ಅಲ್ಪಸಂಖ್ಯಾತರ ವ್ಯವಹಾರ ಸಚಿವಾಲಯದಿಂದ ಶಿಕ್ಷಣ-ಉದ್ಯೋಗ ನೀಡಿಕೆಗೆ ಆದ್ಯತೆ: ನಕ್ವಿ
ಹೊಸದಿಲ್ಲಿ, ಡಿ.27: ವಿದ್ಯಾಭ್ಯಾಸ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವ ಮೂಲಕ ಅಲ್ಪಸಂಖ್ಯಾತರ ಸಬಲೀಕರಣವು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರ ಸಚಿವಾಲಯದ 2017ರ ಆದ್ಯತಾ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲಿದೆ. ಕಾಗದ ಮತ್ತು ಕಂಪ್ಯೂಟರ್‌ಗಳಲ್ಲಿದ್ದ ಸಾಮಾಜಿಕ-ಆರ್ಥಿಕ ಕಾರ್ಯಕ್ರಮಗಳನ್ನು ಹೊರ ತೆಗೆದು ವಾಸ್ತವಕ್ಕಿಳಿಸಿರುವುದು ಅದರ ಈ ವರ್ಷದ ಅತಿದೊಡ್ಡ ಸಾಧನೆಯಾಗಿದೆಯೆಂದು ಸಚಿವಾಲಯ ಹೇಳಿದೆ.
2016ರಲ್ಲಿ ನಜ್ಮಾ ಹೆಫ್ತುಲ್ಲಾ(ಮಣಿಪುರದ ಹಾಲಿ ರಾಜ್ಯಪಾಲೆ) ಅಲ್ಪಸಂಖ್ಯಾತರ ವ್ಯವಹಾರ ಖಾತೆಗೆ ರಾಜೀನಾಮೆ ನೀಡಿದ ಬಳಿಕ, ಅದರ ಹೊಣೆ ಮುಖ್ತಾರ್ ಅಬ್ಬಾಸ್ ನಕ್ವಿಯವರಿಗೆ ಬಂತು. ಅಕ್ಟೋಬರ್ 1ರಿಂದ, ಹಜ್ ಯಾತ್ರೆಯ ಉಸ್ತುವಾರಿಯೂ ವಿದೇಶಾಂಗ ವ್ಯವಹಾರ ಸಚಿವಾಲಯದಿಂದ ಅಲ್ಪಸಂಖ್ಯಾತರ ವ್ಯವಹಾರ ಸಚಿವಾಲಯಕ್ಕೆ ವರ್ಗಾವಣೆಯಾಗಿದೆ.
ಮುಖ್ಯವಾಗಿ ದಾದ್ರಿ ಥಳಿಸಿ ಕೊಲೆ ಪ್ರಕರಣದ ಬಳಿಕ-ಅಲ್ಪಸಂಖ್ಯಾತರ ವಿಚಾರದಲ್ಲಿ ಆಗಾಗ ವಿಪಕ್ಷಗಳ ವಾಗ್ದಾಳಿಗೆ ಗುರಿಯಾದ ಸರಕಾರವು, ಅಲ್ಪಸಂಖ್ಯಾತರ ಬಾಹುಳ್ಯದ ಪ್ರದೇಶಗಳಲ್ಲಿ ‘ಪ್ರಗತಿ ಪಂಚಾಯತ್’ ನಂತಹ ವ್ಯಾಪಕವಾಗಿ ತಲುಪುವ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಪ್ರತಿಪಕ್ಷಗಳ ಪ್ರತಿಪಾದನೆಯ ವಿರುದ್ಧ ಸಡ್ಡುಹೊಡೆದಿದೆ.
ಸಾಮಾಜಿಕ-ಆರ್ಥಿಕ ಕಾರ್ಯಕ್ರಮಗಳನ್ನು ಕಾಗದ-ಕಂಪ್ಯೂಟರ್‌ಗಳಿಂದ ಹೊರತಂದು ವಾಸ್ತವವಾಗಿಸಿರುವುದು ತಮ್ಮ ಸರಕಾರದ ಮಹತ್ವಾಧನೆಯಾಗಿದೆ. ಪ್ರಗತಿ ಪಂಚಾಯತ್‌ಗೆ ಚಾಲನೆ ನೀಡಲಾಗಿದೆ. ಹುನಾರ್ ಹಾಟ್(ಕೌಶಲ ಹಾಟ್) ಇತ್ಯಾದಿ ಕಾರ್ಯಕ್ರಮಗಳ ಮೂಲಕ ಅಲ್ಪಸಂಖ್ಯಾತ ಸಮುದಾಯಗಳ ಕುಶಲಕರ್ಮಿಗಳಿಗೆ ಅಂತಾರಾಷ್ಟ್ರೀಯ ವೇದಿಕೆಯನ್ನು ತಾವು ಒದಗಿಸಿದ್ದೇವೆಂದು ಅಲ್ಪಸಂಖ್ಯಾತರ ವ್ಯವಹಾರಗಳ ಸಹಾಯಕ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಹೇಳಿದ್ದಾರೆ.
ಹಿಂದಿನ ಯುಪಿಎ ಸರಕಾರ ಹಾಗೂ ಈಗಿನ ಎನ್‌ಡಿಎ ಸರಕಾರದ ನಡುವಿನ ವ್ಯತ್ಯಾಸದ ಮೇಲೆ ಬೆಳಕು ಚೆಲ್ಲಿರುವ ಅವರು, ಕೇಂದ್ರ ಸರಕಾರದಲ್ಲಿ ಎರಡೂವರೆ ವರ್ಷಗಳ ಹಿಂದೆ ಮುಸ್ಲಿಮರ ನೇಮಕಾತಿ ಪ್ರಮಾಣ ಶೇ.6.9 ಇದ್ದುದು ಈಗ ಶೇ.9ಕ್ಕೇರಿದೆ ಎಂದಿದ್ದಾರೆ.
ಇಂದಿನ ವರೆಗೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಒಟ್ಟು ರೂ.6,715 ಕೋಟಿ ವಿದ್ಯಾರ್ಥಿ ವೇತನ ಒದಗಿಸಲಾಗಿದೆಯೆಂದು ನಕ್ವಿ ತಿಳಿಸಿದ್ದಾರೆ.