ಎಸ್‌ಸಿಡಿಸಿಸಿ ಬ್ಯಾಂಕ್‌ನ ಆರ್ಥಿಕ ಸ್ಥಿತಿ ಸದೃಢ: ಅಣ್ಣಯ್ಯ ಶೇರಿಗಾರ್
ಮಂಗಳೂರು, ಡಿ.27: ‘ಗ್ರಾಹಕರೇ ದೇವರು’ ಎನ್ನುವ ಬ್ಯಾಂಕ್ ಉಕ್ತಿಯನ್ನು ತನ್ನ 102 ಶಾಖೆಗಳ ಮೂಲಕ ಹಾಗೂ ಜಿಲ್ಲೆಯ ವಿವಿಧ ಸಹಕಾರಿ ಸಂಘಗಳ ಮೂಲಕ ಸಾಕಾರಗೊಳಿಸಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ತೆರೆದ ಹೆಗ್ಗಳಿಕೆ ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಇದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿವೃತ್ತ ಸಿಬ್ಬಂದಿ ಸಂಘದ ಅಧ್ಯಕ್ಷ ಕೆ. ಅಣ್ಣಯ್ಯ ಶೇರಿಗಾರ್ ತಿಳಿಸಿದ್ದಾರೆ.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಸಿಡಿಸಿಸಿ ಬ್ಯಾಂಕ್ ಗ್ರಾಹಕರಿಗೆ ವಿಶ್ವಾಸನೀಯ ಹಾಗೂ ತ್ವರಿತ ಸೇವೆಗೆ ಹೆಸರುವಾಸಿಯಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಬಡ ಜನರ ಆರ್ಥಿಕ ಶಕ್ತಿಯಾಗಿ ಅವರಲ್ಲಿ ನವ ಚೈತನ್ಯವನ್ನು ಈ ಬ್ಯಾಂಕ್ ಮೂಡಿಸಿದೆ. ಇದನ್ನು ಗುರುತಿಸಿ ಕಳೆದ 18 ವರ್ಷದಿಂದ ನಿರಂತರವಾಗಿ ನಬಾರ್ಡ್, ಅಪೆಕ್ಸ್ ಬ್ಯಾಂಕ್ ಹಾಗೂ ಇತರ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳು ದೊರೆತಿರುವುದು ಬ್ಯಾಂಕ್‌ನ ಪ್ರಾಮಾಣಿಕ ಸೇವೆಗೆ ಸಂದ ಗೌರವವಾಗಿದೆ ಎಂದು ತಿಳಿಸಿದರು.
ಇತ್ತೀಚೆಗೆ ದೃಶ್ಯಮಾಧ್ಯಮವೊಂದರಲ್ಲಿ ಬ್ಯಾಂಕ್‌ನ ವಿರುದ್ಧ ಸುಳ್ಳು ಸುದ್ದಿ ಪ್ರಸಾರಗೊಂಡಿರುವುದು ಖಂಡನೀಯ. ಬ್ಯಾಂಕ್‌ನ ಹಿತದೃಷ್ಟಿಯಿಂದ ಎಲ್ಲರೂ ಒಗ್ಗೂಡಿ ಶಾಖಾ ಮಟ್ಟದಲ್ಲಿ ಗ್ರಾಹಕರನ್ನು ಸಂಪರ್ಕಿಸಿ ವಿಶ್ವಾಸ ಮೂಡಿಸುವ ಪ್ರಕ್ರಿಯೆಗೆ ಸಿದ್ಧರಾಗಿದ್ದು, ಸಹಕಾರಿ ಸಂಘಗಳ ಮೂಲಕವೂ ಈ ಪ್ರಕ್ರಿಯೆ ಕೈಗೊಳ್ಳಲು ಬದ್ಧರಿದ್ದೇವೆ ಎಂದು ತಿಳಿಸಿದ್ದಾರೆ.
ಕಳೆದ 22 ವರ್ಷದಿಂದ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಬ್ಯಾಂಕ್ ಮತ್ತು ಸಹಕಾರಿ ರಂಗವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕ್ ತಾನು ಬೆಳೆದು ತನ್ನೊಂದಿಗೆ ಇತರ ಸಹಕಾರಿ ಸಂಸ್ಥೆಗಳನ್ನು ಬೆಳೆಸಿ ಅಭಿವೃದ್ಧಿಗೊಳಿಸಿದೆ. ಬ್ಯಾಂಕಿನ ಹಾಗೂ ಸಹಕರಾರಿ ರಂಗದ ಪ್ರತಿಷ್ಠೆಯನ್ನು ಉಳಿಸಿ ಬೆಳೆಸುವಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಾರಾಯಣ ಕಾಮತ್, ಉಗ್ಗಪ್ಪ ಶೆಟ್ಟಿ, ರಾಮಚಂದ್ರ ಶೆಟ್ಟಿ, ಜಯರಾವು ಶೆಟ್ಟಿ, ಶ್ರೀಧರ್ ಉಪಸ್ಥಿತರಿದ್ದರು.