ಹಳಿ ತಪ್ಪಿದ ರೈಲು: ಕನಿಷ್ಠ ಇಬ್ಬರು ಮೃತ, 43 ಮಂದಿಗೆ ಗಾಯ

Update: 2016-12-28 04:40 GMT

ಕಾನ್ಪುರ, ಡಿ.28: ಇಲ್ಲಿಂದ ಸುಮಾರು 70 ಕಿ.ಮೀ. ಸಮೀಪದ ರೂರ ರೈಲ್ವೇ ನಿಲ್ದಾಣದ ಸಮೀಪ ಅಜ್ಮೀರ್-ಸಿಯಲ್ದಾಹ್ ಎಕ್ಸ್ ಪ್ರೆಸ್ ರೈಲಿನ 14 ಬೋಗಿಗಳು ಬುಧವಾರ ಬೆಳಗ್ಗಿನ ಜಾವ ಹಳಿ ತಪ್ಪಿದೆ. ಅಪಘಾತದಲ್ಲಿ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ. ಒಂದು ವರದಿಯ ಪ್ರಕಾರ ಈ ಅಪಘಾತದಲ್ಲಿ ಕನಿಷ್ಠ 43 ಪ್ರಯಾಣಿಕರಿಗೆ ಗಾಯಗಳಾಗಿವೆ.

 

ಅಪಘಾತಕ್ಕೆ ಕಾರಣವೇನೆಂದು ಸದ್ಯಕ್ಕೆ ತಿಳಿದು ಬಂದಿಲ್ಲ. ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಅಪಘಾತ ಸುಮಾರು ಇಂದು ಬೆಳಗ್ಗೆ 6 ಗಂಟೆ ಹೊತ್ತಿಗೆ ನಡೆದಿದೆಯೆಂದು ಹೇಳಲಾಗಿದೆ. ಬರಡಾದ ಕಾಲುವೆಯೊಂದರ ಮೇಲಿನ ಸೇತುವೆಯನ್ನು ರೈಲು ದಾಟುತ್ತಿದ್ದಾಗ ಅಪಘಾತ ಸಂಭವಿಸಿದೆಯೆಂದು ಹಿರಿಯ ರೈಲ್ವೇ ಅಧಿಕಾರಿಯೊಬ್ಬರು ಹೇಳಿದ್ದಾರೆ.

"ರೈಲು ದುರಂತದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, ಇತರ 43 ಮಂದಿಗೆ ತೀವ್ರ ಗಾಯವಾಗಿದೆ. ಕೋಚ್‌ನಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿತ್ತು.ಆದರೆ, ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ'' ಎಂದು ಹಿರಿಯ ಪೊಲೀಸ್ ಅಧಿಕಾರಿ ಝಾಕಿ ಅಹ್ಮದ್ ತಿಳಿಸಿದ್ದಾರೆ

ಇದೇ ವೇಳೆ, ದುರಂತದ ಬಗ್ಗೆ ಶೋಕ ವ್ಯಕ್ತಪಡಿಸಿರುವ ರೈಲ್ವೆ ಸಚಿವ ಸುರೇಶ್ ಪ್ರಭು, ಗಾಯಾಳುಗಳಿಗೆ ತಕ್ಷಣವೇ ವೈದ್ಯಕೀಯ ಉಪಚಾರ ಮಾಡಲಾಗುತ್ತದೆ. ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

ಭಾರತೀಯ ರೈಲ್ವೇಸ್ ಹೆಲ್ಪ್‌ಲೈನ್‌ನ್ನು ತೆರೆದಿದೆ.

ಉತ್ತರ ಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯಲ್ಲಿ ಇಂಧೋರ್-ಪಾಟ್ನಾ ಎಕ್ಸ್ ಪ್ರೆಸ್ ರೈಲು ಗಾಡಿಯ 14 ಬೋಗಿಗಳು ಹಳಿತಪ್ಪಿ 140ಕ್ಕೂ ಹೆಚ್ಚು ಜನ ಸಾವಿಗೀಡಾಗಿ 200ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡ ಘಟನೆ ನಡೆದು ತಿಂಗಳಾಗುವಷ್ಟರಲ್ಲಿ ಇನ್ನೊಂದು ರೈಲು ಅಪಘಾತಕ್ಕೀಡಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News