ಎತ್ತಿನಹೊಳೆ ಯೋಜನೆ : ಮೊಯ್ಲಿ, ಡಿವಿ ವಿರುದ್ಧ ಪೂಜಾರಿ ಕಿಡಿ
ಮಂಗಳೂರು, ಡಿ. 28: ಎತ್ತಿನಹೊಳೆ ಯೋಜನೆಗೆ ಬೆಂಬಲವಾಗಿ ನಿಂತಿರುವ ಕರಾವಳಿಯ ಇಬ್ಬರು ಮಾಜಿ ಮಖ್ಯಮಂತ್ರಿಗಳ ಕಿಡಿಗಾರಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿ, ತಾಕತ್ತಿದ್ದರೆ ಜನತೆಯನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.
ಕರಾವಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಬಾರಿ ಮಳೆಯೂ ಸಾಕಷ್ಟು ಪ್ರಮಾಣದಲ್ಲಿ ಆಗಿಲ್ಲ. ಹೀಗಿರುವಾಗ ಮಾಜಿ ಮುಖ್ಯಮಂತ್ರಿಗಳಾದ ಡಿವಿ ಸದಾನಂದ ಗೌಡ ಮತ್ತು ಎಂ.ವೀರಪ್ಪಮೊಯ್ಲಿಯವರು ಯೋಜನೆಯ ಪರವಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಎತ್ತಿನಹೊಳೆ ಯೋಜನೆಗೆ ಪೂರಕವಾಗಿ ಮಾತನಾಡುವ ಸದಾನಂದ ಗೌಡ ಅವರು 2000 ಟಿಎಂಸಿ ನೀರು ಸಮುದ್ರ ಪಾಲಾಗುತ್ತಿದೆ ಎಂದಿದ್ದಾರೆ. ಅವರು ಈ ಹೇಳಿಕೆಯನ್ನು ಯಾವ ಅಂಕಿ ಅಂಶ ಆಧಾರದ ಮೇಲೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದೂ ಪೂಜಾರಿ ಗುಡುಗಿದ್ದಾರೆ.
ವಚನಭ್ರಷ್ಟ ಪ್ರಧಾನಿ
‘‘ಅಚ್ಛೇದಿನ್ ಬರುತ್ತದೆ. 50 ದಿನಗಳ ಕಾಲಾವಕಾಶ ಕೊಡಿ’’ ಎಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ನೀಡಿದ್ದ ಆಶ್ವಾಸನೆಯನ್ನು ಈಡೇರಿಸಲು ವಿಫಲರಾಗಿದ್ದಾರೆ. ಈಗಾಗಲೇ 50 ದಿನಗಳು ಕಳೆದಿವೆ. ಪ್ರಧಾನಿಯವರರು ಮಾತು ಪಾಲಿಸಲು ವಿಫಲರಾಗಿದ್ದಾರೆ. ವಚನಭ್ರಷ್ಟ ಪ್ರಧಾನಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಟೀಕಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಭಾರತೀಯರ ಕಪ್ಪುಹಣದ ಬಗ್ಗೆ ಸ್ವಿಸ್‌ಬ್ಯಾಂಕ್‌ನವರು ನೀಡಿರುವ ಹೆಸರುಗಳ ಪಟ್ಟಿಯನ್ನು ಜನತೆಯ ಮುಂದಿಡಬೇಕು. ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೋ ಅವರ ಬಗ್ಗೆ ತನಿಖೆಯಾಗಲಿ ಎಂದರು.
ಇಂದು ದೇಶಾದ್ಯಂತ ಬಡವರು, ಮಧ್ಯಮ ವರ್ಗದವರು ತಮ್ಮ ಹಣ ಹಿಂಪಡೆಯಲು ಬ್ಯಾಂಕ್, ಎಟಿಎಂಗಳ ಮುಂದೆ ಸರದಿ ಸಾಲಲ್ಲಿ ನಿಲ್ಲುತ್ತಿದ್ದಾರೆ. ಬ್ಯಾಂಕ್, ಎಟಿಎಂಗಳಲ್ಲಿ ಹಣ ಇಲ್ಲ. ಸರಿಯಾದ ಸಿದ್ಧತೆ ನಡೆಸದೆ ಹಠಾತ್ ಆಗಿ ನೋಟು ಅಮಾನ್ಯಗೊಳಿಸಿರುವುದರಿಂದ ಬಡವರು ಮತ್ತು ಮಧ್ಯಮ ವರ್ಗದವರು ಬೆಲೆ ತೆರುವಂತಾಗಿದೆ ಎಂದು ಪೂಜಾರಿ ಹೇಳಿದರು.