ಮೆಲ್ಬೋರ್ನ್ ಟೆಸ್ಟ್: ಅಝರ್ ಅಲಿ ಅಜೇಯ ದ್ವಿಶತಕ
ಮೆಲ್ಬೋರ್ನ್,ಡಿ.28: ಆಸ್ಟ್ರೇಲಿಯ ಹಾಗೂ ಪಾಕಿಸ್ತಾನದ ನಡುವೆ ಇಲ್ಲಿ ನಡೆಯುತ್ತಿರುವ ಎರಡನೆ ಟೆಸ್ಟ್ ಪಂದ್ಯ ಡ್ರಾದತ್ತ ಮುಖ ಮಾಡಿದೆ.
ಪಾಕಿಸ್ತಾನದ ಮೊದಲ ಇನಿಂಗ್ಸ್ 9ಕ್ಕೆ 443 ರನ್‌ಗೆ ಉತ್ತರವಾಗಿ ಆತಿಥೇಯ ಆಸೀಸ್ 3ನೆ ದಿನದಾಟದಂತ್ಯಕ್ಕೆ 3 ವಿಕೆಟ್‌ಗಳ ನಷ್ಟಕ್ಕೆ 278 ರನ್ ಗಳಿಸಿ ಮರು ಹೋರಾಟ ನೀಡಿದೆ. ಉಸ್ಮಾನ್ ಖ್ವಾಜಾ(ಅಜೇಯ 95) ಹಾಗೂ ನಾಯಕ ಸ್ಟೀವನ್ ಸ್ಮಿತ್ ಅಜೇಯ 10 ರನ್ ಗಳಿಸಿದ್ದಾರೆ. ನಾಲ್ಕನೆ ದಿನವಾದ ಗುರುವಾರ ಭಾರೀಮಳೆಯಾಗುವ ಸಾಧ್ಯತೆಯಿರುವ ಕಾರಣ ಪಂದ್ಯ ಡ್ರಾಗೊಳ್ಳುವ ನಿರೀಕ್ಷೆಯಿದೆ.
ಎರಡನೆ ವಿಕೆಟ್‌ಗೆ 198 ರನ್ ಜೊತೆಯಾಟ ನಡೆಸಿದ ಡೇವಿಡ್ ವಾರ್ನರ್(144 ರನ್, 143 ಎಸೆತ, 17 ಬೌಂಡರಿ,1 ಸಿಕ್ಸರ್) ಹಾಗೂ ಖ್ವಾಜಾ ಆಸೀಸ್ ತಂಡವನ್ನು ಫಾಲೋ ಆನ್ ಭೀತಿಯಿಂದ ಪಾರು ಮಾಡಿದರು.
ಜನವರಿ ಬಳಿಕ ಮೊದಲ ಶತಕ ಬಾರಿಸಿದ ವಾರ್ನರ್ ಟೆಸ್ಟ್‌ನಲ್ಲಿ 5000 ರನ್ ಪೂರೈಸಿದರು.
ಅಲಿ ಅಜೇಯ 205: ಇದಕ್ಕೆ ಮೊದಲು 6 ವಿಕೆಟ್‌ಗೆ 310 ರನ್‌ನಿಂದ ಪ್ರಥಮ ಇನಿಂಗ್ಸ್ ಮುಂದುವರಿಸಿದ ಪಾಕಿಸ್ತಾನ ಆರಂಭಿಕ ದಾಂಡಿಗ ಅಝರ್ ಅಲಿ ಬಾರಿಸಿದ ಅಜೇಯ ದ್ವಿಶತಕ(205 ರನ್, 364 ಎಸೆತ, 20 ಬೌಂಡರಿ) ನೆರವಿವಿನಿಂದ 9 ವಿಕೆಟ್‌ಗಳ ನಷ್ಟಕ್ಕೆ 443 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದೆ.
ಚೊಚ್ಚಲ ಅರ್ಧಶತಕ ಬಾರಿಸಿದ ಸೊಹೈಲ್ ಖಾನ್(65) ಅವರೊಂದಿಗೆ 8ನೆ ವಿಕೆಟ್‌ಗೆ 118 ರನ್ ಜೊತೆಯಾಟ ನಡೆಸಿದ ಅಝರ್ ಅಲಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಭೋಜನ ವಿರಾಮದ ಬಳಿಕ ಅಝರ್ ದ್ವಿಶತಕ ಪೂರೈಸಿದರು. ರಿಯಾಝ್ ಔಟಾದ ತಕ್ಷಣ ಪಾಕ್ ನಾಯಕ ಮಿಸ್ಬಾವುಲ್ ಹಕ್ ಇನಿಂಗ್ಸ್ ಡಿಕ್ಲೇರ್ ಮಾಡಿದರು. ಅಲಿ ಎಂಸಿಜಿ ಸ್ಟೇಡಿಯಂನಲ್ಲಿ ದ್ವಿಶತಕ ಬಾರಿಸಿದ ವಿದೇಶದ ನಾಲ್ಕನೆ ಬ್ಯಾಟ್ಸ್‌ಮನ್ ಹಾಗೂ ಪಾಕ್‌ನ ಮೊದಲ ದಾಂಡಿಗ ಎನಿಸಿಕೊಂಡರು.
