×
Ad

ಬೆಳ್ತಂಗಡಿ : ಲಂಚದ ಬಿಸಿಗೆ ಕಾವೇರಿದ ತಾಪಂ ಸಾಮಾನ್ಯ ಸಭೆ

Update: 2016-12-27 18:55 IST

 ಬೆಳ್ತಂಗಡಿ , ಡಿ.27 : ತಾಲೂಕಿನ ಹೊಸ ಗ್ರಾ.ಪಂ.ಕಟ್ಟಡಗಳಿಗೆ ಜಮೀನು ಕಾದಿರಿಸುವ ಕುರಿತು, ಸರ್ವೇ ಇಲಾಖೆಯಲ್ಲಿನ ಲಂಚದ ಬಿಸಿ ತಾ.ಪಂ. ಅಧ್ಯಕ್ಷರಿಗೆ ತಟ್ಟಿರುವುದರ ಬಗ್ಗೆ ಮಂಗಳವಾರ ಬೆಳ್ತಂಗಡಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ತೀವ್ರವಾದ ಚರ್ಚೆ ನಡೆಯಿತು.

ತಾ.ಪಂ.ಅಧ್ಯಕ್ಷೆ ದಿವ್ಯಜ್ಯೋತಿ ಅವರ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ಸಭೆ ನಡೆಯಿತು.

 ನಾವೂರು ಗ್ರಾಮ ಪಂಚಾಯಿತಿ ಕಟ್ಟಡಕ್ಕೆ 0.18 ಸೆಂಟ್ಸ್ ಜಾಗವನ್ನು ಕಾದಿರಿಸುವ ಸಂಬಂಧ ಕಾರ್ಯನಿರ್ವಹಣಾಧಿಕಾರಿಯವರ ಮುತುವರ್ಜಿಯಲ್ಲಿ ತಹಸೀಲ್ದಾರರಿಗೆ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಈ ಜಾಗ ಪರಂಬೋಕು ಎಂದು ಆಯುಕ್ತರು ನಿರಾಕರಿಸಿದ್ದರು. ಜಾಗವನ್ನು ರಸ್ತೆಯಿಂದ 15 ಮೀ.ದೂರದಲ್ಲಿ ಜಾಗ ಕಾದಿರಿಸಲಾಗುವುದಿಲ್ಲ ಎಂಬುದು ಸರಿ. ಆದರೆ ಈ ಜಾಗ ರಸ್ತೆಯಿಂದ ಸುಮಾರು 25 ಮೀ. ದೂರದಲ್ಲಿದೆ. ಆದಾಗ್ಯೂ ಅನುಮತಿ ನೀಡದಿರುವ ಕುರಿತು ಕಾರ್ಯನಿರ್ವಹಣಾಧಿಕಾರಿ ಸಿ. ಆರ್. ನರೇಂದ್ರ ಮತ್ತು ತಹಸೀಲ್ದಾರ್ ತಿಪ್ಪೆ ಸ್ವಾಮಿ ನಡುವೆ ವಾದ, ವಿವಾದ ನಡೆಯಿತು. ಈ ಕುರಿತು ಯಾವುದೇ ನಿರ್ಣಯವಾಗಲಿಲ್ಲ.

 ಸರ್ವೇ ನಡೆದು 6 ತಿಂಗಳಾದರೂ ವರದಿ ನೀಡುವುದಿಲ್ಲ. ಹಣ ಕೊಟ್ಟವರಿಗೆ ಕೂಡಲೇ ದೊರೆಯುತ್ತದೆ ಯಾಕೆ ಹೀಗೆ ಎಂದು ಅಧ್ಯಕ್ಷರು ತಹಸೀಲ್ದಾರರನ್ನು ಪ್ರಶ್ನಿಸಿದಾಗ ಹಣ ಕೊಡಬೇಡಿ, ನಿಮಗೆ ಯಾರು ಕೊಡಲು ಹೇಳಿದ್ದು. ಲಂಚ ಕೇಳುತ್ತಾರೆಂದಾದ ಮೇಲೆ ಒಂದೋ ನನಗೆ ಅಥವಾ ಎಸಿಬಿಗೆ ದೂರು ನೀಡಿ ಎಂದುತ್ತರಿಸಿದರು.

