ಬಿಎಸ್ಪಿ ನಾಯಕನಿಗೆ ಚಪ್ಪಲಿಯೆಸೆದ ಯುವಕ: ಕಾರ್ಯಕರ್ತರಿಂದ ಮಾರಣಾಂತಿಕ ಹಲ್ಲೆ

Update: 2016-12-28 12:09 GMT

ಬಾಂದಾ,ಡಿ.28: ಉತ್ತರಪ್ರದೇಶ ವಿಪಕ್ಷ ನಾಯಕ ಹಾಗೂ ಬಿಎಸ್ಪಿ ಧುರೀಣ ಗಯಾಚರಣ್ ದಿನಕರ್‌ಗೆ ಬಹುಜನ ಸಮಾಜವಾದಿ ಪಾರ್ಟಿ(ಬಿಎಸ್ಪಿ) ಹಿಂದುಳಿದ ವರ್ಗ ಸೌಹಾರ್ದ ಸಮ್ಮೇಳನದಲ್ಲಿ ಯುವಕನೊಬ್ಬ ಚಪ್ಪಲಿ ಎಸೆದ ಘಟನೆ ನಡೆದಿದೆ.

ಬಿಎಸ್ಪಿ ಕಾರ್ಯಕರ್ತರು ಆರೋಪಿ ಯುವಕನನ್ನು ಮಾರಣಾಂತಿಕವಾಗಿ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದರೆಂದು ತಿಳಿದು ಬಂದಿದೆ.

 ಉತ್ತರ ಪ್ರದೇಶ ಬಾಂದಾ ನಗರದಲ್ಲಿ ಬಿಎಸ್ಪಿ ವತಿಯಿಂದ ಹಿಂದುಳಿದ ವರ್ಗ ಸೌಹಾರ್ದ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ದಿನಕರ್ ಸಮ್ಮೇಳನವನ್ನು ಉದ್ದೇಶಿಸಿ ಮಾತಾಡುತ್ತಿದ್ದರು. ಈ ನಡುವೆ ವೇದಿಕೆ ಬಳಿಯಿದ್ದ ಬಾಂದಾ ಮಡಿಯಾನ ಎಂಬಲ್ಲಿನ ಮಹೇಶ್ವರ ಪ್ರಜಾಪತಿ ಎಂಬಾತ ದಿನಕರ್‌ರತ್ತ ಚಪ್ಪಲಿ ತೂರಿದ್ದಾನೆ. ಆತನೆಸದ ಚಪ್ಪಲಿ ವೇದಿಕೆಗೆ ಬೀಳಲಿಲ್ಲ. ಆದರೆ, ಕಾರ್ಯಕ್ರಮದಲ್ಲಿ ಗಾಬರಿಗೆ ಕಾರಣವಾಗಿದ್ದು, ಕಾರ್ಯಕ್ರಮ ಅಸ್ತವ್ಯಸ್ತಗೊಂಡಿತ್ತು.

 ಯುವಕನ ವರ್ತನೆಗೆ ಕೋಪಗೊಂಡ ಬಿಎಸ್ಪಿ ಕಾರ್ಯಕರ್ತರು ಆತನಿಗೆ ಯದ್ವಾತದ್ವಾ ಹೊಡೆದಿದ್ದಾರೆ. ಆತನ ಹಣೆಯಿಂದ ರಕ್ತ ಸುರಿಯುತ್ತಿತ್ತು. ನಂತರ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ನಡುವೆ ಯುವಕ ಕೆಲವು ಸಂಗಡಿಗರನ್ನು ಸೇರಿಸಿ ಕಾರ್ಯಕ್ರಮವನ್ನು ಹಾಳುಗೆಡವಲು ಬಂದಿದ್ದ ಎಂದು ಬಿಎಸ್ಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News