ಆರೆಸ್ಸೆಸ್ ಕೇಂದ್ರ ನಾಗ್ಪುರದಲ್ಲೇ 5000 ಹಿಂದುಳಿದ ವರ್ಗಗಳ ಜನರಿಂದ ಬೌದ್ಧ ಧಮ್ಮಕ್ಕೆ 'ಘರ್ ವಾಪ್ಸಿ'

Update: 2016-12-27 07:06 GMT

ನಾಗ್ಪುರ, ಡಿ.27: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಆರು ಲಕ್ಷ ದಲಿತರು ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡ 60 ವರ್ಷಗಳ ನಂತರ ಈ ರವಿವಾರ ಆರೆಸ್ಸೆಸ್ ಕೇಂದ್ರ ನಾಗ್ಪುರದಲ್ಲಿ 5000ಕ್ಕೂ ಅಧಿಕ ಇತರ ಹಿಂದುಳಿದ ವರ್ಗಗಳ ಜನರು ಬೌದ್ಧ ಧರ್ಮ ಸ್ವೀಕರಿಸಿದ್ದಾರೆ.

ದೀಕ್ಷಭೂಮಿಯಲ್ಲಿ ನಡೆದ ಈ ಬೌದ್ಧ ಧರ್ಮ ಸ್ವೀಕಾರ ಸಮಾರಂಭವು ಸತ್ಯಶೋಧಕ್ ಒಬಿಸಿ ಪರಿಷದ್ ನಡೆಸಿದ ಐದು ವರ್ಷಗಳ ಕಾರ್ಯಯೋಜನೆಯ ಫಲಶ್ರುತಿಯಾಗಿದೆ. ಆರಂಭದಲ್ಲಿ ಈ ಸಮಾರಂಭವನ್ನು ಅಂಬೇಡ್ಕರ್ ಅವರು ಬೌದ್ಧ ಧರ್ಮ ದೀಕ್ಷೆ ತೆಗೆದುಕೊಂಡ ದಿನದ ವಾರ್ಷಿಕೋತ್ಸವದಂದೇ ನಡೆಸಲು ಪರಿಷದ್ ಯೋಚಿಸಿತ್ತಾದರೂ ಆ ದಿನ ನಾಗ್ಪುರದಲ್ಲಿ ಭಾರೀ ಜನಜಂಗುಳಿಯಿರಬಹುದೆಂದು ಅಂದಾಜಿಸಿ ಈ ಯೋಚನೆಯನ್ನು ಮುಂದೂಡಲಾಗಿತ್ತು.

ಅಂತಿಮವಾಗಿ, ಸಾವಿತ್ರಿ ಭಾಯಿ ಫುಲೆ ಅವರು ಹುಡುಗಿಯರಿಗಾಗಿ ಪ್ರಥಮ ಶಾಲೆ ಸ್ಥಾಪಿಸಿದ ದಿನದಂದು ಅದು ಕ್ರಿಸ್ಮಸ್ ದಿನ ಹಾಗೂ ಮನುಸ್ಮತಿ ದಹನ್ ದಿವಸ್ ಕೂಡ ಆಗಿದ್ದರಿಂದ ಡಿಸೆಂಬರ್ 25ರಂದು ನಡೆಸಲು ನಿರ್ಧರಿಸಲಾಯಿತೆಂದು ಪರಿಷದ್ ಹೇಳಿಕೊಂಡಿದೆ.

2011ರಿಂದ ತನ್ನ ಕಾರ್ಯಯೋಜನೆ ಆರಂಭಿಸಿದ್ದ ಪರಿಷದ್ ಇತರ ಹಿಂದುಳಿದ ವರ್ಗದವರನ್ನು ‘ನಾಗವಂಶಿಗಳು’ ಹಾಗೂ ಮಧ್ಯಯುಗದಲ್ಲಿ ಅವರು ಬೌದ್ಧ ಧರ್ಮದವರಾಗಿದ್ದರು ಎಂದು ಅಂದುಕೊಂಡಿತ್ತಲ್ಲದೆ, ಅವರ ಬೌದ್ಧ ಧರ್ಮಕ್ಕೆ ಮತಾಂತರ 'ನಿಜವಾದ ಘರ್ ವಾಪ್ಸಿ' ಎಂದು ಹೇಳಿಕೊಂಡಿದೆ.

ಮತಾಂತರಗೊಂಡ ಹೆಚ್ಚಿನವರು ಮಹಾರಾಷ್ಟ್ರದವರಾದರೆ, ಪ್ರತಿಯೊಂದು ರಾಜ್ಯದಿಂದ ಕನಿಷ್ಠ 10ರಿಂದ 12 ಪ್ರತಿನಿಧಿಗಳು ಹಾಜರಿದ್ದರು. ಪರಿಷದ್ ತನ್ನ ಕಾರ್ಯಯೋಜನೆಯನ್ನು ಇಡೀ ದೇಶಕ್ಕೆ ವಿಸ್ತರಿಸುವ ಬಗ್ಗೆ ಯೋಚಿಸುತ್ತಿದ್ದು, ಮತಾಂತರಗೊಂಡವರಿಗೆ ಧಾರ್ಮಿಕ ಶಿಕ್ಷಣ ನೀಡಲೂ ತೀರ್ಮಾನಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News