ಕಳೆದ 6 ತಿಂಗಳಿನಿಂದ ತಾ.ಪಂ. ಸಭೆಯಲ್ಲಾದ ನಿರ್ಣಯಗಳು ಒಂದೂ ಕಾರ್ಯರೂಪಕ್ಕೆ ಬರುತ್ತಿಲ್ಲ. ತಾ.ಪಂ. ಮೂಲಕ ಅಧ್ಯಕ್ಷರ, ಸದಸ್ಯರ ಸಾಧನೆ ಏನು ಎಂಬುದನ್ನು ಜನರಿಗೆ ಏನು ತಿಳಿಸುವುದು ? ಹೀಗಿರುವಾಗ ತಾ.ಪಂ. ಬೇಕೆ ಎಂದು ಸದಸ್ಯರಾದ ವಿಜಯಯ ಗೌಡ, ಸುಧಾಕರ್, ಶಶಿಧರ್, ಧನಲಕ್ಷ್ಮೀ ಖೇದದಿಂದ ಪ್ರಶ್ನಿಸಿದರು.

ಜೂನ್ 14ರ ಸಭೆಯಲ್ಲಿ ಪಣಕಜೆ ಕೊಲ್ಪದಬೈಲು ಎಂಬಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲುಗಡೆ ಬಗ್ಗೆ ನಿರ್ಣಯವಾಗಿದ್ದು ಇದು ಅನುಷ್ಠಾನಗೊಂಡಿಲ್ಲ, ಅಜಿ ಸೀಮೆಯ ಕೆರೆಗಳನ್ನು ಒತ್ತುವರಿ ಮಾಡಿದ ಕುರಿತು ನಿರ್ಣಯವಾದರೂ ಕ್ರಮಕೈಗೊಂಡಿಲ್ಲ, ತಾಲೂಕಿನ ಡಿಸಿ ಮನ್ನ ಒತ್ತುವರಿ ತೆರವಿನ ಬಗ್ಗೆಯೂ ವರ್ಷಗಳಿಂದ ನಿರ್ಣಯವಾದರೂ ಕ್ರಮಕೈಗೊಂಡಿಲ್ಲ ಎಂದು ಸದಸ್ಯರು ಒಂದೊಂದು ಉದಾಹರಣೆ ನೀಡಿದಾಗ ಸಭೆ ಗೊಂದಲಮಯವಾಯಿತು.

ಇದಕ್ಕೆ ಕಂದಾಯ ಅಧಿಕಾರಿಯೊಬ್ಬರು ಇದಕ್ಕೆ ಉತ್ತರಿಸಲು ಸಿದ್ಧರಾದಾಗ ನಿಮಗೆ ಉತ್ತರ ಕೊಡಲು ಸಾಧ್ಯವಾದರೆ ಮಾತ್ರ ಉತ್ತರಿಸಿ, ಇಲ್ಲವಾದಲ್ಲಿ ತಹಶೀಲ್ದಾರ್ ಮತ್ತು ಸಹಾಯಕ ಕಮೀಷನರ್‌ರವರನ್ನು ಸಭೆಗೆ ಕರೆಸಿ ಎಂದು ಸದಸ್ಯರು ಪಟ್ಟು ಹಿಡಿದರು. ನಂತರ ತಹಶೀಲ್ದಾರ್ ಸಭೆಗೆ ಬಂದು ಡಿಸಿ ಮನ್ನ ಭುಮಿಯ ಎಲ್ಲಾ ವಿವರಗಳು ಸಂಗ್ರಹವಾಗಿದ್ದು, ಕಂಪ್ಯೂಟರೀಕರಣಗೊಳಿಸಲಾಗುತ್ತಿದೆ. 10 ದಿವಸದಲ್ಲಿ ಎಲ್ಲಾ ಮಾಹಿತಿ ನೀಡುವುದಾಗಿ ಭರವಸೆ ನೀಡಿದ ನಂತರ ಸಭೆ ಮುಂದುವರಿಯಿತು.