ಅಲಿ ಇನ್ನೂ 5 ರನ್ ಗಳಿಸಿದ್ದರೆ, ಎಂಸಿಜಿಯಲ್ಲಿ ವಿಂಡೀಸ್ ದಂತಕತೆ ವಿವಿಯನ್ ರಿಚರ್ಡ್ಸ್ ದಾಖಲಿಸಿದ್ದ ಗರಿಷ್ಠ ಸ್ಕೋರ್ ದಾಖಲೆಯನ್ನು ಮುರಿಯಬಹುದಿತ್ತು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ ಪ್ರಥಮ ಇನಿಂಗ್ಸ್: 443/9 ಡಿಕ್ಲೇರ್
(ಅಝರ್ ಅಲಿ ಅಜೇಯ 205, ಅಸದ್ ಶಫೀಕ್ 50, ಸೊಹೈಲ್ ಖಾನ್ 65, ಹೇಝಲ್‌ವುಡ್ 3-50, ಬರ್ಡ್ 3-113)
ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್: 278/2
(ಡೇವಿಡ್ ವಾರ್ನರ್ 144, ಉಸ್ಮಾನ್ ಖ್ವಾಜಾ ಅಜೇಯ 95, ಯಾಸಿರ್ 1-97, ರಿಯಾಝ್ 1-77)
ಅಂಕಿ-ಅಂಶ
01: ವರ್ಷವೊಂದರಲ್ಲಿ ಎರಡು ಬಾರಿ 200 ಹಾಗೂ ಅದಕ್ಕಿಂತ ಹೆಚ್ಚು ವೈಯಕ್ತಿಕ ಸ್ಕೋರ್ ದಾಖಲಿಸಿದ ಪಾಕ್‌ನ ಮೊದಲ ಬ್ಯಾಟ್ಸ್‌ಮನ್ ಅಝರ್ ಅಲಿ. ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಅಜೇಯ 205 ರನ್ ಗಳಿಸಿರುವ ಅಲಿ ಅಕ್ಟೋಬರ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧದ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಅಜೇಯ 302 ರನ್ ಗಳಿಸಿದ್ದರು.
01: ಅಲಿ ಎಂಸಿಜಿಯಲ್ಲಿ ದ್ವಿಶತಕ ಬಾರಿಸಿದ ಪ್ರವಾಸಿ ತಂಡದ ಮೊದಲ ಆರಂಭಿಕ ಬ್ಯಾಟ್ಸ್‌ಮನ್. 2003-04ರಲ್ಲಿ ಭಾರತದ ವೀರೇಂದ್ರ ಸೆಹ್ವಾಗ್ 195 ರನ್ ಗಳಿಸಿದ್ದರು. ಒಟ್ಟಾರೆ ಎಂಸಿಜಿಯಲ್ಲಿ ದ್ವಿಶತಕ ಬಾರಿಸಿದ 3ನೆ ದಾಂಡಿಗ ಅಝರ್. ಜಸ್ಟಿನ್ ಲಾಂಗರ್ ಹಾಗೂ ಬಿಲ್ಲಿ ಲಾರಿ ಈ ಸಾಧನೆ ಮಾಡಿದ್ದಾರೆ.
32: ಎಂಸಿಜಿಯಲ್ಲಿ 32 ವರ್ಷಗಳ ಬಳಿಕ ಪ್ರವಾಸಿ ತಂಡದ ಬ್ಯಾಟ್ಸ್‌ಮನ್ ಅಲಿ ದ್ವಿಶತಕ ಬಾರಿಸಿದ್ದಾರೆ. 32 ವರ್ಷಗಳ ಹಿಂದೆ ವಿಂಡೀಸ್ ದಂತಕತೆ ವಿವಿಯನ್ ರಿಚರ್ಡ್ಸ್ 208 ರನ್ ಗಳಿಸಿದ್ದರು.
01: ಪಾಕಿಸ್ತಾನ ತಂಡ ಕಳೆದ 5 ಟೆಸ್ಟ್‌ಪಂದ್ಯಗಳಲ್ಲಿ ಇದೇ ಮೊದಲ ಬಾರಿ ಆಸ್ಟ್ರೇಲಿಯದ ವಿರುದ್ಧ 400ಕ್ಕೂ ಅಧಿಕ ರನ್ ದಾಖಲಿಸಿದೆ.
118: ಅಲಿ ಹಾಗೂ ಸೊಹೈಲ್ ಖಾನ್ ಆಸೀಸ್ ವಿರುದ್ಧ 8ನೆ ವಿಕೆಟ್‌ನಲ್ಲಿ ಗರಿಷ್ಠ ಜೊತೆಯಾಟ ನಡೆಸಿ ಪಾಕ್ ಆಟಗಾರರಾಗಿದ್ದಾರೆ.