ಮದುವೆ ಹಾಲ್‌ಗಳಲ್ಲಿ ಮಕ್ಕಳ ಚಿನ್ನಾಭರಣ ಎಗರಿಸುತ್ತಿದ್ದ ಮಹಿಳೆ
ಕೊಣಾಜೆ, ಡಿ.27 : ಯಾರಿಗೂ ತಿಳಿಯದಂತೆ ಮದುವೆ ಸಭಾಂಗಣಗಳಲ್ಲಿ ಮಕ್ಕಳ ಚಿನ್ನಾಭರಣಗಳನ್ನು ಲಪಟಾಯಿಸಿ ಮಾರಾಟ ಮಾಡುತ್ತಿದ್ದ ಆರೋಪಿ ಮಹಿಳೆಯೋರ್ವಳನ್ನು ಕೊಣಾಜೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಅಲ್ಲದೆ ಕಳವು ಚಿನ್ನಾಭರಣಗಳನ್ನು ಖರೀದಿ ಮಾಡುತ್ತಿದ್ದ ಆರೋಪಿಯನ್ನೂ ಪೊಲೀಸರು ಬಂಧಿಸಿದ್ದಾರೆ.
ಇವರಿಬ್ಬರಿಂದ ಸುಮಾರು 83 ಗ್ರಾಂ ತೂಕದ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ಉಳ್ಳಾಲ ಕೋಡಿಯ ಮಿನ್ನತ್(39) ಹಾಗೂ ಮಾಡೂರಿನ ಯೋಗೀಶ್ ಆಚಾರ್ಯ ಎಂದು ಗುರುತಿಸಲಾಗಿದೆ.
ಮದುವೆ ಹಾಲ್‌ಗಳಲ್ಲಿ ಮಕ್ಕಳ ಚಿನ್ನಾಭರಣ ಕಳವಾದ ಬಗ್ಗೆ ಸೋಮವಾರಂದು ಮಹಿಳೆಯರಿಬ್ಬರು ಕೊಣಾಜೆ ಪೊಲೀಸ್ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಸಾರ್ವಜನಿಕರಿಂದ ಮಾಹಿತಿಯನ್ನು ಪಡೆದುಕೊಂಡು ಉಳ್ಳಾಲ ಕೋಡಿಯ ಮಿನ್ನತ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತೊಕ್ಕೊಟ್ಟಿನ ಯುನಿಟಿ, ದೇರಳಕಟ್ಟೆಯ ಬಿಸಿಸಿ ಹಾಗೂ ತಿಪ್ಲೆಪದವಿನ ಅಲ್‌ಮದೀನ ಹಾಲ್‌ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಗಳಲ್ಲಿ ಭಾಗವಹಿಸಿ ಯಾರಿಗೂ ತಿಳಿಯದಂತೆ ಮಕ್ಕಳ ಚಿನ್ನಾಭರಣಗಳನ್ನು ಎಗರಿಸುತ್ತಿದ್ದ ವಿಷಯ ಬೆಳಕಿಗೆ ಬಂದಿದೆ.
ಈಕೆಯಿಂದ ಸುಮಾರು 60 ಗ್ರಾಂ ತೂಕದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.
ಈಕೆ ಕಳವು ನಡೆಸಿದ ಆಭರಣಗಳನ್ನು ಮಾಡೂರಿನ ಯೋಗಿಶ್ ಆಚಾರ್ಯ ಎಂಬಾತನಿಗೆ ಮಾರಾಟ ಮಾಡುತ್ತಿದ್ದಳು. ಕಳ್ಳತನ ನಡೆಸಿದ ಚಿನ್ನಾಭರಣ ಎಂದು ತಿಳಿದಿದ್ದೂ ಆಭರಣ ಖರೀದಿಸುತ್ತಿದ್ದ ಆತನನ್ನು ವಶಕ್ಕೆ ಪಡೆದ ಪೊಲೀಸರು ಆತನ ಬಳಿ ಇದ್ದ ಸುಮಾರು 23 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.