×
Ad

‘ನಮಗೆ ಸರಕಾರದ ಮದ್ಯ ಬೇಡ ;ನಮ್ಮ ಆಹಾರ ದೊಂದಿಗೆ ಬದುಕಲು ಅವಕಾಶ ನೀಡಿ ’

Update: 2016-12-27 21:57 IST

ಮಂಗಳೂರು ,ಡಿ.26: ಬುಡಕಟ್ಟು ಜನರು ಸರಕಾರದ ಪರವಾನಿ ಹೊಂದಿದ (ಕೆಮಿಕಲ್ ಯುಕ್ತ) ಮದ್ಯದ ದಾಸರಾಗಿ ತಮ್ಮ ಅಲ್ಪ ಸ್ವಲ್ಪ ದುಡಿದ ಸಂಪತ್ತನ್ನು ಕಳೆದು ಕೊಂಡು,ಆರೋಗ್ಯವನ್ನು ಕಳೆದುಕೊಂಡು ರೋಗ ಪೀಡಿತರಾಗಿ ಸಾಯುತ್ತಿದ್ದಾರೆ.  ನಮಗೆ ನಾವು ತಿನ್ನುತ್ತಿದ್ದ ಆಹಾರ ನಾವೇ ತಯಾರಿಸುತ್ತಿದ್ದ ಪಾನೀಯದೊಂದಿಗೆ ಬದಕಲು ಬಿಡಿ ಎಂದು ರಾಜ್ಯ ಬುಡ ಕಟ್ಟು ಮತ್ತು ಗಿರಿಜನ ಅಭಿವೃದ್ಧಿ ಸಹಕಾರಿ ಸಂಘಗಳ ಅಧ್ಯಕ್ಷ ಕೃಷ್ಣಯ್ಯ ತಿಳಿಸಿದ್ದಾರೆ.

 ಆದಿವಾಸಿಗಳ ಮೂಲ ಸಂಸ್ಕೃತಿ,ಮೂಲ ಪರಿಕರಗಳನ್ನು ಹೊಸ ಪೀಳಿಗೆಗೆ ಪರಿಚಯ ಮಾಡುವ ನಿಟ್ಟಿನಲ್ಲಿ ಈ ರೀತಿಯ ಸಮಾವೇಶಗಳು ಹೆಚ್ಚು ನಡೆಯಬೇಕಾಗಿದೆ.ಈ ಬಾರಿ ಮೂರು ದಿನಗಳ ಕಾಲ ನಡೆದಿದೆ ಮುಂದೆ ಇನ್ನೂ ಎರಡು ಹೆಚ್ಚು ದಿನಗಳ ಕಾಲ ನಡೆದರೆ ಉತ್ತಮ. ಆದಿವಾಸಿಗಳಲ್ಲಿ ಇತ್ತೀಚೆಗೆ ಕುಡಿತದ ಚಟಕ್ಕೆ ಬೀಳುವವರು ಹೆಚ್ಚಾಗಿದೆ.  ಸರಕಾರದ ಕೆಮಿಕಲ್ ಹಾಕಿದ ಮದ್ಯವನ್ನು ಸೇವಿಸುವುದರಿಂದ ನಮ್ಮವರ ಸಂತಾನ ವಿನಾಶದ ಅಂಚಿಗೆ ಸಾಗುತ್ತಿದ್ದಾರೆ.  ಈ ನಿಟ್ಟಿನಲ್ಲಿ ನಮ್ಮ ಜನರಲ್ಲಿ ಜಾಗೃತಿ ಮೂಡಿಸಲು ಸರಕಾರದ ಇಲಾಖೆಯ ಸಹಕಾರ ಬೇಕಾಗಿದೆ ಎಂದು ಕೃಷ್ಣಯ್ಯ ತಿಳಿಸಿದ್ದಾರೆ.
                       

