×
Ad

ತುಂಬೆ ನೂತನ ಡ್ಯಾಂ ನೀರಿನ ಮಟ್ಟ ಕಾಯ್ದುಕೊಳ್ಳುವಲ್ಲಿ ಜಿಲ್ಲಾಡಳಿತ ವಿಫಲ : ಆರೋಪ

Update: 2016-12-27 19:02 IST

ಬಂಟ್ವಾಳ, ಡಿ. 27: ತುಂಬೆಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ ನೂತನ ಡ್ಯಾಂ ನಲ್ಲಿ ಡಿ.19ರಂದು ಗಂಗಾಪೂಜೆ ನೆರವೇರಿಸಿ 5 ವಿೂಟರ್ ನೀರು ಸಂಗ್ರಹಿಸಲಾಗಿದೆ ಎಂದು ಅಧಿಕೃತವಾಗಿ ಪೋಷಿಸಲಾಗಿದ್ದು , ನಂತರ ಪಾಣೆಮಂಗಳೂರು - ಬಂಟ್ವಾಳ ಸಂಪರ್ಕ ರಸ್ತೆ ಬಳಿ ಸ್ಥಾಪಿಸಲಾದ ಜಲಮಟ್ಟದಲ್ಲಿ ಅಳತೆ ಸ್ಥಾವರ ಕಂಚಿಗಾರ ಕೂಟ್ಲು- ಚಿಕ್ಕಯ ಮಠ ಪ್ರದೇಶದಲ್ಲಿರುವ ರೈತರು ಕಳೆದ 3 ದಿನಗಳಲ್ಲಿ ನದಿ ನೀರು ಮಟ್ಟ 5.20 ಮೀಟರ್‌ಗೆ ಏರಿಕೆಯಾಗಿರುವುದನ್ನು ಪ್ರತ್ಯಕ್ಷವಾಗಿ ಕಂಡುಕೊಳ್ಳಲಾಗಿದೆ.  ಇದೀಗ 5 ಮೀಟರ್‌ಗೆ ನೀರಿನ ಮಟ್ಟ ಕಾಯ್ದುಕೊಳ್ಳುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು , ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಪ್ರಜಾಸತಾತ್ಮಕ ವಿರೋಧಿ ನೀತಿಯನ್ನು ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷರು ಎಂ.ಸುಬ್ರಹ್ಮಣ್ಯ ಭಟ್ ಖಂಡಿಸಿದ್ದಾರೆ.

ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಸಂಬಂಧಿತರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿರುವ ಅವರು, ಪ್ರಸ್ತುತ ಮಾನವ ನಿಯಂತ್ರಣ ವ್ಯವಸ್ಥೆ ಜಾರಿಯಲ್ಲಿದ್ದು ನೀರಿನ ಮಟ್ಟ ಕಾಯ್ದುಕೊಳ್ಳಲು ಕಂಪ್ಯೂಟರೀಕೃತ ವ್ಯವಸ್ಥೆ ಅಳವಡಿಸಿದರೆ ಈ ಸಮಸ್ಯೆ ಪರಿಹಾರವಾಗಲಿದೆ. ಈ ನಿಟ್ಟಿನಲ್ಲಿ ಸರಕಾರ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

 ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ವ್ಯವಸ್ಥಿತವಾಗಿ ಸಜೀಪಮುನ್ನೂರು ಗ್ರಾಮ ಅದ್ರುಕ್ಕು ಶಿವರಾಮ ಬಾಸ್ರೀತ್ತಾಯರ ಜಮೀನು ಮಲಾಯಿಬೆಟ್ಟಿನ ರಫೀಕ್ ಬಶೀರ್ ಅವರ ಭತ್ತದ ಕೃಷಿ ಮುಳುಗಡೆಯಾಗಿದ್ದು, ಬಿ.ಮೂಡ ಗ್ರಾಮದ ತಿಮ್ಮಪ್ಪ ರೈ ಜಮೀನು ಶಾಶ್ವತ ಮುಳುಗಡೆಯಾಗಿದೆ. ಅವರ ಉಳಿಕೆ ಜಮೀನಿನ ಭತ್ತದ ಕೃಷಿಗೆ ತೊಂದರೆಯಾಗಿದ್ದು ಇವರೆಲ್ಲಾ ಮ.ನ.ಪಾ ಪ್ರಕಟಿಸಿದ ಸಂತ್ರಸ್ತ ರೈತರ ಪಟ್ಟಿಯಲ್ಲಿರದ ರೈತರಾಗಿದ್ದು ಇವರಿಗೆ ಸಕಾಲದಲ್ಲಿ ಪರಿಹಾರ ಒದಗಿಸುವಂತೆ ಅವರು ಆಗ್ರಹಿಸಿದ್ದಾರೆ.

 ಕೇಂದ್ರ ಜಲ ಆಯೋಗ ನಿರ್ದೇಶನದಂತೆ ಸರಿಯಾದ ರೀತಿಯಲ್ಲಿ ಸರ್ವೆ ಆಗಿದ್ದರೆ 180 ಎಕ್ರೆಗೂ ಅಧಿಕ ವರತೆ ಪ್ರದೇಶಕ್ಕೆ ನ್ಯಾಯೋಚಿತ ಪರಿಹಾರ ನೀಡಬೇಕಾಗಿರುತ್ತದೆ. ಮ.ನ.ಪಾ ಈ ನಿಟ್ಟಿನಲ್ಲಿ ರೈತರಿಗೆ ವಂಚನೆ ಮಾಡಿದ್ದು ಎಲ್ಲಾ ಸಂತ್ರಸ್ತ ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಸರಕಾರವನ್ನು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News