ಮುತ್ತೂಟ್ ಫೈನಾನ್ಸ್‌ನಿಂದ 45 ಕೆ.ಜಿ ಚಿನ್ನ ದೋಚಿದ ನಕಲಿ ಸಿಬಿಐ ಅಧಿಕಾರಿಗಳು

Update: 2016-12-28 12:14 GMT

ಹೈದರಾಬಾದ್,ಡಿ.28: ಬುಧವಾರ ನಾಲ್ವರು ಅಪರಿಚಿತ ವ್ಯಕ್ತಿಗಳು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಇಲ್ಲಿಯ ಮುತ್ತೂಟ್ ಫೈನಾನ್ಸ್ ಕಚೇರಿಯಿಂದ 45 ಕೆ.ಜಿ. ಚಿನ್ನವನ್ನು ಲೂಟಿ ಮಾಡಿದ್ದಾರೆ.

 ನಗರದ ಹೊರವಲಯದ ರಾಮಚಂದ್ರಾಪುರಂನಲ್ಲಿರುವ ಕಂಪನಿಯ ಶಾಖಾ ಕಚೇರಿ ಸಿಬ್ಬಂದಿಗಳಿಗೆ ಪಿಸ್ತೂಲು ತೋರಿಸಿ ಜೀವ ಬೆದರಿಕೆಯೊಡ್ಡಿದ ದುಷ್ಕರ್ಮಿಗಳು ಸುಮಾರು 12 ಕೋ.ರೂ.ವೌಲ್ಯದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ.

ಬೆಳಿಗ್ಗೆ ಕಚೇರಿಯನ್ನು ಪ್ರವೇಶಿಸಿದ ನಾಲ್ವರು ವ್ಯಕ್ತಿಗಳು ತಾವು ಸಿಬಿಐ ಅಧಿಕಾರಿಗಳೆಂದು ಸಿಬ್ಬಂದಿಗೆ ಪರಿಚಯಿಸಿಕೊಂಡು, ದಾಖಲೆಗಳು ಮತ್ತು ಲಾಕರ್‌ಗಳಲ್ಲಿರುವ ಚಿನ್ನಾಭರಣ ಗಳ ತಪಾಸಣೆ ನಡೆಸಬೇಕಾಗಿದೆ ಎಂದು ಹೇಳಿದ್ದರು.

ಆದರೆ ಹಿರಿಯ ಅಧಿಕಾರಿಗಳ ಅನುಮತಿಯಿಲ್ಲದೆ ತಾವು ಲಾಕರ್‌ನ್ನು ತೆರೆದು ತೋರಿಸುವಂತಿಲ್ಲ ಎಂದು ಸಿಬ್ಬಂದಿಗಳು ಹೇಳಿದಾಗ, ಸಿಬಿಐ ಅಧಿಕಾರಿಗಳ ಆದೇಶವನ್ನು ಪಾಲಿಸದಿದ್ದಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅಪರಿಚಿತರು ಬೆದರಿಸಿದ್ದರು.

ಇದಕ್ಕೆ ಮಣಿದ ಸಿಬ್ಬಂದಿಗಳು ಲಾಕರ್‌ನ್ನು ತೆರೆದು ತೋರಿಸಿದ್ದರು. ಈ ವೇಳೆ ದುಷ್ಕರ್ಮಿಗಳು ಅದರಲ್ಲಿದ್ದ ಚಿನ್ನಾಭರಣಗಳನ್ನು ತಮ್ಮ ಬ್ಯಾಗುಗಳಲ್ಲಿ ತುಂಬಿಕೊಳ್ಳತೊಡಗಿದಾಗ ಸಿಬ್ಬಂದಿಗಳು ಆಕ್ಷೇಪಿಸಿದ್ದರು. ಅವರ ಪೈಕಿ ಓರ್ವ ಪಿಸ್ತೂಲನ್ನು ಹೊರತೆಗೆದು ಸಿಬ್ಬಂದಿಗಳಿಗೆ ಬೆದರಿಸಿ, ಬಳಿಕ ಅವರನ್ನೆಲ್ಲ ಬಾತ್‌ರೂಮಿನಲ್ಲಿ ಕೂಡಿ ಹಾಕಿದ್ದರೆ ಇತರರು ದೋಚುವ ಕಾರ್ಯವನ್ನು ಸಾಂಗವಾಗಿ ಪೂರ್ಣಗೊಳಿಸಿದ್ದರು.

ಕಚೇರಿಯೊಳಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳ ಹಾರ್ಡ್ ಡಿಸ್ಕ್‌ಗಳನ್ನೂ ಲೂಟಿಕೋರರು ಹೊತ್ತೊಯ್ದಿದ್ದಾರೆ.

ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾಗಿದ್ದು, ಅವರನ್ನು ಪತ್ತೆ ಹಚ್ಚಲು ಐದು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ವ್ಯಾಪಕ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಶಾಂಡಿಲ್ಯ ಅವರು ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News