ನಮ್ಮ ಜನರು ಕಾಡಿನಲ್ಲಿ ಜೇನು ಸಂಗ್ರಹಿಸಿ ಅದನ್ನು ಹಂಚಿ ತಿನ್ನತ್ತಿದ್ದೆವು.  ನಾಳೆಗೆ ಎಂದು ಸಂಗ್ರಹಿಸಿಡುವ ದುರಾಸೆ ಇಲ್ಲ .  ಕಾಡಿನ ಸಂಪತ್ತು ಎಲ್ಲರಿಗೆ ಸೇರಿದ್ದು ಎಂದು ನಾವು ನಂಬಿದ ಜನ ಈ ರೀತಿಯ ನಂಬಿಕೆ ಮೌಲ್ಯಗಳು ನಮ್ಮಲ್ಲಿದ್ದರೂ ಇತ್ತೀಚೆಗೆ ನಮ್ಮ ಜನರು ಸರಕಾರದ ಲೈಸನ್ಸ್ ಹೊಂದಿರುವ ಮದ್ಯವನ್ನು ಸೇವಿಸಿ ಆರೊಗ್ಯ ಹಾಳುಮಾಡಿಕೊಳ್ಳುತ್ತಿದ್ದಾರೆ. ನಾವೇ ತಯಾರಿಸುತ್ತಿದ್ದ ಪಾನೀಯದಿಂದ ನಮ್ಮವರು ರೋಗಗ್ರಸ್ಥರಾಗಿರಲಿಲ್ಲ. ಆದುದರಿಂದ ನಮ್ಮ ಅಹಾರ ,ಪಾನೀಯ ಸಂಸ್ಕೃತಿಯ ಬಗ್ಗೆ ,ಮೂಲ ಧರ್ಮದ ಬಗ್ಗೆ ಹೆಚ್ಚಿನ ಸಂಶೋಧನೆ ಆಗಬೇಕಾಗಿದೆ. ನಾವು ಆರ್ಯರಲ್ಲ , ದ್ರಾವಿಡ ಸಮುದಾಯಕ್ಕೆ ಸೇರಿದವರು ಎನ್ನುವ ಬಗ್ಗೆ ಹೇಳುತ್ತಿದ್ದಾರೆ. ಈ ಬಗ್ಗೆ ಹೆಚ್ಚು ಮಾಹಿತಿ ನಮ್ಮ ಮುಂದಿನ ಪೀಳಿಗೆಗೆ ದೊರೆಯಬೇಕು.  ನಮ್ಮ ಜನರು ಹೆಚ್ಚು ಸುಶಿಕ್ಷಿತರು,ಆರೋಗ್ಯವಂತರೂ ಆಗಬೇಕಾಗಿದೆ ಎಂದು ಕೃಷ್ಣಯ್ಯ ತಿಳಿಸಿದರು.

ಸಮಾರೋಪ ಸಮಾರಂಭದಲ್ಲಿ ಎರಡು ದಿನಗಳ ಕಾಲ ಕಾರ್ಯಕ್ರಮ ನೀಡಿದ 47 ತಂಡಗಳಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನು ಅತಿಥಿಗಳು ನೀಡಿ ಗೌರವಿಸಿದರು. ವೇದಿಕೆಯಲ್ಲಿ ಪಾಂಡಿಚೇರಿ ವಿ.ವಿ.ಯ ಡೀನ್ ಸುಬ್ರಹ್ಮಣ್ಯ ನಾಯ್ಡು, ಸಮಗ್ರ ಗಿರಿಜನಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಡಾ.ಬಿ.ಎಸ್.ಹೇಮಲತಾ ಮೊದಲಾದವರು ಉಪಸ್ಥಿತರಿದ್ದರು.
  
  ‘ಗಿಡ ಮೂಲಿಕೆ ಸಂಗ್ರಹಿಸುವುದು ಕಷ್ಟವಾಗಿದೆ ’-ಹಕ್ಕಿಪಿಕ್ಕಿ ಮಹಿಳೆಯ ಅಳಲು

ನಾವು ಕಾಡನ್ನೇ ನಂಬಿ ಬದುಕಿದವರು.ನಮಗೆ ಓದು ಬರಹ ಇಲ್ಲ. ನಮ್ಮ ತಂದೆ ತಾಯಿ ಅಜ್ಜ ಮುತ್ತಾತನ ಕಾಲದಿಂದಲೂ ಕಾಡಿನ ಗಿಡ ಬಳ್ಳಿ ಬೇರು,ನರಿಚರ್ಮ ಇತರ ಗಿಡ ಮೂಲಿಕೆ ಸಂಗ್ರಹ ಮಾಡಿ ಅದರಿಂದ ಮುದ್ದು ತಯಾರಿಸಿ ಮಾರಾಟ ಮಾಡಿ ಬದುಕುತ್ತಿದ್ದೆವು.ಈಗ ಅದಕ್ಕೂ ತೊಂದರೆ ಆಗಿದೆ.ನಮ್ಮನ್ನು ಕಾಡಿನ ಒಳಗೆ ಬಿಡ್ತಾ ಇಲ್ಲ , ಕಾರ್ಡ್ ಕೇಳ್ತಾರೆ ..ನಾವು ಎಲ್ಲಿಂದ ತರಲಿ ಎಂದು ಹಕ್ಕಿಪಕ್ಕಿ ಜನಾಂಗದ ಮಹಿಳೆ ನೆಗಿನಾ ತಮ್ಮ ಅಳಲನ್ನು ಪತ್ರಿಕೆಯೊಂದಿಗೆ ತೋಡಿಕೊಂಡರು.

