮೂಲಕ ಅನುಷ್ಠಾನಗೊಳಿಸಲು ಉದ್ದೇಶಿಸಿದೆ. ಜಲ ಸಾಹಸ ಕ್ರೀಡಾ ಕೇಂದ್ರಗಳನ್ನು ಉತ್ತರ ಕನ್ನಡ ಜಿಲ್ಲೆಯಕಾರವಾರ ಸದಾಶಿವಘಡ, ಮುರ್ಡೇಶ್ವರ ಬೀಚ್, ಉಡುಪಿ ಜಿಲ್ಲೆಯ ಮಲ್ಪೆಬೀಚ್, ಮರವಂತೆ ಬೀಚ್, ದ.ಕ. ಜಿಲ್ಲೆಯಸಸಿಹಿತ್ಲು ಬೀಚ್, ಪಣಂಬೂರು ಬೀಚ್‌ಗಳಲ್ಲಿ ಸ್ಥಾಪಿಸಲಾಗುವುದು. ಮೊದಲ ಹಂತದಲ್ಲಿ ಪ್ರಸ್ತುತ ಸಾಲಿನಲ್ಲಿ ಇಲಾಖೆಗೆ ಒದಗಿಸಲಾಗಿರುವ 2 ಕೋ.ರೂ. ಅನುದಾನದಲ್ಲಿ ಮಲ್ಪೆ ಮತ್ತು ಮುರ್ಡೇಶ್ವರದಲ್ಲಿ ಜಲ ಸಾಹಸ ಕ್ರೀಡಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News