ಮುಂಬೈ ವಿಮಾನ ನಿಲ್ದಾಣದಲ್ಲಿ ರೂ.69 ಲಕ್ಷ ವಶ: ನಾಲ್ವರ ಬಂಧನ
ಮುಂಬೈ, ಡಿ.28: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮುಂಬೈ ಕಸ್ಟಂಸ್ ಅಧಿಕಾರಿಗಳಿಂದು ಒಟ್ಟು ಸುಮಾರು 69 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ರೂ.25 ಲಕ್ಷ ಮೊತ್ತದ ರೂ.2 ಸಾವಿರದ ನೋಟುಗಳು ಸೇರಿವೆ.
ಇಂದು ನಸುಕಿನ ವೇಳೆ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಂಸ್‌ನ ವಾಯುಯಾನ ಗುಪ್ತಚರ ಘಟಕವು ಈ ಹಣವನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ನಾಲ್ವರನ್ನು ಬಂಧಿಸಿದೆ.
ಮೊದಲ ಪ್ರಕರಣದಲ್ಲಿ ಹೈದರಾಬಾದ್‌ನಿಂದ ಮುಂಬೈಗೆ ಆಗಮಿಸಿದ್ದ ಶೇಖ್ ವಾಹೀದ್ ಅಲಿ, ಮುಹಮ್ಮದ್ ಸೊಹೈಲ್ ಹಾಗೂ ಶೇಖ್ ಪಾಷ ಎಂಬವರಿಂದ ರೂ.43 ಲಕ್ಷ ವೌಲ್ಯದ ವಿದೇಶಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಅಲಿಯ ಚೀಲಗಳ ಕೂಲಂಕಷ ಪರಿಶೀಲನೆಯಿಂದ 1,39,000 ಸೌದಿ ರಿಯಾಲ್‌ಗಳು, 5,65,000 ಯುಎಇ ದಿರ್ಹಾಂಗಳು ಹಾಗೂ 14,000 ಆಸ್ಟ್ರೇಲಿಯನ್ ಡಾಲರ್‌ಗಳು ಪತ್ತೆಯಾದವು. ಅವುಗಳ ಒಟ್ಟು ವೌಲ್ಯ ರೂ.43.97 ಲಕ್ಷವಾಗಿದೆಯೆಂದು ಕಸ್ಟಂಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಣವನ್ನು ವೃತ್ತ ಪತ್ರಿಕೆಯಲ್ಲಿ ಸುತ್ತಿ ಅವರ ಚೆಕ್-ಇನ್ ಬ್ಯಾಗೇಜ್‌ನಲ್ಲಿ ಅಡಗಿಸಿಡಲಾಗಿತ್ತು.
ಕಳೆದ ವಾರ ಸೌದಿ ಅರೇಬಿಯಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿಂದ ವಿದೇಶಿ ಹಣವನ್ನು ತಂದಿದ್ದೇವೆಂದು ಆರೋಪಿತ್ರಯ ಹೇಳಿಕೆ ನೀಡಿದೆ. ಆದರೆ, ಹಣವನ್ನು ಕಸ್ಟಂಸ್‌ನ ಮುಂದೆ ಘೋಷಿಸಿರಲಿಲ್ಲ.
ಕಸ್ಟಂಸ್ ಕಾಯ್ದೆ ಹಾಗೂ ವಿದೇಶಿ ವಿನಿಮಯ ಪ್ರಬಂಧನ ಕಾಯ್ದೆಗಳನ್ವಯ ಪ್ರಕರಣ ದಾಖಲಿಸಿದ ಬಳಿಕ ಅವರನ್ನು ಬಂಧಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ದುಬೈಗೆ ಹೋಗುತ್ತಿದ್ದ ಆರಿಫ್ ಕೊಯಂಟೆ ಎಂಬಾತನಿಂದ ರೂ.2000 ಮುಖಬೆಲೆಯ ನೋಟುಗಳಲ್ಲಿದ್ದ ರೂ.25 ಲಕ್ಷ ಹಣವನ್ನು ವಶಪಡಿಸಿಕೊಂಡ ಬಳಿಕ ಆತನನ್ನು ಬಂಧಿಸಲಾಗಿದೆ.
ಆತನ ಚೀಲವನ್ನು ಹುಡುಕಿದಾಗ ಬಿಳಿ ಕಾಗದದ 52 ಲಕೋಟೆಗಳಲ್ಲಿರಿಸಿದ್ದ 1,250 ಹೊಸ ನೋಟುಗಳು ಪತ್ತೆಯಾದವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೀಫ್‌ನ ವಿರುದ್ಧವೂ ಕಸ್ಟಂಸ್ ಹಾಗೂ ಫೆಮಾ ಕಾಯ್ದೆಗಳನ್ವಯ ಪ್ರಕರಣ ದಾಖಲಿಸಲಾಗಿದೆ.