 ಎಂಡೋ ಸಲ್ಫಾನ್ ಪೀಡಿತರಿಗೆ ಸರಿಯಾದ ರೀತಿಯಲ್ಲಿ ಮಾಸಿಕ ವೇತನ ಸಿಗದಿರುವ ಬಗ್ಗೆ ಜೋಯೆಲ್ ಮೆಂಡೋನ್ಸಾ ತಿಳಿಸಿದರು. ಬಿಪಿಎಲ್ ನವರಿಗೆ ಕೇಂದ್ರ ಸರಕಾರದ ಗ್ಯಾಸ್ ಸಂಪರ್ಕ ಯೋಜನೆಯ ಬಗ್ಗೆ ಗ್ಯಾಸ್ ವಿತರಣಾ ಸಂಸ್ಥೆಯ ಪ್ರಬಂಧಕರು ಮಾಹಿತಿ ನೀಡಿದರು. ಡಿ.ಸಿ ಮನ್ನಾ ಜಾಗದ ಬಗ್ಗೆ ಗ್ರಾಮವಾರು ಪಟ್ಟಿ ತಯಾರಿಸಿ ಹತ್ತು ದಿನಗಳವರೆಗೆ ಎಲ್ಲರಿಗೂ ನೀಡಲಿದ್ದೇನೆ. 94 ಸಿ ಅರ್ಜಿಗಳ ಬಗ್ಗೆ ವಾರಕ್ಕೆ 50 ಅರ್ಜಿಗಳನ್ನು ವಿಲೇವಾರಿ ಮಾಡಲು ಟಾರ್ಗೇಟ್‌ನ್ನು ಜಿಲ್ಲಾಧಿಕಾರಿಯವರು ನೀಡಿದ್ದಾರೆ. ಅದನ್ನು ನಾನು ಮಾಡುತ್ತೇನೆ. ಯಾರದೇ ಅರ್ಜಿಗಳನ್ನು ತಿರಸ್ಕರಿಸುವುದಿಲ್ಲ. 2014ರಲ್ಲಿ ಬಂದ ಅರ್ಜಿಗಳಿಗೆ ಮೊದಲ ಆದ್ಯತೆ. ಸಾರ್ವಜನಿಕ ಸಂಸ್ಥೆಗಳ ಜಾಗಕ್ಕೆ ಗಡಿ ಗುರುತು ಮಾಡಿದ ಮೇಲೆ ಆಯಾ ಸಂಸ್ಥೆಯವರು ಕೂಡಲೇ ಬೇಲಿ ಹಾಕಿಕೊಳ್ಳಬೇಕು. ಯಾರಾದರೂ ಅತಿಕ್ರಮಿಸಿದರೆ ಪೋಲಿಸರಿಗೆ ದೂರು ನೀಡಬೇಕು. ತೆರವುಗೊಳಿಸಲು ಕಂದಾಯ ಇಲಾಖೆ ಸಹಕಾರ ನೀಡಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು.

ವೇಣೂರು ಅಜಿಲ ಕೆರೆಯ ಬಗ್ಗೆ, ಅಕ್ರಮ ಕೊಳವೆ ಬಾವಿಗಳ ಬಗ್ಗೆ, ಶಿಕ್ಷಕರ ನಿಯೋಜನೆಯ ಕುರಿತು ಚರ್ಚೆ ನಡೆಯಿತು.

 ಸಭೆಯಲ್ಲಿ ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಸುವರ್ಣ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಜಿ.ಪಂ. ಸದಸ್ಯರಾದ ಕೊರಗಪ್ಪ ನಾಯ್ಕ, ಶೇಖರ ಕುಕ್ಕೇಡಿ, ಸೌಮ್ಯಲತಾ ಮತ್ತು ಇಲಾಖಾಧಿಕಾರಿಗಳು ಇದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News