ಕುಂಬಳೆ: ಅಪಘಾತಕ್ಕೊಳಗಾದ ವ್ಯಾನ್‌ಗೆ ಬೆಂಕಿ; ಇಬ್ಬರು ಮೃತ್ಯು
ಕಾಸರಗೋಡು, ಡಿ.28: ಬಸ್ ಮತ್ತು ಕೋಳಿ ಸಾಗಾಟದ ವ್ಯಾನ್‌ವೊಂದರ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಇನ್ನೊಬ್ಬರು ಗಾಯಗೊಂಡ ದಾರುಣ ಘಟನೆ ಇಂದು ಮುಂಜಾನೆ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಸಮೀಪದ ಮೊಗ್ರಾಲ್ ಕೊಪ್ಪಳ ಬಝಾರ್‌ನಲ್ಲಿ ನಡೆದಿದೆ.
ಮೃತಪಟ್ಟವರನ್ನು ವ್ಯಾನ್ ಚಾಲಕ ಪರಪ್ಪಪಳ್ಳಂಜಿ ನಿವಾಸಿ ಉಜ್ವಲ್ ನಾಥ್(19) ಮತ್ತು ನೌಕರ ಚೆರ್ಕಳ ಬಾಲಡ್ಕದ ಮಸೂದ್(21) ಎಂದು ಗುರುತಿಸಲಾಗಿದೆ.
ಅಪಘಾತದ ತೀವ್ರತೆಗೆ ವ್ಯಾನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಉರಿದಿದೆ. ಇದೇ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ಸಮೀಪದ ಮನೆಯ ಗೋಡೆಗೆ ಢಿಕ್ಕಿ ಹೊಡೆದಿದೆ.
ಕುಂಬಳೆ ಕಡೆಯಿಂದ ಕಾಸರಗೋಡಿನತ್ತ ಬರುತ್ತಿದ್ದ ಮಾರುತಿ ಇಕೋ ವ್ಯಾನ್ ಮತ್ತು ತಿರುವನಂತಪುರದಿಂದ ಮಣಿಪಾಲಕ್ಕೆ ತೆರಳುತ್ತಿದ್ದ ವೋಲ್ವೊ ಬಸ್ ನಡುವೆ ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಬಸ್ ಚಾಲಕ ಗಾಯಗೊಂಡಿದ್ದಾರೆ. ಆತನನ್ನು ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವ್ಯಾನ್‌ನಲ್ಲಿದ್ದ ಎಂಟು ಬಾಕ್ಸ್ ಕೋಳಿಗಳು ಅಸುನೀಗಿವೆ.
ಸ್ಥಳೀಯರು, ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಯನ್ನು ನಂದಿಸಿ ವ್ಯಾನ್‌ನ ಬಾಗಿಲು ಒಡೆದು ಅದರೊಳಗೆ ಇದ್ದ ಇಬ್ಬರನ್ನು ಹೊರತೆಗೆದಿದ್ದಾರೆ. ಆದರೆ ಅದಾಗಲೇ ಅವರಿಬ್ಬರೂ ಮೃತಪಟ್ಟಿದ್ದರು.
ಇಬ್ಬರ ಮೃತದೇಹ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.