ಮಳೆಗಾಲದಲ್ಲಿ ಗಿಡ ಚಿಗುರಿದಾಗ ಅದನ್ನು ಸಂಗ್ರಹಿಸಿ ಮೂಲಿಕೆ ಮಾಡಿ ಇಟ್ಟು ಕೊಳ್ತಿವಿ...ಬೇಸಗೆಯಲ್ಲಿ ಅದೂ ಸಿಗುವುದಿಲ್ಲ.ಸೋಂಕಿನ ಗಿಡ ..ನಾಗದಾಳಿ ಬೇಕಾದರೆ ಕಾಡಿಗೆ ಹೊಗಬೇಕು.  ಅದನ್ನು ತರಲು ಹೋದಾಗ ನಮ್ಮನ್ನು ತಡೆಯುತ್ತಾರೆ. ನಮಗೆ ಓದು ಗೊತ್ತಿಲ್ಲ. ಮೊದಲು ಊರಿಗೆ ಹೋಗಿ ರಾಗಿ ಭಿಕ್ಷೆ ಬೇಡ್ತಾ ಇದ್ದೆವು.ಅದನ್ನುತಂದು ಮರದ ಕೆಳಗೆ ಕಲ್ಲಿನ ಒಲೆ ಮೇಲೆ ಪಾತ್ರೆ ಇಟ್ಟು ಬೆಂಕಿ ಹಚ್ಚಿ ಬೇಯಿಸಿ ಮಕ್ಕಳಿಗೆ ಕೊಟ್ಟು ಬದುಕುತ್ತಿದ್ದೆವು. ಈಗ ನಮ್ಮ ಸೊಸೈಟಿಯಲ್ಲಿ ಒಬ್ಬರಿಗೆ ಮೂರು ಕೆ.ಜಿ.ಅಕ್ಕಿ ಕೊಡ್ತಾರೆ ಬೇರೇನು ಇಲ್ಲ. ನಮ್ಮ ಬಟ್ಟೆ ,ಬೇರೆ ಕಡೆ ಬಸ್ಸಿಗೆ ಹೋಗಬೇಕಾದರೆ ನಮ್ಮ ಬಳಿ ಹಣ ಇಲ್ಲ ಸಂಪಾದನೆಯೂ ಇಲ್ಲದಂತಾಗಿದೆ . ಬೇಡ್ತೇವೆ ಕೊಟ್ಟರೆ ತಿನ್ನುತ್ತೀವೆ . ಇಲ್ಲದಿದ್ದರೆ ಹಾಗೆ ಮಲಗಿದ ದಿನಗಳು ಇವೆ ....ನಮ್ಮ ಬದುಕೇ ಹೀಗೆ...ಅಲ್ಲಿ ಹೋಗಿ ಕುಣಿಬೇಕು ಅಂದ್ರೆ ಸ್ವಲ್ಪ ಒಳ್ಳೆ ಬಟ್ಟೆ ನಾದ್ರೂಬೇಕಲ್ಲಾ ನಮ್ಮ ಬಳಿ ಅವೆಲ್ಲಾ ಇಲ್ಲ..ನಾವು ಹಾಗೆ ವೇದಿಕೆಗೆ ಹೋಗಿಲ್ಲ.ಇಲ್ಲಿ ಗಿಡ ಮೂಲಿಕೆ ಮಾರಾಟ ಮಾಡೋಣ ಅಂತ ಬಂದಿವೀ...ಎಂದು ಹಕ್ಕಿ ಪಿಕ್ಕಿ ಜನಾಂಗದ ಗಿಡ ಮೂಲಿಕೆಯ ನಾಟಿ ಔಷಧಿ ಪರಿಣತಿ ಪಡೆದ ನೆಗಿನಾ ಹೇಳುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News