​ಹಾವು ಕಡಿತದಿಂದ ’ಮೃತಪಟ್ಟ’ ಮಹಿಳೆ 40 ವರ್ಷ ಬಳಿಕ ಜೀವಂತ ಮರಳಿದರು!

Update: 2016-12-27 04:16 GMT

ಹೊಸದಿಲ್ಲಿ, ಡಿ.27: ಹಾವು ಕಡಿತದಿಂದ 40 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ ಎನ್ನಲಾದ ಮಹಿಳೆಯೊಬ್ಬರು ಮತ್ತೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದ್ದಾರೆ. ಇಬ್ಬರು ಮಗಳಂದಿರ ಜತೆಗೆ ಮಹಿಳೆ ವಾಪಸ್ಸಾಗಿದ್ದಾರೆ. ಇದು ಯಾವುದೇ ಚಿತ್ರದ ತುಣುಕಲ್ಲ. ವಾಸ್ತವ. ಬಹುಶಃ ಮುಂದೆ ಚಿತ್ರವಸ್ತುವಾದರೂ ಅಚ್ಚರಿ ಇಲ್ಲ.

ಕಾನ್ಪುರದ ಬಿಂಧೂ ಗ್ರಾಮದ 82 ವರ್ಷದ ಮಹಿಳೆ, ನಾಲ್ಕು ದಶಕಗಳ ಬಳಿಕ ಮಕ್ಕಳ ಜತೆಗೆ ವಾಪಸ್ಸಾಗಿದ್ದಾರೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

ವಿಲಾಸ ಎಂಬ ಮಹಿಳೆ 1976ರಲ್ಲಿ ಹಾವು ಕಚ್ಚಿ ಮೃತಪಟ್ಟಿದ್ದರು ಎನ್ನಲಾಗಿತ್ತು. ಕುಟುಂಬ ಸದಸ್ಯರು ಆಕೆಯ ದೇಹವನ್ನು ಗಂಗೆಯಲ್ಲಿ ತೇಲಿಬಿಟ್ಟು ಅಂತಿಮ ವಿಧಿವಿಧಾನ ನೆರವೇರಿಸಿದ್ದರು. ಆದರೆ ಅಚ್ಚರಿ ಎಂಬಂತೆ ಮಹಿಳೆ ಮನೆಗೆ ವಾಪಸ್ಸಾಗಿ, ಹಾವು ಕಡಿತದಿಂದ ನಾನು ಮೃತಪಟ್ಟಿಲ್ಲ ಎಂದು ಹೇಳಿದರು. ಹಾವು ಕಡಿತದಿಂದ ಪ್ರಜ್ಞೆ ಕಳೆದುಕೊಂಡಿದ್ದೆ. ಜನ ಪಾರು ಮಾಡಿ ಗ್ರಾಮದ ದೇವಸ್ಥಾನವೊಂದಕ್ಕೆ ಕರೆದೊಯ್ದರು ಎಂದು ವಿವರಣೆ ನೀಡಿದ್ದಾರೆ.
ಗದ್ದೆಯಿಂದ ಹುಲ್ಲು ತರಲು ಹೋಗಿದ್ದ ಮಹಿಳೆಗೆ ಹಾವು ಕಡಿದಿತ್ತು. ಗ್ರಾಮದ ವೈದ್ಯರ ಬಳಿಗೆ ಆಕೆಯನ್ನು ಒಯ್ಯಲಾಗಿತ್ತು. ಯಾವ ಔಷಧಿಯೂ ಪರಿಣಾಮ ಬೀರದೇ, ಆಕೆ ಮೃತಪಟ್ಟಳು ಎಂದು ಕುಟುಂಬದವರು ನಂಬಿದ್ದರು. ವಾಸ್ತವವಾಗಿ ಪ್ರಜ್ಞೆ ಕಳೆದುಕೊಂಡ ಆಕೆ ನೆನಪಿನ ಶಕ್ತಿ ಕಳೆದುಕೊಂಡರು. ಆಕೆಯ ದೇಹವನ್ನು ಗಂಗೆಯಲ್ಲಿ ಮುಳುಗಿಸಲಾಯಿತು. ದೇಹ ತೇಲಿಕೊಂಡು ಕನ್ನೌಜ್ ಜಿಲ್ಲೆಯ ಗಡಿಯಲ್ಲಿ ಗ್ರಾಮವೊಂದಕ್ಕೆ ತಲುಪಿತು. ಸರಾಯ್ ತೇಕು ಗ್ರಾಮದ ರಾಮಶರಣ್ ಎಂಬವರು ಆಕೆಯ ಪ್ರಜ್ಞೆ ಮರಳಲು ಕಾರಣರಾದರು.
ರಾಮಕುಮಾರಿ ಹಾಗೂ ಮುನ್ನಿ ಎಂಬ ಹೆಣ್ಣುಮಕ್ಕಳು ತಾಯಿ ಮನೆ ಮುಂದೆ ಪ್ರತ್ಯಕ್ಷವಾದಾಗ ಬೆರಗಾದರು. ಇಡೀ ಘಟನೆ ಬಗ್ಗೆ ನೆನಪು ಕಳೆದುಕೊಂಡ ವಿಲಾಸ ಅವರಿಗೆ ಇತ್ತೀಚೆಗೆ ನೆನಪು ಮರುಕಳಿಸಿತು ಎಂದು ಮಗಳು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News