×
Ad

' ರಾಜಕಾರಣದ ದೃಷ್ಟಿಕೋನದಲ್ಲಿ ಧರ್ಮವನ್ನು ಅಳತೆ ಮಾಡಕೂಡದು '

Update: 2016-12-27 18:07 IST

ಪುತ್ತೂರು, ಡಿ.27 : ಪರಮೋಚ್ಛ ಅರ್ಥ ಹೊಂದಿರುವಂಥ ಧರ್ಮವನ್ನು ರಾಜಕಾರಣದ ಕನ್ನಡಿಯಲ್ಲಿ ನೋಡಿದರೆ ಅದರ ನಿಜಾರ್ಥ ಹೊಳೆಯುವುದಿಲ್ಲ. ರಾಜಕಾರಣದ ದೃಷ್ಟಿಕೋನದಲ್ಲಿ ಧರ್ಮವನ್ನು ಅಳತೆ ಮಾಡುವ ಕೆಲಸವನ್ನು ಮೊದಲು ನಿಲ್ಲಿಸಬೇಕು ಎಂದು ಆದಿ ಚುಂಚನಗಿರಿ ಮಠದ 72ನೇ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಹೇಳಿದರು.

ಅವರು ಪುತ್ತೂರು ತಾಲೂಕಿನಲ್ಲಿ ಐದು ದಿನಗಳ ನಡೆಯಲಿರುವ ಧರ್ಮ ಜಾಗೃತಿ- ಗ್ರಾಮ ಭೇಟಿ ಅಭಿಯಾನ ಅಂಗವಾಗಿ ಸೋಮವಾರ ರಾತ್ರಿ ಪುತ್ತೂರು ಒಕ್ಕಲಿಗ ಗೌಡ ಸಭಾಭವನದಲ್ಲಿ ನಡೆದ ಧರ್ಮ ಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಯೊಬ್ಬರು ತಾವು ಇರುವ ರಾಜಕೀಯ ಪಕ್ಷದ ದೃಷ್ಟಿಕೋನದ ಆಧಾರದಲ್ಲಿ ಧರ್ಮವನ್ನು ಅಳತೆ ಮಾಡುತ್ತಿದ್ದಾರೆ. ಇದು ಆ ಪಕ್ಷದ ಸಿದ್ಧಾಂತ ಆಗುತ್ತದೆಯೇ ಹೊರತು ನಿಜವಾದ ಧರ್ಮವಾಗಲು ಸಾಧ್ಯವಿಲ್ಲ. ನಿನ್ನೆ ಒಂದು ಪಕ್ಷದಲ್ಲಿದ್ದಾಗ ಆತನಿಗೆ ಧರ್ಮ ಒಂದು ರೀತಿ ಕಂಡರೆ, ಇಂದು ಬೇರೆ ಪಕ್ಷಕ್ಕೆ ಬಂದಾಗ ಧರ್ಮ ಇನ್ನೊಂದು ರೀತಿ ಕಾಣಲು ಶುರುವಾಗುತ್ತದೆ. ಹೇಗೆ ನಮಗೆ ತಾಯಿ ಎಲ್ಲ ಕಾಲಕ್ಕೂ ಒಬ್ಬಳೇ ಆಗಿರುತ್ತಾಳೆಯೋ ಧರ್ಮ ಕೂಡ ಸಾರ್ವಕಾಲಿಕ ಸತ್ಯ. ಅದು ಒಂದು ಮತವಲ್ಲ, ಅಥವಾ ಅದು ಒಂದು ಪಕ್ಷವಲ್ಲ ಎಂದು ಹೇಳಿದರು.

ಇಡೀ ಜಗತ್ತೇ ಬಟ್ಟೆ ತೊಟ್ಟುಕೊಳ್ಳಲು ಕಲಿಯುತ್ತಿದ್ದಾಗ ಭರತ ಖಂಡದಲ್ಲಿ ಜನ ಸ್ಮಾರ್ಟ್ ಸಿಟಿ ಕಟ್ಟಿ ಅತ್ಯುನ್ನತ ನಾಗರಿಕತೆ ಬೆಳೆಸಿಕೊಂಡಿದ್ದರು. ಜಗತ್ತಿನ ಅತ್ಯಂತ ಪ್ರಾಚೀನ ನಾಗರಿಕತೆ ಹುಟ್ಟಿದ್ದೇ ನಮ್ಮ, ದೇಶದಲ್ಲಿ ಎಂದು ಹೇಳಿದ ಅವರು, ಹೇಗೆ ಆಮ್ಲಜನಕವನ್ನು ನಾವು ಉಳಿಸಿದರೆ ಅದು ನಮ್ಮನ್ನು ಉಳಿಸುತ್ತದೋ ಅದೇ ರೀತಿ ಧರ್ಮದ ಮೌಲ್ಯಗಳನ್ನು ನಾವು ಉಳಿಸಿಕೊಂಡರೆ ಅದು ನಮ್ಮನ್ನು ಉಳಿಸುತ್ತದೆ ಎಂದರು.

