ಪೆರಾಜೆಯ ಕಲ್ಚರ್ಪೆಯಲ್ಲಿ ಭಾರೀ ಕಳ್ಳತನ : 40 ಪವನ್ ಚಿನ್ನಾಭರಣ ದೋಚಿ ಪರಾರಿ
ಸುಳ್ಯ, ಡಿ.27 : ಪೆರಾಜೆ ಸಮೀಪ ಕಲ್ಚರ್ಪೆಯ ಅಬ್ದುಲ್ ರಹೀಂ ಎಂಬವರ ಮನೆಯಲ್ಲಿ ಸೋಮವಾರ ರಾತ್ರಿ ಕಳ್ಳತನ ನಡೆದಿದ್ದು, 40 ಪವನ್ ಚಿನ್ನಾಭರಣ ಹಾಗೂ 9 ಸಾವಿರ ರೂಪಾಯಿ ನಗದು ದೋಚಿ ಕಳ್ಳರು ಪರಾರಿಯಾಗಿದ್ದಾರೆ.
ಕೃಷಿಕರಾಗಿರುವ ಅಬ್ದುಲ್ ರಹೀಂ ಅವರದು ತಾಯಿ ಪತ್ನಿ ಹಾಗೂ ಇಬ್ಬರು ಮಕ್ಕಳ ಕುಟುಂಬ. ರಾತ್ರಿ ಏಳೂವರೆಗೆ ಪೆರಾಜೆ ಮಸೀದಿಯಲ್ಲಿ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ತೆರಳಿದ್ದ ಅಬ್ದುಲ್ ರಹೀಂ ರಾತ್ರಿ 11 ಗಂಟೆಗೆ ಮನೆಗೆ ವಾಪಾಸ್ ಆದಾಗ ಘಟನೆ ಬೆಳಕಿಗೆ ಬಂದಿದೆ.
ಮನೆಯ ಹಿಂದಿನ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಒಳಗಿನ ಎರಡು ಬಾಗಿಲನ್ನೂ ಮುರಿದಿದ್ದಾರೆ. ಹಾಸಿಗೆಯ ತಲೆದಿಂಬಿನ ಅಡಿಯಲ್ಲಿರುವ ಕಪಾಟಿನ ಬೀಗದ ಕೈ ತೆಗೆದು ಒಂದು ಕಪಾಟಿನಲ್ಲಿದ್ದ 40 ಪವನ್ ಚಿನ್ನಾಭರಣ, ಇನ್ನೊಂದು ಕಪಾಟಿನಲ್ಲಿದ್ದ 8 ಸಾವಿರ ನಗದು ಹಾಗೂ ಮತ್ತೊಂದು ಕಪಾಟಿನಿಂದ 1 ಸಾವಿರ ನಗದು ದೋಚಿದ್ದಾರೆ.
ತಕ್ಷಣ ಸುಳ್ಯ ಪೊಲೀಸರಿಗೆ ವಿಷಯ ತಿಳಿಸಿದ್ದು, ಅರ್ಧ ಗಂಟೆಯಲ್ಲಿಯೇ ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣಯ್ಯ, ಎಸ್‌ಐ ಚಂದ್ರಶೇಖರ್ ಹಾಗೂ ಅವರ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತು.
ರಾತ್ರಿ 3 ಗಂಟೆ ವೇಳೆಗೆ ಪುತ್ತೂರಿನಿಂದ ಬೆರಳಚ್ಚು ತಜ್ಷರು ಹಾಗೂ ಶ್ವಾನ ದಳವು ಸ್ಥಳಕ್ಕೆ ಆಗಮಿಸಿತು.
ತನಿಖೆ ಮುಂದುವರಿದಿದೆ.