ಅನಾಥ, ನಿರ್ಗತಿಕರಿಗಾಗಿ ಕಾರುಣ್ಯ ಸೇವೆಯಲ್ಲಿ ಭಾಗಿಯಾಗೋಣ-ನೌಶಾದ್ ಬಾಖವಿ
ಉಪ್ಪಿನಂಗಡಿ, ಡಿ. 26 : ಸಮುದಾಯದಲ್ಲಿ ಅದೆಷ್ಟೋ ಅಸಂಖ್ಯಾತ ಮಂದಿ ಅನಾಥರು, ನಿರ್ಗತಿಕರು ನಾನಾ ಕಾಯಿಲೆ ನಿಮಿತ್ತ ಆಸ್ಪತ್ರೆಯಲ್ಲಿದ್ದಾರೆ, ಅಂತಹವರ ಆರೋಗ್ಯ ಸೇವೆ ಮಾಡುವಂತಹ ಕಾರುಣ್ಯಕರವಾದ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದು ನಿಜವಾದ ದೇವರ ಸೇವೆಯಾಗಿದೆ ಎಂದು ಅಂತರಾಷ್ಟ್ರೀಯ ಖ್ಯಾತಿಯ ವಾಗ್ಮಿ, ಯುವ ಸಮೂಹದ ಧ್ರುವ ತಾರೆ ಎಂದೇ ಬಿಂಬಿತವಾಗಿರುವ ಉಸ್ತಾದ್ ನೌಶಾದ್ ಬಾಖವಿ ಹೇಳಿದರು.
ಅವರು ಡಿ. 26ರಂದು ಉಪ್ಪಿನಂಗಡಿಯಲ್ಲಿ "ಸ್ನೇಹ ಸಾಗರಂ-2016" ವೆಲ್ ವಿಷರ್ಸ್ ಮೀಟ್ ಸಮಾರಂಭದಲ್ಲಿ ಮಾತನಾಡಿದರು.
ಕೇರಳದಲ್ಲಿ ತಾಯಿಯೋರ್ವಳ ಸಂಕಷ್ಟವನ್ನು ಕಣ್ಣಾರೆ ಕಂಡು ಮುರುಕು ಪಟ್ಟಿರುವ ನಾನು ನಿರ್ಗತಿಕರು ಮತ್ತು ಅನಾಥರಿಗಾಗಿ ಆಸ್ಪತ್ರೆಯೊಂದನ್ನು ತೆರೆಯುವ ಸಂಕಲ್ಪ ಮಾಡಿರುತ್ತೇನೆ, ಇದಕ್ಕೆ ಸಹೃದಯಿ ಸಹೋದರರ ಸಹಕಾರ ಬೇಕಾಗಿದೆ, ಈ ಮೂಲಕ ನಾವು ಸಮಾಜದಲ್ಲಿ ಇರುವ ಅನಾಥರ, ನಿರ್ಗತಿಕರ ಕಣ್ಣು ಒರೆಸುವ ಕೆಲಸ ಮಾಡೋಣ ಎಂದು ಹೇಳಿದರು. ಖ್ಯಾತ ವಾಗ್ಮಿ ಅಡ್ವಕೇಟ್ ಹನೀಫ್ ಹುದವಿ ಮಾತನಾಡಿ ಬಡವರ ಸೇವೆ ಸಲುವಾಗಿ ಚಾರಿಟೇಬಲ್ ಟ್ರಸ್ಟ್ ಸ್ಥಾಪನೆ ಮಾಡಲಾಗಿ ಆ ಮೂಲಕ ಸಂಘಟಿತರಾಗಿ ಸಮಾಜದ ಸೇವೆಗೆ ಕಟಿಬದ್ಧರಾಗೋಣ ಎಂದರು.
ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಅಬ್ದುಲ್ ಸಲಾಂ ಫೈಝಿ ಅಧ್ಯಕ್ಷತೆ ವಹಿಸಿದ್ದರು.
ಯು.ಟಿ. ಫರೀದ್ ಫೌಂಡೇಶನ್ ಸಂಚಾಲಕ ಯು.ಟಿ. ಇಫ್ತಿಕ್ಕಾರ್, ಉಮರ್ ಫೈಝಿ ಸಾಲ್ಮರ, ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿ ಪದಾಧಿಕಾರಿಗಳಾದ ಶುಕೂರ್ ಹಾಜಿ, ಖಜಾಂಚಿ ಮಹಮ್ಮದ್ ಮುಸ್ತಫಾ, ಅಶ್ರಫ್ ಹಾಜಿ ಕರಾಯ, ಉದ್ಯಮಿಗಳಾದ ಐ. ಅಶ್ರಫ್ ಮೈಸೂರು, ಸುಹೈಲ್ ಕಂದಕ್, ಮೋನು ಹಾಜಿ, ವಕೀಲರಾದ ನೂರುದ್ದೀನ್ ಸಾಲ್ಮರ, ಸಿದ್ದಿಕ್ ಪುತ್ತೂರು, ಸ್ಥಳೀಯ ಪ್ರಮುಖರಾದ ನಝೀರ್ ಮಠ, ಅಂದ್ರ ಪಳ್ಳಂಗೋಡು ಮೊದಲಾದವರು ಉಪಸ್ಥಿತರಿದ್ದರು.
ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಸ್ವಾಗತಿಸಿದರು , ಉಪ್ಪಿನಂಗಡಿ ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ಸಿದ್ದಿಕ್ ಫೈಝಿ ವಂದಿಸಿದರು.