10 ಲ.ರೂ.ಗೂ ಅಧಿಕ ಆದಾಯವಿರುವವರ ಸಂಖ್ಯೆ 24 ಲಕ್ಷ, ಆದರೆ ವಾರ್ಷಿಕ ಖರೀದಿಯಾಗುತ್ತಿರುವ ಕಾರುಗಳು 25 ಲಕ್ಷ!
ಹೊಸದಿಲ್ಲಿ,ಡಿ.27: ಭಾರತದಲ್ಲಿ 10 ಲ.ರೂ.ಗೂ ಅಧಿಕ ವಾರ್ಷಿಕ ಆದಾಯ ಘೋಷಿಸಿರುವ ಜನರ ಸಂಖ್ಯೆ 24.4 ಲಕ್ಷ ಮಾತ್ರ. ಆದರೆ ಕಳೆದ ಐದು ವರ್ಷಗಳಿಂದ 35,000 ಐಷಾರಾಮಿ ಕಾರುಗಳು ಸೇರಿದಂತೆ ಪ್ರತಿ ವರ್ಷ ಈ ದೇಶದಲ್ಲಿ 25 ಲಕ್ಷ ಹೊಸ ಕಾರುಗಳ ಖರೀದಿಯಾಗುತ್ತಿದೆ.
125 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ 2014-15ನೇ ತೆರಿಗೆ ವರ್ಷದಲ್ಲಿ ಕೇವಲ 3.65 ಕೋ.ಜನರು ತಮ್ಮ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಿದ್ದಾರೆ. ಭಾರೀಸಂಖ್ಯೆಯ ಜನರು ತೆರಿಗೆ ಜಾಲದಿಂದ ಹೊರಗೆ ಉಳಿದುಕೊಂಡಿದ್ದಾರೆ ಎಂದು ಹಿರಿಯ ಆದಾಯ ತೆರಿಗೆ ಅಧಿಕಾರಿಯೋರ್ವರು ತಿಳಿಸಿದರು.
ಈ 3.65 ಕೋ.ಜನರ ಪೈಕಿ ಕೇವಲ 5.5 ಲ.ಜನರು ಐದು ಲಕ್ಷ ರೂ.ಗೂ ಹೆಚ್ಚಿನ ತೆರಿಗೆಯನ್ನು ಪಾವತಿಸಿದ್ದಾರೆ ಮತ್ತು ಇದು ದೇಶದ ಒಟ್ಟು ತೆರಿಗೆ ಸಂಗ್ರಹದ ಶೇ.57ರಷ್ಟಾಗಿದೆ. ಅಂದರೆ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಿರುವ 3.65 ಕೋ.ಜನರ ಪೈಕಿ ಕೇವಲ 1.5ರಷ್ಟು ಜನರು ಶೇ.57ರಷ್ಟು ತೆರಿಗೆ ಪಾವತಿಸಿದ್ದಾರೆ ಎಂದರು.
ತೆರಿಗೆ ರಿಟರ್ನ್‌ಗಳನ್ನು ಕಾರುಗಳ ಮಾರಾಟಕ್ಕೆ ಹೋಲಿಸಿದಾಗ ಅಚ್ಚರಿಯ ಅಂಕಿಅಂಶಗಳು ಬೆಳಕಿಗೆ ಬಂದಿವೆ. ಕಳೆದ ಐದು ವರ್ಷಗಳಲ್ಲಿ ಸರಾಸರಿ ಸುಮಾರು 25 ಲ.ಕಾರುಗಳು ಪ್ರತಿ ವರ್ಷ ಮಾರಾಟವಾಗಿವೆ. ಹಿಂದಿನ ಮೂರು ವರ್ಷಗಳಲ್ಲಿಯೇ 25.03 ಲ., 26 ಲ. ಮತ್ತು 27 ಲ.ಕಾರುಗಳು ಮಾರಾಟವಾಗಿವೆ. ಇದು ಕಾರುಗಳನ್ನು ಖರೀದಿಸುವಷ್ಟು ಆದಾಯ ಹೊಂದಿರುವ ಭಾರೀಸಂಖ್ಯೆಯ ಜನರು ತೆರಿಗೆ ಬಲೆಯಿಂದ ಹೊರಗಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ ಎಂದು ಹೇಳಿದ ಅಧಿಕಾರಿ, ಕಾರೊಂದು ಸಾಮಾನ್ಯವಾಗಿ ಏಳು ವರ್ಷಗಳ ಜೀವಿತಾವಧಿ ಹೊಂದಿರುತ್ತದೆ ಮತ್ತು ಜನಸಾಮಾನ್ಯರು ಐದು ವರ್ಷಕ್ಕೆ ಮೊದಲು ಎರಡನೇ ಕಾರು ಖರೀದಿಸುವುದಿಲ್ಲ ಎಂದರು.
ಕೇವಲ 48,417 ಜನರು ವರ್ಷಕ್ಕೆ ಒಂದು ಕೋ.ರೂ.ಗೂ ಅಧಿಕ ಆದಾಯವನ್ನು ಘೋಷಿಸುತ್ತಿದ್ದಾರೆ. ಆದರೂ ಬಿಎಂಡಬ್ಲೂ,ಜಾಗ್ವಾರ್,ಆಡಿ,ಮರ್ಸಿಡಿಸ್‌ನಂತಹ ಸುಮಾರು 35,000 ಐಷಾರಾಮಿ ಕಾರುಗಳು ಪ್ರತಿವರ್ಷ ಮಾರಾಟವಾಗುತ್ತಿವೆ.
ರಿಟರ್ನ್‌ಗಳನ್ನು ಸಲ್ಲಿಸಿರುವವರ ಪೈಕಿ 5.32 ಲ.ಜನರು ವಾರ್ಷಿಕ 2 ಲ.ರೂ.ಗೂ ಕಡಿಮೆ ಆದಾಯವನ್ನು ಹೊಂದಿದ್ದು, ಅವರು ಆದಾಯ ತೆರಿಗೆ ವ್ಯಾಪ್ತಿಯಲ್ಲಿಲ್ಲ ಎಂದು ಅಧಿಕಾರಿ ತಿಳಿಸಿದರು.