ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ : ಜಿಲ್ಲಾ ನ್ಯಾಯಾಲಯಕ್ಕೆ ಹಸ್ತಾಂತರ
ಉಡುಪಿ, ಡಿ.27: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣವನ್ನು ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯವು ಇಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಸ್ತಾಂತರಿಸಿದ್ದು, ಇನ್ನು ಮುಂದೆ ಈ ಪ್ರಕರಣದ ಎಲ್ಲ ಕಾನೂನು ಪ್ರಕ್ರಿಯೆಗಳು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಲ್ಲಿ ನಡೆಯಲಿವೆ.
ಮಂಗಳೂರಿನ ಸಬ್‌ಜೈಲಿನಲ್ಲಿದ್ದ ಪ್ರಕರಣದ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ, ನಿರಂಜನ್ ಭಟ್ ಅವರ 14ದಿನಗಳ ನ್ಯಾಯಾಂಗ ಬಂಧನ ಅವಧಿ ಇಂದಿಗೆ ಮುಗಿದ ಹಿನ್ನೆಲೆಯಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು.
ನ್ಯಾಯಾಧೀಶ ರಾಜೇಶ್ ಕರ್ಣಂ ಪ್ರಕರಣವನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಸ್ತಾಂತರಿಸಿದ ಹಿನ್ನೆಲೆಯಲ್ಲಿ ಮುಂದೆ ನೀಡುವ ನೋಟೀಸ್‌ನಂತೆ ಆರೋಪಿಗಳನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ಸದ್ಯಕ್ಕೆ ಅವರ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ.
ಜಾಮೀನಿನಲ್ಲಿ ಬಿಡುಗಡೆಯಾಗಿರುವ ಸಾಕ್ಷ ನಾಶ ಆರೋಪಿಗಳಾದ ಶ್ರೀನಿವಾಸ ಭಟ್ ಹಾಗೂ ರಾಘವೇಂದ್ರ ಮುಂದಿನ ವಿಚಾರಣೆಗಳಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರಾಗುವುದಾಗಿ ಬಾಂಡ್ ಬರೆದು ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಶಾಂತ ರಾಮ್ ಶೆಟ್ಟಿ ಹಾಜರಿದ್ದರು. ಕೊಲೆ, ಅತ್ಯಾಚಾರ ಸಹಿತ ಘೋರ ಅಪರಾಧ ಪ್ರಕರಣಗಳ ವಿಚಾರಣೆ ಪ್ರಕ್ರಿಯೆಗಳು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಲ್ಲಿಯೇ ನಡೆಯುತ್ತವೆ.