ಆದಿ ಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸಭಾಧ್ಯಕ್ಷತೆ ವಹಿಸಿದ್ದರು.

ಭೈರವೈಕ್ಯ ಶ್ರೀ ಬಾಲಗಂಗಾಧರ ನಾಥ ಮಹಾಸ್ವಾಮಿಗಳು ಆರಂಭಿಸಿದ ಅಭಿಯಾನವನ್ನು ನಿರ್ಮಲಾನಂದ ನಾಥ ಸ್ವಾಮಿಗಳು ಮುಂದುವರಿಸುತ್ತಿದ್ದಾರೆ. ಇಂದು ಧರ್ಮಜಾಗೃತಿ ಸಮಾವೇಶದಲ್ಲಿ ಎಲ್ಲ ಜಾತಿ ಸಮುದಾಯಗಳ ಮುಖಂಡರು ಆಸೀನರಾಗಿದ್ದಾರೆ. ಈ ಅಪೂರ್ವ ಸಾಮರಸ್ಯದ ಮೂಲಕ ಪುತ್ತೂರಿನಲ್ಲಿ ಒಂದು ಧರ್ಮಕ್ರಾಂತಿಯೇಧ ಉಂಟಾಗಿದೆ ಎಂದವರು ನುಡಿದರು.


ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ದ್ರಾವಿಡ ಬ್ರಾಹ್ಮಣ ಸಂಘದ ಎನ್.ಕೆ. ಜಗನ್ನಿವಾಸ ರಾವ್, ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲ್, ಬಂಟರ ಸಂಘದ ಅಧ್ಯಕ್ಷ ದಯಾನಂದ ರೈ ಮನವಳಿಕೆ, ಜಿಎಎಸ್‌ಬಿ ಸಮಾಜದ ಮುಖಂಡ ಅಚ್ಯುತ ಪ್ರಭು, ವಿಶ್ವಕರ್ಮ ಸಮಾಜದ ಜಗದೀಶ್ ಎಸ್.ಎನ್., ಮಡಿವಾಳ ಸಂಘದ ಪಿ.ಎಸ್. ಸುಭಾಶ್ಚಂದ್ರ, ಸವಿತಾ ಸಮಾಜದ ಕೇಶವ ಭಂಡಾರಿ, ಕುಲಾಲರ ಸಂಘದ ದಿನೇಶ್ ಪಿ.ವಿ., ಶಿವಳ್ಳಿ ಸಂಪದದ ರಂಗನಾಥ ರಾವ್, ರಾಮಕ್ಷತ್ರಿಯ ಸಂಘದ ಮೋಹನ ರಾವ್, ಹವ್ಯಕ ಸಂಘದ ವಿದ್ಯಾ ಗೌರಿ, ಮರಾಟಿ ಸಂಘದ ಕೃಷ್ಣ ನಾಯ್ಕ, ಮುಗೇರ ಸಂಘದ ಡಾ.ಬಿ. ರಘು, ನಲಿಕೆಯವರ ಸಮಾಜ ಸೇವಾ ಸಂಘದ ನಾರಾಯಣ ಸೇಡಿಯಾಪು, ಶಾರದಾಂಬಾ ಸಮಾಜ ಸೇವಾ ಸಂಘದ ಕೇಶವ ನಾಯ್ಕ, ಆದಿ ದ್ರಾವಿಡ ಸಮಾಜ ಸೇವಾ ಸಂಘದ ಸುಂದರ ಸಿದ್ಯಾಳ ವಿಶೇಷ ಅತಿಥಿಗಳಾಗಿದ್ದರು.

 ಸಂಜೀವ ಮಠಂದೂರು ಸ್ವಾಗತಿಸಿದರು.

ಚಿದಾನಂದ ಬೈಲಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಒಕ್ಕಲಿಗ ಸಂಘದ ಪ್ರಮುಖರಾದ ಕೆಮ್ಮಾರ ಗಂಗಾಧರ ಗೌಡ, ರವಿ ಮುಂಗ್ಲಿಮನೆ, ಪುರುಷೋತ್ತಮ ಗೌಡ ಮುಂಗ್ಲಿಮನೆ, ಗೌರಿ ಬನ್ನೂರು ಉಪಸ್ಥಿತರಿದ್ದರು.

ಕು. ಸಿಂಚನಾ ಮತ್ತು ಕು. ಪೂರ್ಣಿಮಾ ಸ್ವಾಗತಿಸಿದರು.

ದಾಮೋದರ ನಂದಿಲ ಮತ್ತು ಪರಮೇಶ್ವರ ಗೌಡ ಕಾರ್ಯಕ್ರಮ ನಿರ್ವಹಿಸಿದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News