ಸಾಗರ: ಕೊಳವೆಬಾವಿ ಕೊರೆಸಲು ವಿಧಿಸಿರುವ ನಿರ್ಬಂಧದ ವಿರುದ್ಧ ಪ್ರತಿಭಟನೆ
ಸಾಗರ, ಡಿ.27: ಈಗಾಗಲೆ ರಾಜ್ಯದಲ್ಲಿ 1650ಕ್ಕೂ ಹೆಚ್ಚು ರೈತರು ಬೇರೆಬೇರೆ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಕೊಳವೆಬಾವಿ ಕೊರೆಯಲು ಅವಕಾಶವಿಲ್ಲ ಎಂದು ಜಿಲ್ಲಾಡಳಿತ ಅಧಿಸೂಚನೆ ಹೊರಡಿಸುವ ಮೂಲಕ ಮತ್ತಷ್ಟು ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರಣೆ ನೀಡುತ್ತಿದೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ದೂರಿದ್ದಾರೆ.
ಕೊಳವೆಬಾವಿ ತೆಗೆಯುವುದನ್ನು ನಿಷೇಧಿಸಿರುವ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ, ತಕ್ಷಣ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಮಂಗಳವಾರ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಧರಣಿ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಶಿವಮೊಗ್ಗ ಜಿಲ್ಲೆಯಲ್ಲಿ ಸಾಗರ ಹಾಗೂ ಹೊಸನಗರ ಹೊರತುಪಡಿಸಿ ಇತರೆ ಎಲ್ಲ ತಾಲೂಕುಗಳಲ್ಲಿ ಕೊಳವೆಬಾವಿ ಕೊರೆಯಲಾಗುತ್ತಿದೆ. ಆದರೆ ಸಚಿವ ಕಾಗೋಡು ತಿಮ್ಮಪ್ಪ ಪ್ರತಿನಿಧಿಸುವ ಎರಡು ತಾಲೂಕಿನ ರೈತರ ಮೇಲೆ ಜಿಲ್ಲಾಡಳಿತ ಗದಾಪ್ರಹಾರ ಮಾಡುತ್ತಿದೆ. ತಾವು ರೈತರ, ಬಡವರ ಪರ ಎಂದು ಹೇಳುವ ಕಾಗೋಡು ಇಂತಹ ಆದೇಶದ ಪರವಾಗಿ ಮಾತನಾಡುತ್ತಿರುವುದು ಖಂಡನೀಯ. ತಕ್ಷಣ ಸಾಗರ ಹೊಸನಗರ ತಾಲೂಕಿನ ರೈತರಿಗೆ ಬೋರ್‌ವೆಲ್ ಕೊರೆಯಲು ಜಿಲ್ಲಾಡಳಿತ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಡಿ.ಮೇಘರಾಜ್ ಮಾತನಾಡಿ, ಅಂತರ್ಜಲ ಕುಸಿಯುತ್ತಿದೆ ಎನ್ನುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೊಳವೆಬಾವಿ ಕೊರೆಯುವುದರ ಮೇಲೆ ನಿಷೇಧ ಹೇರಿರುವುದು ರೈತರಿಗೆ ಮರಣ ಶಾಸನವಾಗಿದೆ. ಈಗಾಗಲೆ ಕೋಟ್ಯಧಿಪತಿಗಳು ಸಾಕಷ್ಟು ಬೋರ್‌ವೆಲ್‌ಗಳನ್ನು ತೆಗೆಸಿಕೊಂಡಿದ್ದಾರೆ. ಸಣ್ಣ ಹಾಗೂ ಅತಿಸಣ್ಣ ರೈತರು ಬೆಳೆ ಉಳಿಸಿಕೊಳ್ಳಲು ಬೋರ್‌ವೆಲ್ ತೆಗೆಯುವ ಸಂದರ್ಭದಲ್ಲಿ ಜಿಲ್ಲಾಡಳಿತ ಇಂತಹ ಕರಾಳ ಕಾನೂನು ಜಾರಿಗೆ ತಂದಿರುವುದು ಖಂಡನೀಯ. ತಕ್ಷಣ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಪ್ರಮುಖರಾದ ಜಿಪಂ ಸದಸ್ಯ ರಾಜಶೇಖರ ಗಾಳಿಪುರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಭೀಮನೇರಿ ಶಿವಪ್ಪ, ವಿ.ಮಹೇಶ್, ಕೆ.ಆರ್.ಗಣೇಶಪ್ರಸಾದ್, ಬಿ.ಮೋಹನ್, ರಘುಪತಿ ಭಟ್, ಕಲಸೆ ಚಂದ್ರಪ್ಪ, ಚೇತನರಾಜ್ ಕಣ್ಣೂರು ಇನ್ನಿತರರು ಹಾಜರಿದ್ದರು.