ತನ್ನ ಪುತ್ರಿಯ ಅಂತಿಮ ಸಂಸ್ಕಾರಕ್ಕೆ ಮೊದಲು ಆಕೆಯ ಆಸೆ ಈಡೇರಿಸಿದ ತಂದೆಯ ಜತೆ ಇಡೀ ಊರೇ ಕಣ್ಣೀರಿಟ್ಟಿತು!
ಕೊಚ್ಚಿನ್,ಡಿ.28: ಅನಘ ಎಂಬ 12ನೆ ತರಗತಿ ವಿದ್ಯಾರ್ಥಿನಿಗೆ ಪಿಕ್ ಅಪ್ ಟ್ರಕ್ ಡಿಸೆಂಬರ್ 16ರಂದು ಡಿಕ್ಕಿ ಹೊಡೆಯಿತು. ಅದು ಎಷ್ಟು ತೀವ್ರ ಅಪಘಾತವೆಂದರೆ ತಕ್ಷಣಕ್ಕೆ ಎರಡು ಶಸ್ತ್ರಚಿಕಿತ್ಸೆ ಆಗಬೇಕಾಯಿತು. ಶಸ್ತ್ರಚಿಕಿತ್ಸೆ ಬಳಿಕ ವೆಂಟಿಲೇಟರ್‌ನಲ್ಲಿ ಇಡಲಾಯಿತು. ತಮ್ಮ ಮಗಳ ಪುನರಾಗಮನವನ್ನು ಕಾಯುತ್ತಾ ತಂದೆ ಅನಿಲ್ ಕುಮಾರ್ ಮತ್ತು ತಾಯಿ ಶಾಂತಾ ಹೊರಗೆ ಕಾಯುತ್ತಿದ್ದರು. ಇಡುಕ್ಕಿ ಜಿಲ್ಲೆಯ ಮೂಲಮಟ್ಟಂ ಗ್ರಾಮವಿಡೀ ಆಕೆ ಗುಣಮುಖವಾಗುವಂತೆ ಪ್ರಾರ್ಥಿಸಿತು. ಆದರೆ ಡಿಸೆಂಬರ್ 23ರಂದು ಆಕೆಯ ಆರೋಗ್ಯಸ್ಥಿತಿ ಕ್ಷೀಣಿಸಿ, ಆಕೆಯ ಜೀವವನ್ನು ಬಲಿ ಪಡೆಯಿತು. ಆಕೆಯ ಆಸ್ಪತ್ರೆ ಶುಲ್ಕವನ್ನು ಭರಿಸುವ ಚೈತನ್ಯ ಅನಿಲ್‌ಗೆ ಇರಲಿಲ್ಲ. ಆಕೆಗಾಗಿ ಗ್ರಾಮ 10 ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿತು.
ಕೊನೆಯ ಆಸೆ
ಅನಿಲ್ ಕೆಳಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ತಮ್ಮ ಸಣ್ಣ ಉಳಿತಾಯದಿಂದ ಆಕೆಯ ಇಚ್ಛೆಗೆ ವಿರುದ್ಧವಾಗಿ ನೆಕ್ಲೆಸ್ ಖರೀದಿಸಿ ಉಡುಗೊರೆಯಾಗಿ ನೀಡಿದ್ದರು. ತಿಂಗಳ ಹಿಂದೆ ಅನಘಾಳ ಚಿನ್ನದ ನೆಕ್ಲೆಸ್ ಅಡವಿಟ್ಟು, ಸಾಲ ಪಡೆದಿದ್ದರು. ಇದನ್ನು ಕ್ರಿಸ್‌ಮಸ್‌ಗೆ ಮುನ್ನ ಮರಳಿ ತರುವುದಾಗಿ ಆಕೆಗೆ ಆಶ್ವಾಸನೆ ಕೊಟ್ಟಿದ್ದರು.
ಡಿಸೆಂಬರ್ 23ರಂದು ವೈದ್ಯರು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡುವುದಾಗಿ ಹೇಳಿದರು. ಆಗ ತಂದೆಗೆ ತಮ್ಮ ಆಶ್ವಾಸನೆ ನೆನಪಿಗೆ ಬಂತು. ಕ್ಷಣಮಾತ್ರದಲ್ಲೇ ಹಣ ಹೊಂದಿಸಿ ಮಗಳ ಚಿನ್ನದ ನೆಕ್ಲೆಸ್ ವಾಪಾಸು ಪಡೆದರು. ಅದು ಅವರ ಜೇಬಿನಲ್ಲೇ ಉಳಿಯಿತು. ಆಕೆ ಅದನ್ನು ಧರಿಸಬೇಕು ಎನ್ನುವುದು ಅವರ ಆಸೆಯಾಗಿತ್ತು.
ಡಿಸೆಂಬರ್ 25ರಂದು ಅನಘಾ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಶಾಲೆಯ ಆವರಣದಲ್ಲಿ ಇಡಲಾಗಿತ್ತು. ಶವದ ಪಕ್ಕದಲ್ಲಿ ಅನಿಲ್ ಹೊಸ, ದುಬಾರಿ ಶರ್ಟ್ ಧರಿಸಿ ನಿಂತಿದ್ದರು. ಏಕೆಂದರೆ ಮಗಳು ಸದಾ ಅದನ್ನು ಬಯಸುತ್ತಿದ್ದಳು. ಅವರ ಜೇಬಿನಲ್ಲಿ ಚಿನ್ನದ ನೆಕ್ಲೆಸ್ ಹಾಗೆಯೇ ಉಳಿದಿತ್ತು. ಕಣ್ಣುಗಳಲ್ಲಿ ನೀರು ತುಂಬಿತ್ತು. ಅವರು ಮಗಳ ಕೊನೆಯ ಆಸೆ ಈಡೇರಿಸಿದ್ದರು. ಆಕೆಯ ಕಾಲಿಗೆ ಕಾಲುಚೈನು ಕಟ್ಟಿದರು. ಅದರೊಂದಿಗೇ ಅಂತ್ಯಸಂಸ್ಕಾರ ನೆರವೇರಿಸಿದರು. ಇಡೀ ಗ್ರಾಮ ಈ ದೃಶ್ಯ ನೋಡಿ ಕಣ್ಣೀರಿಟ್ಟಿತು.